ಎಸ್​​​ಎಸ್​​ಎಲ್​ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ: ಯಾದಗಿರಿ ಶಿಕ್ಷಕರ ವಾರ್ಷಿಕ ಬಡ್ತಿಗೆ ಕೊಕ್, ಇತರ ಜಿಲ್ಲೆಗಳ ಶಿಕ್ಷಕರಿಗೂ ಆತಂಕ.

ಯಾದಗಿರಿ, ಜೂನ್ 27: ಎಸ್​​​ಎಸ್​​ಎಲ್​ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತ ಕಾರಣ ಪ್ರೌಢಶಾಲೆ ಶಿಕ್ಷಕರಿಗೆ ಜಿ.ಪಂ ಸಿಇಓ ಗರೀಮಾ ಫನ್ವಾರ್ ಶಾಕ್ ನೀಡಿದ್ದಾರೆ. ಶಿಕ್ಷಕರ ವಾರ್ಷಿಕ ಬಡ್ತಿಗೆ (ಇಂಕ್ರಿಮೆಂಟ್) ತಡೆ ನೀಡಿ ಸಿಇಓ ಗರೀಮಾ ಫನ್ವಾರ್ ಆದೇಶ ಹೊರಡಿಸಿದ್ದಾರೆ. ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಎಲ್ಲಾ ರೀತಿಯ ಸವಲತ್ತು ನೀಡಲಾಗಿದೆ. ಆದರೂ ಫಲಿತಾಂಶವು ತೃಪ್ತಿಕರವಾಗಿಲ್ಲ. ಇದರಿಂದ ಯಾದಗಿರಿ ಜಿಲ್ಲೆ ಕೊನೆ ಸ್ಥಾನ ಬಂದಿದೆ. ಜಿಲ್ಲೆಯ ಫಲಿತಾಂಶವು ಸರಾಸರಗಿಂತ ಶೇ 54.43 ರಷ್ಟು ಕಡಿಮೆ ಬಂದಿದೆ. ಜೊತೆಗೆ ವಿಷಯವಾರುಗಿಂತಲೂ ಕಡಿಮೆ ಫಲಿತಾಂಶ ಬಂದಿದೆ. ಹಾಗಾಗಿ ಈ ಬಾರಿ ಯಾದಗಿರಿ ಜಿಲ್ಲೆಯು ಕಳಪೆ ಫಲಿತಾಂಶ ದಾಖಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯವಾರು ಶಿಕ್ಷಕರಿಗೆ ಒಂದು ವರ್ಷದ ಬಡ್ತಿಯನ್ನು ತಡೆ ನೀಡಿ ಆದೇಶ ಹೊರಡಿಸಲಾಗಿದೆ. ಸಂಬಂಧಪಟ್ಟ ಪ್ರೌಢಶಾಲಾ ಮುಖ್ಯಶಿಕ್ಷಕರ ಹಂತದಲ್ಲಿ ಕ್ರಮವಹಿಸಲು ಗರೀಮಾ ಫನ್ವಾರ್ ಆದೇಶ‌ ಹೊರಡಿಸಿದ್ದಾರೆ.

ಶಿಕ್ಷಕರ ಸಂಘ ಬೇಸರ

ಸಿಇಓ ಆದೇಶದಿಂದ ಶಿಕ್ಷಕರ ಸಮುದಾಯಕ್ಕೆ ಭಯ, ಹಿಂಜರಿಕೆ ಹಾಗೂ ಮಾನಸಿಕ ನೆಮ್ಮದಿ ಕಳೆದು ಹೋಗಿದೆ. ಈ ಫಲಿತಾಂಶ ಕಡಿಮೆ ಆಗಲು ಶಿಕ್ಷಕರೇ ಕಾರಣರಲ್ಲ. ಜಿಲ್ಲೆಯಲ್ಲಿ ಶೇ 50 ರಷ್ಟು ಶಿಕ್ಷಕರ ಕೊರತೆಯಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ನಮ್ಮ ಭಾಗದಲ್ಲಿ ಪಾಲಕರು ಗುಳೆ ಹೋಗುವುದರಿಂದ ಮಕ್ಕಳ ಗೈರು ಹಾಜರಿಯಿದೆ. ಇಷ್ಟೆಲ್ಲಾ ಕಾರಣವಿದ್ದರೂ ನಮ್ಮ ಬಡ್ತಿಗೆ ತಡೆ ಹಿಡಿದಿದ್ದಾರೆ. ನಮ್ಮ ಶಿಕ್ಷಕರ ಸಂಘದಿಂದ ಸಿಇಓ ಅವರಿಗೆ ಮನವಿ ಮಾಡಿ ಮುಂದಿನ ಹೋರಾಟ ಮಾಡುತ್ತೇವೆ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ್ ಕೆಂಭಾವಿ ಹೇಳಿದ್ದಾರೆ.

ರಾಜ್ಯದಾದ್ಯಂತ ಅನ್ವಯವಾಗಲಿದೆಯೇ?

ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಕಳಪೆ ಫಲಿತಾಂಶದ ಕಾರಣ ಇನ್​​ಕ್ರಿಮೆಂಟ್​​ ತಡೆಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕಾ ವರದಿಯೊಂದು ತಿಳಿಸಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಲಭ್ಯವಾಗಿರುವ ಮಾಹಿತಿಯಂತೆ, ಜಿಲ್ಲಾ ಸರಾಸರಿಗಿಂತ ಕಡಿಮೆ ಅಂಕ ಪಡೆದಿರುವ ವಿಷಯಗಳಲ್ಲಿ ಶಿಕ್ಷಕರ ವಾರ್ಷಿಕ ವೇತನ ಹೆಚ್ಚಳ ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರಂತೆ ಯಾದಗಿರಿ ಜಿ.ಪಂ ಸಿಇಒ ಕ್ರಮ ಕೈಗೊಂಡಿದ್ದಾರೆ.

Source : https://tv9kannada.com/karnataka/yadagiri/sslc-result-government-aided-high-school-teachers-may-lose-annual-increment-karnataka-news-in-kannada-gsp-856447.html

Leave a Reply

Your email address will not be published. Required fields are marked *