ಚಿತ್ರದುರ್ಗ,ಆ.01:
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾದವತಿಯಿಂದ ನಗರದಲ್ಲಿ ಶುಕ್ರವಾರ ತಮಟೆ ಚಳುವಳಿ ನಡೆಸಲಾಯಿತು.
ನಗರದ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ಆಗಮಿಸಿದ ಪ್ರತಿಭಟನಕಾರರು ದಾರಿ ಉದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ, ಚಿತ್ರದುರ್ಗದಲ್ಲಿ ಹೊಲಸೆ ಬಂದ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಸಮುದಾಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಜಿಲ್ಲೆಯಲ್ಲಿ ಏನೇ ದೌರ್ಜನ್ಯ ನಡೆದರೂ ಕೂಡ ಅಲ್ಲಿಗೆ ಹೋಗಿ ನೊಂದವರಿಗೆ ಸಾಂತ್ವಾನ ಹೇಳುವುದು ಜಿಲ್ಲೆಯ ಮಾದಿಗ ಸಮುದಾಯ ಆಗಿದೆ. ಇಂದು ಮಾಜಿ ಸಂಸದರು ಕರೆದಿರುವ ಹೋರಾಟಕ್ಕೆ ಜಿಲ್ಲೆಯ ಯಾವ ಮಾದಿಗ ಸಂಘಟನೆಗಳನ್ನು ಕರೆದಿಲ್ಲ. ತಮಗೆ ಬೇಕಾದಂತಹ ನಾಲ್ಕು ಜನ ಹಿಂಬಾಲಕರನ್ನು ಹಿಡಿದುಕೊಂಡು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತೆಗಳಿದರು.
ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಎರಡು ಇಲ್ಲವಾಗಿದೆ. ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ನ್ಯಾಯಾಲಯ ನೀಡಿದ ಸೂಚನೆ ಅನ್ವಯ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ನೀಡಲು ಮುಂದಾಗಿದ್ದರು ಸಹ ಅದು ವಿಳಂಬ ಆಗುತ್ತಿದೆ. ಇದನ್ನು ವಿರೋಧಿಸಿ ಹೋರಾಟ ಮಾಡಲಾಗಿತ್ತಿದೆ ಎಂದರು.
ರಾಜ್ಯ ಸರ್ಕಾರ ಶೀಘ್ರವಾಗಿ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಾದಿಗ ಮಹಾಸಭಾದಿಂದ ಹೋರಾಟವನ್ನು ತೀವ್ರಗೊಳಿಸಿ ಮೀಸಲಾತಿಯನ್ನು ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶ್ರೀನಿವಾಸ್ ಬಾಳೆಕಾಯಿ, ಷೋಶಿತ ಸಮಾಜದ ರಾಜ್ಯಾಧ್ಯಕ್ಷ ರಾಜಪ್ಪ, ಕರುನಾಡು ವಿಜಯ ಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಕಣಿವೆಮಾರಮ್ಮ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಾಜು, ವಿಶ್ವ ನಾರಾಯಾಣ ಮೂರ್ತಿ, ಜಗದೀಶ, ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.