ಸೈಬರ್ ವಂಚಕರ ಸುಳ್ಳು ಕೇಳಿ ಹೃದಯಸ್ತಂಭನದಿಂದ ಶಿಕ್ಷಕಿ ಸಾವು.

ಸೈಬರ್​ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರು ಸುಳ್ಳು ಹೇಳಿ ಹಣವನ್ನು ಲೂಟಿ ಮಾಡಿದರೆ ಇನ್ನೂ ಕೆಲವರು ಜೀವಕ್ಕೇ ಕುತ್ತು ತರುವಂತಹ ಕೆಲಸ ಮಾಡಿದ್ದಾರೆ. ಆಗ್ರಾದ ಶಾಲಾ ಶಿಕ್ಷಕಿಯೊಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ ನಿಮ್ಮ ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಾಳೆ ಎಂದು ಸುಳ್ಳು ಹೇಳಿದ್ದು ಅದನ್ನು ಕೇಳಿ ಆಘಾತಕ್ಕೊಳಗಾದ ತಾಯಿ ಹೃದಯಸ್ತಂಭನದಿಂದ ಪ್ರಾಣಬಿಟ್ಟಿದ್ದಾರೆ.

ಸೆಪ್ಟೆಂಬರ್ 30 ರಂದು ವಂಚಕರು ಶಿಕ್ಷಕರಿಗೆ ಬೆದರಿಕೆ ಹಾಕಿದರು ಮತ್ತು ವಿಷಯವನ್ನು ಬಹಿರಂಗಪಡಿಸದಂತೆ 1 ಲಕ್ಷ ನೀಡುವಂತೆ ಒತ್ತಾಯಿಸಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರ ಮಗ ದೀಪಾಂಶು ಮಾತನಾಡಿ, ತಾಯಿ ಮಾಲತಿ ಶರ್ಮಾ, ಆಗ್ರಾದ ಅಚ್ನೇರಾದ ಜ್ಯೂನಿಯರ್ ಹೈಸ್ಕೂಲ್​ನಲ್ಲಿ ಶಿಕ್ಷಕಿಯಾಗಿದ್ದರು. ಸೆ.30ರಂದು ಮಧ್ಯಾಹ್ನ 12 ಗಂಟೆಗೆ ವಾಟ್ಸಾಪ್ ಕರೆಯ ನಂತರ ಅವರು ಭಯಗೊಂಡಿದ್ದರು. ಆಮೇಲೆ ಹಣಕೊಡುವಂತೆ  ವಂಚಕರು ಪೀಡಿಸಿದ್ದರು.

ಅದಾದ ಬಳಿಕ ಅಮ್ಮ ನಮ್ಮ ಬಳಿ ಈ ವಿಚಾರ ಹೇಳಿದ್ದರು, ಆ ನಂಬರ್ ಪೊಲೀಸರಿಗೆ ನೀಡಿ ವಿಚಾರಿಸಿದಾಗ ಅದು ಸೈಬರ್ ವಂಚಕರ ಕರೆ ಎಂಬುದು ತಿಳಿದುಬಂದಿದೆ. ಆಮೇಲೆ ಸಹೋದರಿ ಬಳಿ ಮಾತನಾಡಿ, ಎಲ್ಲವೂ ಸರಿಯಾಗಿದೆ ಯಾವುದೇ ಸಮಸ್ಯೆಯಿಲ್ಲ ಎಂಬುದು ಕೇಳಿ ಸಮಾಧಾನವಾಗಿತ್ತು.

ಸೈಬರ್​ ಕ್ರೈಂ ಬಗ್ಗೆ ನೀವು ಚಿಂತಿಸಬೇಡಿ ಎಂದು ಅಮ್ಮನಿಗೆ ತಿಳಿ ಹೇಳಿದೆ, ಆದರೆ ಆಕೆಯ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ, ಆರೋಗ್ಯ ಹದಗೆಡಲು ಶುರು ಮಾಡಿತ್ತು. ಶಾಲೆ ಮುಗಿಸಿ ಹಿಂದಿರುಗುವಾಗ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದೇವೆ, ಆದರೆ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಗ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಜಗದೀಶ್‌ಪುರ ಠಾಣೆ ಪ್ರಭಾರಿ ಆನಂದವೀರ್‌ ಸಿಂಗ್‌, ಕುಟುಂಬದಿಂದ ದೂರು ಸ್ವೀಕರಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Source : https://tv9kannada.com/national/uttar-pradesh-woman-dies-of-cardiac-arrest-after-scammers-lie-about-daughters-sex-racket-kannada-news-nyr-912932.html

Leave a Reply

Your email address will not be published. Required fields are marked *