ಸಿಡ್ನಿ ಟೆಸ್ಟ್‌: ಅದೇ ರಾಗ, ಅದೇ ತಾಳ: ಬ್ಯಾಟಿಂಗ್​ನಲ್ಲಿ ಮತ್ತೆ ವೈಫಲ್ಯ, ಸಂಕಷ್ಟದಲ್ಲಿ ಟೀಂ ಇಂಡಿಯಾ.

Ind vs Aus, 5th Test: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ಇಂದಿನಿಂದ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್​ನಲ್ಲೂ ಭಾರತದ ಬ್ಯಾಟಿಂಗ್​ ವೈಫಲ್ಯ ಮುಂದುವರೆದಿದೆ.

ಟೀಂ ಇಂಡಿಯಾ ಮೊದಲ ದಿನದಾಟದಲ್ಲೇ ಕೇವಲ 185 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಇನ್ನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ಕೇವಲ 72.2 ಓವರ್‌ಗಳಷ್ಟೇ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ತಂಡದ ಪರ ರಿಷಬ್ ಪಂತ್ ಗರಿಷ್ಠ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್, ನಾಯಕ ಜಸ್ಪ್ರೀತ್ ಬುಮ್ರಾ 22 ರನ್, ಶುಭ್​ಮನ್ ಗಿಲ್ 20 ರನ್, ವಿರಾಟ್ ಕೊಹ್ಲಿ 17 ರನ್ ಮತ್ತು ಯಶಸ್ವಿ ಜೈಸ್ವಾಲ್ 10 ರನ್​ಗಳ ಕಾಣಿಕೆ ನೀಡಿದರು. ಇವರನ್ನು ಬಿಟ್ಟರೆ ಇತರ ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ನಾಲ್ಕು ರನ್, ಪ್ರಸಿದ್ಧ್ ಕೃಷ್ಣ ಮೂರು ರನ್ ಮತ್ತು ಮೊಹಮ್ಮದ್ ಸಿರಾಜ್ ಮೂರು ರನ್ ಕಲೆಹಾಕಿದರೆ, ನಿತೀಶ್ ರೆಡ್ಡಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದರೆ, ನಾಥನ್ ಲಿಯಾನ್ ಒಂದು ವಿಕೆಟ್ ಪಡೆದರು.

17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ವಿರಾಟ್ ಕೊಹ್ಲಿ: ನಾಥನ್ ಲಿಯಾನ್ ಬೌಲಿಂಗ್​ನಲ್ಲಿ ಗಿಲ್, ಸ್ಮಿತ್​ಗೆ ಕ್ಯಾಚಿತ್ತರು. ಇದರೊಂದಿಗೆ ಕೇವಲ 20 ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ವಿರಾಟ್​ ಕೊಹ್ಲಿ ಅವರದ್ದು ಅದೇ ರಾಗ ಅದೇ ತಾಳ ಎಂಬಂತೆ ಮತ್ತೊಮ್ಮೆ ಆಫ್ ಸೈಡ್​ ಬೌಲಿಂಗ್​ಗೆ ವಿಕೆಟ್​ ನೀಡಿದರು. ಈ ಪಂದ್ಯದಲ್ಲಾದರೂ ಭಾರತಕ್ಕೆ ಆಸರೆಯಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೊಹ್ಲಿ ಕೇವಲ 17 ರನ್​ಗೆ ತಮ್ಮ ಇನ್ನಿಂಗ್ಸ್​ ಮುಕ್ತಾಯಗೊಳಿಸಿದರು. ಇದರೊಂದಿಗೆ ಸ್ಕೋರ್​ 72 ರನ್​ ತಲುಪುವಷ್ಟರಲ್ಲೇ ಭಾರತ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು.​

ಈ ಸರಣಿಯಲ್ಲಿ ಆಸೀಸ್ ತಂಡ 2-1 ಅಂತರದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವುದರ ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಫೈನಲ್​ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಯೋಜನೆ ರೂಪಿಸಿದೆ.

Leave a Reply

Your email address will not be published. Required fields are marked *