Team India: ನಾಯಕತ್ವ ಬದಲಿಸಿ ಟೀಮ್ ಇಂಡಿಯಾ ಗಳಿಸಿದ್ದೇನು? ಕೊಹ್ಲಿ ಅಭಿಮಾನಿಗಳ ಪ್ರಶ್ನೆ

ಲಂಡನ್​ನ ಓವಲ್​ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾದ ಕನಸು ಮತ್ತೊಮ್ಮೆ ಕಮರಿದೆ. 
ಅದರಲ್ಲೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ಮೂರು ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿದೆ. 2022 ರಲ್ಲಿ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕರಾಗಿ ಆಯ್ಕೆಯಾದ ರೋಹಿತ್ ಶರ್ಮಾ ಇದುವರೆಗೆ ಒಂದೇ ಒಂದು ಪ್ರಮುಖ ಟ್ರೋಫಿ ಗೆದ್ದಿಲ್ಲ.ಹಿಟ್​ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್, ಟಿ20 ವಿಶ್ವಕಪ್​ ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಆಡಿದೆ. ಏಷ್ಯಾಕಪ್​ನಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅಲ್ಲದೆ ಸೂಪರ್-4 ಹಂತದಲ್ಲೇ ಹೊರಬಿದ್ದಿದ್ದರು.ಇನ್ನು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಸೆಮಿಫೈನಲ್​ನಲ್ಲಿ ಮುಗ್ಗರಿಸಿತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲೂ ಪರಾಜಯಗೊಂಡಿದೆ. ಅಂದರೆ ರೋಹಿತ್ ಶರ್ಮಾ ನಾಯಕರಾದ ಬಳಿಕ ಪ್ರಮುಖ ಟೂರ್ನಿಗಳನ್ನಾಡಿರುವ ಟೀಮ್ ಇಂಡಿಯಾ ಕೇವಲ ಒಂದು ಬಾರಿ ಮಾತ್ರ ಫೈನಲ್​ ಪ್ರವೇಶಿಸಿದೆ.ಅಲ್ಲದೆ ಮೂರು ಟೂರ್ನಿಗಳಲ್ಲೂ ಭಾರತ ತಂಡವು ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಈ ಹಿಂದೆ ನಾಯಕರಾಗಿದ್ದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟೂರ್ನಿ ಗೆದ್ದಿರಲಿಲ್ಲ. ಇದೇ ಕಾರಣದಿಂದಾಗಿ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ನಾಯಕನ ಪಟ್ಟ ಕಟ್ಟಲಾಗಿತ್ತು.ಆದರೀಗ ಒಂದು ಏಷ್ಯಾಕಪ್ ಹಾಗೂ 2 ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಪ್ರಶಸ್ತಿ ಗೆದ್ದುಕೊಡುವಲ್ಲಿ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ಹಿಟ್​ಮ್ಯಾನ್​ಗೆ ಪಟ್ಟಕಟ್ಟಿದ್ದ ಬಿಸಿಸಿಐ ನಡೆಯನ್ನು ಹಲವರು ಪ್ರಶ್ನಿಸಿದ್ದಾರೆ.ವಿರಾಟ್ ಕೊಹ್ಲಿಯನ್ನು ಯಾವ ಕಾರಣದಿಂದ ನಾಯಕತ್ವದಿಂದ ಕೆಳಗಿಸಲಾಗಿತ್ತೋ, ಇದೀಗ ಅದೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಈಗ ಬಿಸಿಸಿಐನವರು ಏನು ಸಮಜಾಯಿಷಿ ನೀಡುವಿರಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಕಿಂಗ್ ಕೊಹ್ಲಿ ನಾಯಕತ್ವ ತೊರೆದು ವರ್ಷ ಕಳೆದರೂ ಅವರೇ ಮತ್ತೊಮ್ಮೆ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕೆಂಬ ಅಭಿಪ್ರಾಯ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಸೋಲಿನ ಬೆನ್ನಲ್ಲೇ ಕಿಂಗ್ ಕೊಹ್ಲಿಯ ನಾಯಕತ್ವದ ಚರ್ಚೆಗಳು ಮತ್ತೆ ಶುರುವಾಗಿರುವುದು ವಿಶೇಷ.

source https://tv9kannada.com/photo-gallery/cricket-photos/rohit-sharma-after-becoming-full-time-captain-kannada-news-zp-599102.html

Leave a Reply

Your email address will not be published. Required fields are marked *