ಕೊಲಂಬೊ: 2026ರ ಟಿ20 ವಿಶ್ವಕಪ್ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ವಿಜಯ ಸಾಧಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ರೋಚಕ ಕದನದಲ್ಲಿ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ಜಯಭೇರಿ ಬಾರಿಸಿದೆ. 176 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ, ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 114 ರನ್‌ಗಳಿಗೆ ಸರ್ವಪತನ ಕಂಡಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಸೂಪರ್ 8 ಸುತ್ತಿಗೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ.
ಪಂದ್ಯದ ಸುತ್ತಲಿನ ಹೈಡ್ರಾಮಾ:
ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟ ಐಸಿಸಿ ನಿರ್ಧಾರವನ್ನು ವಿರೋಧಿಸಿ, ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧ ಆಡದಿರಲು ನಿರ್ಧರಿಸಿತ್ತು. ಇದರಿಂದಾಗಿ ಈ ಪಂದ್ಯ ನಡೆಯುವುದೇ ಅನುಮಾನ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಪಾಕ್ ಮಂಡಳಿಯ ಮನವೊಲಿಸುವಲ್ಲಿ ಐಸಿಸಿ ಯಶಸ್ವಿಯಾಯಿತು. ಕೊನೆಗೂ ಮೈದಾನಕ್ಕಿಳಿದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಆಟದ ಮೂಲಕವೇ ತಕ್ಕ ಪ್ರತ್ಯುತ್ತರ ನೀಡಿತು.
ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ, ಕ್ರೀಸ್‌ಗೆ ಇಳಿದ ‘ಪಾಕೆಟ್ ಡೈನಮೋ’ ಇಶಾನ್ ಕಿಶನ್ ಪಾಕ್ ಬೌಲರ್‌ಗಳ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಕಿಶನ್, ಕೇವಲ 40 ಎಸೆತಗಳಲ್ಲಿ 77 ರನ್ ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ (32 ರನ್) ಮತ್ತು ತಿಲಕ್ ವರ್ಮಾ (25 ರನ್) ತಾಳ್ಮೆಯ ಆಟವಾಡಿದರು. ಅಂತಿಮ ಓವರ್‌ಗಳಲ್ಲಿ ಶಿವಂ ದುಬೆ (27 ರನ್) ಹಾಗೂ ರಿಂಕು ಸಿಂಗ್ (11 ರನ್) ಅವರ ಬಿರುಸಿನ ಆಟದ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 175 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಪಾಕ್ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್:
176 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೂ ಆರಂಭಿಕ ಆಘಾತ ಎದುರಾಯಿತು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಪೆವಿಲಿಯನ್‌ಗೆ ಅಟ್ಟಿದರು. ನಂತರದ ಓವರ್‌ನಲ್ಲಿ ಜಾಗತಿಕ ಕ್ರಿಕೆಟ್‌ನ ಶ್ರೇಷ್ಠ ಬೌಲರ್ ಜಸ್ಪ್ರೀತ್ ಬುಮ್ರಾ, ಸ್ಯಾಮ್ ಅಯೂಬ್ ಹಾಗೂ ನಾಯಕ ಸಲ್ಮಾನ್ ಅಘಾ ಅವರನ್ನು ಬಲಿಪಡೆಯುವ ಮೂಲಕ ಪಾಕ್ ಪಡೆಯ ಬೆನ್ನೆಲುಬು ಮುರಿದರು.
ಭಾರತದ ವೇಗಿಗಳು ಹಾಗೂ ಸ್ಪಿನ್ನರ್‌ಗಳ ಜಂಟಿ ದಾಳಿಗೆ ಸಿಲುಕಿದ ಪಾಕ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಉಸ್ಮಾನ್ ಖಾನ್ (44 ರನ್) ಹೊರತುಪಡಿಸಿ ಉಳಿದ್ಯಾವ ಆಟಗಾರನೂ ಕ್ರೀಸ್‌ನಲ್ಲಿ ನಿಲ್ಲುವ ಸಾಹಸ ಮಾಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು.
ಬೌಲಿಂಗ್ ವಿಭಾಗದ ಮಿಂಚಿನ ಪ್ರದರ್ಶನ:
ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಗೆಲುವಿನ ದಾಖಲೆಯನ್ನು 8-1ಕ್ಕೆ ಏರಿಸಿಕೊಂಡಿದೆ.