IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ.

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 371 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್‌ ತಂಡ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಇದರೊಂದಿಗೆ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ವಾಸ್ತವವಾಗಿ ಟೀಂ ಇಂಡಿಯಾದ ಈ ಸೋಲಿಗೆ ಅದರ ಕಳಪೆ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು (Jasprit Bumrah) ಹೊರತುಪಡಿಸಿ ತಂಡದ ಉಳಿದ ಬೌಲರ್​ಗಳ ಕಳಪೆ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಇಲ್ಲೊಂದು ನಾಚಿಕೆಗೇಡಿನ ಸಂಗತಿಯೆಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಕೊರಳ್ಳೊಡಿದ ತಂಡವೆಂಬ ಹೀನಾಯ ದಾಖಲೆಗೆ ಟೀಂ ಇಂಡಿಯಾ ಕೊರಳೊಡ್ಡಿದೆ.

ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್

ಮತ್ತೊಂದೆಡೆ 371 ರನ್​ಗಳ ಗುರಿ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್ ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿತು. ವಾಸ್ತವವಾಗಿ ಲೀಡ್ಸ್ ಮೈದಾನದಲ್ಲಿ ಅತಿ ಹೆಚ್ಚು ರನ್‌ ಬೆನ್ನಟ್ಟಿದ ದಾಖಲೆಯನ್ನು ಇಂಗ್ಲೆಂಡ್‌ ನಿರ್ಮಿಸಿದೆ. ಇಂಗ್ಲೆಂಡ್‌ ತಂಡದ ಗೆಲುವಿನ ಶ್ರೇಯ ಆರಂಭಿಕ ಬೆನ್ ಡಕೆಟ್​ಗೆ ಸಲ್ಲುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದ ಡಕೆಟ್, ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.

ಲೀಡ್ಸ್ ಟೆಸ್ಟ್‌ನಲ್ಲಿ ಭಾರತ ಸೋತಿದ್ದೇಗೆ?

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್​ಗೆ 371 ರನ್ ಗಳ ಬೃಹತ್ ಗುರಿ ನೀಡಿತ್ತು. ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ ಗೆಲುವಿಗೆ 350 ರನ್​ಗಳು ಬೇಕಾಗಿದ್ದವು. ಇಂಗ್ಲೆಂಡ್ ತಂಡದ ಗೆಲುವಿನ ಚಿತ್ರಕಥೆಯನ್ನು ತಂಡದ ಆರಂಭಿಕರು ಬರೆದರು. ಆರಂಭಿಕರಾಗಿ ಬಂದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ 188 ಹೆಚ್ಚು ರನ್​ಗಳ ಅದ್ಭುತ ಜೊತೆಯಾಟವನ್ನಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಬೆನ್ ಡಕೆಟ್ ಶತಕ ಗಳಿಸಿದರೆ, ಕ್ರೌಲಿ 65 ರನ್ ಗಳಿಸಿ ಔಟಾದರು. ಕ್ರೌಲಿ ಔಟಾದ ನಂತರ ಬಂದ ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆದರೆ ಇದಾದ ನಂತರ ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಜೊತೆ ಅರ್ಧಶತಕದ ಪಾಲುದಾರಿಕೆ ಮಾಡಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಉಳಿದಂತೆ ಮಾಜಿ ನಾಯಕ ಜೋ ರೂಟ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್, ಫೀಲ್ಡಿಂಗ್ ವೈಫಲ್ಯ

ಲೀಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಮಾಡಿತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ಸ್ಟ್ರೈಕ್ ಬೌಲರ್‌ಗಳಾದ ಬುಮ್ರಾ ಮತ್ತು ಸಿರಾಜ್ ಇಬ್ಬರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರಾದರೂ ರನ್​ಗಳಿಗೆ ಕಡಿವಾಣ ಹಾಕಲಿಲ್ಲ. ಫೀಲ್ಡರ್‌ಗಳ ಬೆಂಬಲ ಸಿಗದಿದ್ದರೆ ಬೌಲರ್‌ಗಳಾದರೂ ಏನು ಮಾಡಲು ಸಾಧ್ಯ ಹೇಳಿ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟಿತು. ಅದರಲ್ಲೂ ಯಶಸ್ವಿ ಜೈಸ್ವಾಲ್ ಒಬ್ಬರೇ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಹೀನಾಯ ಸೋಲು ಎದುರಾಯಿತು.

Leave a Reply

Your email address will not be published. Required fields are marked *