ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್​ಗೇರಿದ ಟೀಂ ಇಂಡಿಯಾ.

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಇಂದು ಶ್ರೀಲಂಕಾ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಲಂಕಾ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ 98 ರನ್​ಗಳಿಗೆ ಲಂಕಾ ತಂಡವನ್ನು ಕಟ್ಟಿಹಾಕಿತು. ಭಾರತದ ಪರ ಆಯುಷಿ ಶುಕ್ಲಾ ನಾಲ್ಕು ಓವರ್‌ಗಳಲ್ಲಿ ಹತ್ತು ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದರು. ಗೆಲುವಿಗೆ 98 ರನ್ ಗುರಿ ಬೆನ್ನಟ್ಟಿದ ಭಾರತ 14.5 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಮಿಂಚಿದ ಆಯುಷಿ ಶುಕ್ಲಾ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ಪರ ಸುಮುದು ನಿಸಂಸಲಾ (21) ಮತ್ತು ನಾಯಕಿ ಮನುಡಿ ಎನ್ (33) ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಉಳಿದಂತೆ ತಂಡದ ಮಿಕ್ಕ 9 ಆಟಗಾರರು ಕೇವಲ ಒಂದಂಕಿಗೆ ಸುಸ್ತಾದರು. ಭಾರತದ ಪರ ಆಯುಷಿ ಶುಕ್ಲಾರನ್ನು ಬಿಟ್ಟರೆ ಪರುಣಿಕಾ ಸಿಸೋಡಿಯಾ 2, ಶಬ್ನಮ್ ಶಕೀಲ್ ಹಾಗೂ ದೃತಿ ಕೇಸರಿ ತಲಾ 1 ವಿಕೆಟ್ ಪಡೆದರು.

ಭಾರತಕ್ಕೆ 4 ವಿಕೆಟ್ ಜಯ

ಲಂಕಾ ನೀಡಿದ 99 ರನ್​ಗಳ ಗುರಿ ಬೆನ್ನಟ್ಟಿದ ಭಾರತದ ಆರಂಭವೂ ಉತ್ತಮವಾಗಿರಲಿಲ್ಲ. ಮೊದಲ ಓವರ್​ನ ಮೂರನೇ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಈಶ್ವರಿ ಅಸ್ವಾರೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ಜಿ ಕಮಲಿನಿ (28) ಮತ್ತು ಜಿ ತ್ರಿಶಾ (32) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕಾಗಿ ತಂಡ ಕೂಡ 6 ವಿಕೆಟ್​ಗಳನ್ನು ಕಳೆದುಕೊಳ್ಳಬೇಕಾಯಿತು. ಕೊನೆಯಲ್ಲಿ ಮಿಥಿಲಾ ವಿನೋದ್ 17 ರನ್ ಬಾರಿಸಿ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.

ಟೂರ್ನಿಯಲ್ಲಿ ಭಾರತದ ಪ್ರದರ್ಶನ

ಅಂಡರ್ 19 ಏಷ್ಯಾಕಪ್​ನ ಲೀಗ್​ ಹಂತದಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಇದೀಗ ಅಜೇಯ ತಂಡವಾಗಿ ಫೈನಲ್ ಪ್ರವೇಶಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದ್ದ ಟೀ ಇಂಡಿಯಾ ಇದಾದ ಬಳಿಕ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿದೆ. ಆದರೆ ನೇಪಾಳ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಗಬೇಕಾಯಿತು. ಇದೀಗ ಅಜೇಯ ತಂಡವಾಗಿ ಫೈನಲ್ ಪ್ರವೇಶಿರುವ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

Source : https://tv9kannada.com/sports/cricket-news/india-u19-womens-asia-cup-final-psr-952787.html

Leave a Reply

Your email address will not be published. Required fields are marked *