T20 World Cup 2024: ಅಭಿಮಾನಿಗಳಿಗೆ ರಸದೌತಣ; ಜೂ.15 ರಂದು ನಡೆಯಲ್ಲಿವೆ 3 ಪಂದ್ಯಗಳು.

2024ರ ಟಿ20 ವಿಶ್ವಕಪ್‌ನಲ್ಲಿ ಅರ್ಧಪ್ರಯಾಣ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇಷ್ಟು ದಿನ ದಿನವೊಂದಕ್ಕೆ 1 ಅಥವಾ 2 ಪಂದ್ಯಗಳು ಹೆಚ್ಚಾಗಿ ನಡೆದಿದ್ದವು. ಆದರೆ  ಜೂನ್ 15 ರಂದು ಬರೋಬ್ಬರಿ 3 ಪಂದಗಳು ನಡೆಯಲ್ಲಿವೆ.

ಜೂನ್ 15 ರಂದು ನಡೆಯಲ್ಲಿರುವ 3 ಪಂದ್ಯಗಳಲ್ಲಿ ಟೀಂ ಇಂಡಿಯಾದ ಪಂದ್ಯವೂ ಸೇರಿದೆ. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆನಡಾ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಇನ್ನೂ ಎರಡು ಪಂದ್ಯಗಳು ನಡೆಯಲಿವೆ.

ಜೂನ್ 15 ರಂದು ದಿನದ ಮೊದಲ ಪಂದ್ಯ ನೇಪಾಳ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ. ಉಭಯ ತಂಡಗಳು ಶನಿವಾರ ಬೆಳಗ್ಗೆ 5 ಗಂಟೆಗೆ ಕಿಂಗ್‌ಸ್ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಮೊದಲ ಬಾರಿಗೆ ಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ದಕ್ಷಿಣ ಆಫ್ರಿಕಾ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ. ಈ ಮೂಲಕ ಸೂಪರ್-8ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅದೇ ವೇಳೆ ನೇಪಾಳ ತಂಡಕ್ಕೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ತಂಡ ಸೂಪರ್-8 ರೇಸ್‌ನಿಂದ ಹೊರಗುಳಿದಿದೆ.

ಎರಡನೇ ಪಂದ್ಯ ಅಂದರೆ, ಟಿ20 ವಿಶ್ವಕಪ್‌ನ 32ನೇ ಪಂದ್ಯ ನ್ಯೂಜಿಲೆಂಡ್ ಮತ್ತು ಉಗಾಂಡಾ ನಡುವೆ ನಡೆಯಲಿದೆ. ಈ ಪಂದ್ಯವು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಎರಡೂ ತಂಡಗಳು ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ಈ ಎರಡೂ ತಂಡಗಳು ಸೂಪರ್-8 ರೇಸ್‌ನಿಂದ ಹೊರಗುಳಿದಿವೆ. ನ್ಯೂಜಿಲೆಂಡ್ ತನ್ನ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದುವರೆಗೆ 2 ಪಂದ್ಯಗಳನ್ನು ಆಡಿರುವ ಕಿವೀಸ್ ಪಡೆ, ಎರಡೂ ಪಂದ್ಯಗಳಲ್ಲು ಸೋಲು ಕಂಡಿದೆ. ಇತ್ತ ಉಗಾಂಡಾ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ದಿನದ ಮೂರನೇ ಮತ್ತು ಕೊನೆಯ ಪಂದ್ಯ ಭಾರತ ಮತ್ತು ಕೆನಡಾ ನಡುವೆ ನಡೆಯಲಿದೆ. ಎರಡೂ ತಂಡಗಳು ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನಡೆಯಲಿದೆ. ಟೀಮ್ ಇಂಡಿಯಾ ಈಗಾಗಲೇ ಸೂಪರ್ -8 ಗೆ ಅರ್ಹತೆ ಪಡೆದಿದೆ. ಇತ್ತ ಕೆನಡಾ ತಂಡ ಈಗಾಗಲೇ ಸೂಪರ್-8 ರೇಸ್‌ನಿಂದ ಹೊರಗುಳಿದಿದೆ.

Source : https://tv9kannada.com/sports/cricket-news/t20-world-cup-2024-3-matches-are-going-to-happen-on-june-15th-kannada-news-psr-850393.html

 

Leave a Reply

Your email address will not be published. Required fields are marked *