
ಸ್ಕೂಲ್(School) ಗೆ ಹೋಗುವ ಮಕ್ಕಳ ಕಂಪ್ಲೇಂಟ್ (Complaint) ಏನಿರುತ್ತೆ? ಈ ಪ್ರಶ್ನೆಯನ್ನು ಪಾಲಕರಿಗೆ ಕೇಳಿದ್ರೆ, ಆ ಟೀಚರ್ ಸರಿ ಇಲ್ಲ, ಈ ಟೀಚರ್ ಕಲಿಸಿದ್ದು ಅರ್ಥವಾಗಲ್ಲ, ಸ್ನೇಹಿತರು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳಲ್ಲ, ಅಪ್ಪ ಅಮ್ಮ ಹೆಚ್ಚು ಓದು ಅಂತ ಒತ್ತಡ ಹಾಕ್ತಾರೆ ಹೀಗೆ ಸಣ್ಣಪುಟ್ಟ ಕಂಪ್ಲೇಂಟ್ ಹೇಳ್ತಾರೆ ಅಂತ ಪಾಲಕರು ಭಾವಿಸ್ತಾರೆ.
ಆದ್ರೆ ಮಕ್ಕಳ ಸಮಸ್ಯೆ ದೊಡ್ಡವರು ಕಲ್ಪಿಸಿಕೊಂಡಿದ್ದಕ್ಕಿಂತ ಭಿನ್ನವಾಗಿರುತ್ತದೆ. ಶಾಲೆಗೆ ಹೋಗುವ ಮಕ್ಕಳು ಶಾಲೆಯ ಬಗ್ಗೆ ಕಂಪ್ಲೇಂಟ್ ಹೊಂದಿರ್ತಾರೆ ಅಂದ್ರೆ ಅದು ಸುಳ್ಳಾಗ್ಬಹುದು. ಅವರಿಗೆ ಶಾಲೆಗಿಂತ ಮನೆಯಲ್ಲಿಯೇ ಅನೇಕ ಸಮಸ್ಯೆಗಳಿರುತ್ವೆ. ಈ ವಿಷ್ಯ ಶಾಲೆಯೊಂದು ನಡೆಸಿದ್ದ ಟಾಸ್ಕ್ ನಿಂದ ಗೊತ್ತಾಗಿದೆ.
ಪಶ್ಚಿಮ ಬಂಗಾಳ (West Bengal )ದ ಫಣೀಂದ್ರ ದೇಬ್ ಶಾಲೆಯಲ್ಲಿ ಲೆಟರ್ ಬಾಕ್ಸ್ ಇಡಲಾಗಿತ್ತು. ಅದ್ರಲ್ಲಿ ಮಕ್ಕಳು ಹಾಕಿದ್ದ ಲೆಟರ್ ನೋಡಿ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಮುಖ್ಯೋಪಾದ್ಯಾಯ ಜಹರುಲ್ ಇಸ್ಲಾಂ ಮತ್ತು ಶಿಕ್ಷಕ ಅರಿಂದಮ್ ಭಟ್ಟಾಚಾರ್ಯ ಅವರ ಜಂಟಿ ಪ್ರಯತ್ನದಿಂದಾಗಿ ಲೆಟರ್‌ಬಾಕ್ಸ್ ತೆರೆಯಲಾಗಿತ್ತು. ಮಕ್ಕಳಿಗೆ ಅವರ ಸಮಸ್ಯೆಯನ್ನು ಚೀಟಿಯಲ್ಲಿ ಬರೆದು ಇದರೊಳಗೆ ಹಾಕುವಂತೆ ಹೇಳಲಾಗಿತ್ತು. ಮಕ್ಕಳು ಶಾಲೆ, ಶಾಲಾ ಶಿಕ್ಷಕರ ಬಗ್ಗೆ ಒಂದಿಷ್ಟು ದೂರು ನೀಡ್ತಾರೆ ಅಂತ ಎಲ್ಲ ಶಿಕ್ಷಕರು ಭಾವಿಸಿದ್ದರು. ಆದ್ರೆ ಚೀಟಿ ಓಪನ್ ಮಾಡಿದಾಗ ಅಚ್ಚರಿಯಾಗಿದೆ. ಮಕ್ಕಳು ಶಾಲೆಯ ಬಗ್ಗೆ ದೂರನ್ನು ಹೊಂದಿರಲಿಲ್ಲ. ಅವರು ಮನೆ ಸಮಸ್ಯೆಯನ್ನು ತಮ್ಮ ಲೆಟರ್ ನಲ್ಲಿ ಬರೆದಿದ್ದರು.
ಹೋಳಿ ಸಂದರ್ಭದಲ್ಲಿ ಶಾಲೆ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಈ ಲೆಟರ್ ಬಾಕ್ಸ್ ಓಪನ್ ಮಾಡಲಾಗಿದೆ. ಅದ್ರಲ್ಲಿ ಮಕ್ಕಳು ದೂರು ಏನು ಎಂಬುದನ್ನು ತಿಳಿಯುವ ಮೂಲಕ ಅವರ ಮಾನಸಿಕ ಸ್ಥಿತಿ ಸುಧಾರಿಸಿ, ಅವರಿಗೆ ಆರೋಗ್ಯಕರ ಶಾಲೆ ವಾತಾವರಣ ನೀಡುವುದು ಶಿಕ್ಷಕರ ಉದ್ದೇಶವಾಗಿತ್ತು. ಈ ಶಾಲೆಯಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅದ್ರಲ್ಲಿ 100 ವಿದ್ಯಾರ್ಥಿಗಳು ಪತ್ರ ಬರೆದು ಅದನ್ನು ಲೆಟರ್ ಬಾಕ್ಸ್ ಗೆ ಹಾಕಿದ್ದಾರೆ. ಬಹುತೇಕ ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಪತ್ರದಲ್ಲಿ ಬರೆದಿದ್ದು, ಅದನ್ನು ಗೌಪ್ಯ ರೀತಿಯಲ್ಲಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಕರು ಹೇಳಿದ್ದಾರೆ.
ಒಂದು ಪತ್ರದಲ್ಲಿ ಕ್ರೀಡೆಗೆ ಹೆಚ್ಚಿನ ಸಮಯ ನೀಡಬೇಕೆಂದು ಬರೆಯಲಾಗಿದೆ. ಇನ್ನೊಂದು ಪತ್ರದಲ್ಲಿ ನಿದ್ರೆ ಹಾಗೂ ತಾಯಿಯ ಬೈಗುಳದ ಬಗ್ಗೆ ಬರೆಯಲಾಗಿದೆ. ನಿದ್ರೆ ಬರೋದಿಲ್ಲ. ಆದ್ರೆ ತಾಯಿ ನಿದ್ರೆ ಮಾಡುವಂತೆ ಒತ್ತಾಯ ಮಾಡುವುದಲ್ಲದೆ ಬೈಯ್ಯುತ್ತಾರೆ ಎಂದು ಪತ್ರದಲ್ಲಿ ನೋವು ತೋಡಿಕೊಳ್ಳಲಾಗಿದೆ. ಇನ್ನೊಂದು ಪತ್ರದಲ್ಲಿ ವಿದ್ಯಾರ್ಥಿ ತಂದೆಯನ್ನು ಮಿಸ್ ಮಾಡಿಕೊಂಡಿದ್ದಾರೆ. ನನ್ನ ತಂದೆ ಅಸ್ಸಾಂನಲ್ಲಿ ಕೆಲಸ ಮಾಡ್ತಿದ್ದು, ತಮ್ಮೆಲ್ಲ ಸಮಯವನ್ನು ಕೆಲಸಕ್ಕೆ ಮೀಸಲಿಡ್ತಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಪಾಲಕರು ಮಕ್ಕಳಿಗೆ ಸಮಯ ನೀಡುವುದು ಎಷ್ಟು ಅಗತ್ಯ ಎಂಬುದನ್ನು ಈ ಪತ್ರ ತೋರಿಸ್ತಿದೆ.
ಮತ್ತೊಂದು ಪತ್ರದಲ್ಲಿ ಅಪ್ಪ – ಅಮ್ಮನ ಜಗಳ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಸಲಾಗಿದೆ. ವಿದ್ಯಾರ್ಥಿ, ನನ್ನ ಅಪ್ಪ – ಅಮ್ಮ ಪ್ರತಿ ದಿನ ಜಗಳ ಆಡ್ತಾರೆ. ನನಗೆ ಮನೆಗೆ ಹೋಗಲು ಇಷ್ಟವಿಲ್ಲ ಎಂದು ಬರೆದಿದ್ದಾನೆ. ಸಾಮಾನ್ಯವಾಗಿ ಪಾಲಕರು, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಆದ್ಯತೆ ನೀಡ್ತಿದ್ದಾರೆ. ಮಕ್ಕಳ ಭಾವನೆ, ಅವರ ಗೊಂದಲ, ಅವರ ಮಾನಸಿಕ ಸ್ಥಿತಿ ಬಗ್ಗೆ ಗಮನ ಹರಿಸುತ್ತಿಲ್ಲ. ಪಾಲಕರ ಕೆಲಸ, ವರ್ತನೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ಅರಿತಿರುವ ಶಾಲೆ, ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ತಂಡ ರಚಿಸಿದ್ದು, ಮಕ್ಕಳ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿದೆ.