ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕೊನೆಗೂ ಗೆಲುವಿನ ಖಾತೆ ತೆರೆದಿದ್ದು, ಮಂಗಳವಾರ ಕೆನಡಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ನ್ಯೂಯಾರ್ಕ್: 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕೊನೆಗೂ ಗೆಲುವಿನ ಖಾತೆ ತೆರೆದಿದ್ದು, ಮಂಗಳವಾರ ಕೆನಡಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೂಪ್ ಹಂತದಲ್ಲಿ ಎಲಿಮನೇಟ್ ಆಗುವ ಭೀತಿಯಿಂದ ಹೊರಬಂದಿದೆ.
ಇಂದು ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ ಆರೋನ್ ಜಾನ್ಸನ್ ಅವರ ಏಕೈಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು.
ಗೆಲುವಿಗೆ 107 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ, ಮೊಹಮ್ಮದ್ ರಿಜ್ವಾನ್ ಅವರ ಅಜೇಯ ಅರ್ಧಶತಕದ ನೆರವಿನಿಂದ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಪಾಕ್ ಪರ, ಆರಂಭಿಕರಾದ ಸೈಮ್ ಅಯುಬ್ 6 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ಸ್ಟಾರ್ ಜೋಡಿ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಮ್ ಅವರು 2 ವಿಕೆಟ್‌ಗೆ 63 ರನ್‌ಗಳ ಜೊತೆಯಾಟವಾಡಿದರು.
ಮೊಹಮ್ಮದ್ ರಿಜ್ವಾನ್ 53 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ಅಜೇಯ 53 ರನ್ ಬಾರಿಸಿದರು. ಉಳಿದಂತೆ ಫಖರ್ ಜಮಾನ್ 4 ರನ್ ಮತ್ತು ಉಸ್ಮಾನ್ ಖಾನ್ 2 ರನ್ ಗಳಿಸಿದರು.
Source : https://www.kannadaprabha.com/cricket/2024/Jun/11/t20-world-cup-pakistan-beats-canada-by-7-wickets