ಭಾರತದ ಕೈಜಾರಿದ್ದ ಪಂದ್ಯವನ್ನು ಗೆಲ್ಲಿಸಿದ ಕ್ಯಾಪ್ಟನ್​ ಸೂರ್ಯ! ಶ್ರೀಲಂಕಾವನ್ನ ವೈಟ್​ವಾಶ್​ ಮಾಡಿದ ಟೀಮ್ ಇಂಡಿಯಾ.

ಶ್ರೀಲಂಕಾ (Srilanka) ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವು ದಾಖಲಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತದ ತಂಡ ಸರಣಿ ವಶಪಡಿಸಿಕೊಂಡಿತ್ತು. ಇಂದು ನಡೆದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ (Team India), ಬ್ಯಾಟರ್ಸ್‌ಗಳ ವೈಫಲ್ಯದ ನಡುವೆಯೂ ಸ್ಪಿನ್ ಬೌಲರ್‌ಗಳ ಸಂಘಟಿತ ಬೌಲಿಂಗ್ (Bowing) ಪ್ರದರ್ಶನದಿಂದಾಗಿ  ಅಂತಿಮ ಟಿ-20 ಪಂದ್ಯದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ವೈಟ್‌ವಾಷ್ ಮಾಡಿದೆ.

ಬ್ಯಾಟರ್‌ಗಳ ಕಳಪೆ ಪ್ರದರ್ಶನ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಯಾವೊಬ್ಬ ಬ್ಯಾಟ್ಸಮನ್ ಕೂಡ ಸಂಘಟಿತ ಪ್ರದರ್ಶನ ತೋರದೆ ವಿಫಲರಾದರು. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಡೇಂಜರಸ್ ಬ್ಯಾಟ್ಸಮನ್ ಯಶಸ್ವಿ ಜೈಸ್ವಾಲ್ ಕೇವಲ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಸಂಜು ಸ್ಯಾಮ್ಸನ್ ಇಂದೂ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಬಳಿಕ ಬಂದ ರಿಂಕು ಸಿಂಗ್ 1, ನಾಯಕ ಸೂರ್ಯಕುಮಾರ್ ಯಾದವ್ 8, ಆಲ್ರೌಂಡರ್ ಶಿವಂ ದುಬೆ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ನಿರಾಸೆ ಮೂಡಿಸಿದ ಸಂಜು

ತಂಡದಲ್ಲಿ ಸರಿಯಾಗಿ ಅವಕಾಶ ನೀಡ್ತಾ ಇಲ್ಲ ಅಂತ ಗೌತಮ್ ಗಂಭೀರ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಎರಡೂ ಹಾಗೂ ಮೂರನೇ ಪಂದ್ಯದಲ್ಲಿ ಅವಕಾಶ ಪಡೆದುಕೊಂಡರು. ಆದ್ರೆ ಈ ಎರಡೂ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಖಾತೆ ತೆರೆಯದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ವಿಫಲನಾಗಿದ್ದ ಸಂಜು ಇಂದು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮತ್ತೊಮ್ಮೆ ವೈಫಲ್ಯ ಅನುಭಿವಿಸಿದ್ದಾರೆ.

ಆರಂಭಿಕ ಕುಸಿತ

ತಂಡದ ಮೊತ್ತ 30 ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡದ ಉಪನಾಯಕ ಹಾಗೂ ಆರಂಭಿಕ ಯುವ ಬ್ಯಾಟರ್ ಶುಭಮಾನ್ ಗಿಲ್ ಆಕರ್ಷಕ 39 ರನ್ ಗಳಿಸುವ ಮೂಲಕ ಕೊಂಚ ಹೋರಾಟ ನಡೆಸಿದರು. ಗಿಲ್‌ ಜೊತೆ ಸೇರಿದ ರಿಯಾನ್ ಪರಾಗ್ ಉತ್ತಮ ಇನ್ನಿಂಗ್ ಕಟ್ಟುವ ಭರವಸೆ ನೀಡಿದರಾದರು 26 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ನೂರರ ಗಡಿ ದಾಟಿಸಿದ ಬಾಲಂಗೋಚಿಗಳು

ಇನ್ನೇನು ತಂಡ ನೂರರ ಒಳಗೆ ಕುಸಿಯುವ ಭೀತಿಯಲ್ಲಿದ್ದಾಗ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಾಷಿಂಗ್ಟನ್ ಸುಂದರ್ 25 ರನ್ ಹಾಗೂ ರವಿ ಬಿಶ್ಣೋಯಿ 8 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ನಿಗದಿತ 20 ಓವರ್‌ಗಳಲ್ಲಿ 137 ರನ್ ಆಗುವಂತೆ ನೋಡಿಕೊಂಡರು.

3 ವಿಕೆಟ್ ಪಡೆದು ಮಿಂಚಿದ ತೀಕ್ಷಣ

ಶ್ರೀಲಂಕಾ ಪರ ಮಹೀಶ್ ತೀಕ್ಷಣ 3, ವನಿಂದು ಹಸರಂಗ 2 ವಿಕೆಟ್ ಪಡೆದು ಮಿಂಚಿದರು. ಇನ್ನೂ ಚಮಿಂದು ವಿಕ್ರಮಸಿಂಘೆ, ಅಸಿಥಾ ಫೆರ್ನಾಂಡೋ, ರಮೇಶ್ ಮೆಂಡಿಸ್ ತಲಾ 1 ವಿಕೆಟ್ ಪಡೆದುಕೊಂಡರು.

ಭರ್ಜರಿ ಆರಂಭ ಪಡೆದ ಲಂಕಾ

ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿದ್ದ ಶ್ರೀಲಂಕಾ ಓಪನರ್‌ಗಳು ಇಂದೂ ಕೂಡ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಪಥುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಆರಂಭ ಒದಗಿಸಿದರು. ಈ ಹಂತದಲ್ಲಿ ಈ ಹಂತದಲ್ಲಿ ದಾಳಿ ನಡೆಸಿದ ಬಿಷ್ಣೋಯಿ 26 ರನ್ ಗಳಿಸಿದ್ದ ನಿಸ್ಸಾಂಕ ಅವರ ವಿಕೆಟ್ ಪಡೆದುಕೊಂಡರು. ಬಳಿಕ ಬಂದ ಕುಸಾಲ್ ಪೆರೆರಾ  ಮೆಂಡಿಸ್ ಜೊತೆಗೂಡಿ ಉತ್ತಮ ಇನ್ನಿಂಗ್ ಕಟ್ಟಿದರು. ಮತ್ತೊಮ್ಮೆ ದಾಳಿ ನಡೆಸಿದ ಬಿಷ್ಣೋಯಿ 43 ರನ್ ಗಳಿಸಿದ್ದ ಕುಸಾಲ್ ಮೆಂಡಿಸ್ ಅವರ ವಿಕೆಟ್ ಪಡೆದುಕೊಂಡರು.  ಬಳಿಕ ಬಂದ ವನಿಂದು ಹಸರಂಗ 3 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಅವರಿಗೆ ವಿಕೆಟ್ ಒಪ್ಪಿಸಿದರು.

ುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯ ಕೈ ಚೆಲ್ಲಿದ ಲಂಕಾ

ಸುಲಭದ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ ಉತ್ತಮ ಆರಂಭದ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ದಢೀರ್ ಕುಸಿತ ಅನುಭವಿಸಿತು. ಕುಸಾಲ್ ಪೆರೇರಾ ಆಕರ್ಷಕ 46 ರನ್‌ ಗಳಿಸಿದರೂ ಗೆಲುವು ದಾಖಲಿಸಲು ಆಗಲಿಲ್ಲ.  ರಿಂಕೂ ಸಿಂಗ್ ಎಸೆತದಲ್ಲಿ ಕುಸಾಲ್ ಪೆರಾರ ಔಟ್ ಆಗುವ ಮೂಲಕ ತಂಡ ಸೋಲಿನ ಸುಳಿಯಲ್ಲಿ ಸಿಲುಕಿತು.

ಭಾರತ ತಂಡದ ಪರ ರವಿ ಬಿಷ್ಣೋಯಿ 2 ವಿಕೆಟ್, ವಾಷಿಂಗ್ಟನ್ ಸುಂದರ್ 2,  ರಿಂಕೂ ಸಿಂಗ್ 2,  ನಾಯಕ ಸೂರ್ಯಕುಮಾರ್ ಯಾದವ್ 2 ವಿಕೆಟ್ ಪಡೆದು ಮಿಂಚಿದರು.

ಪಂದ್ಯ ಟೈ

ಗೆಲ್ಲಲು ಕೊನೆಯ ಓವರ್‌ನಲ್ಲಿ 6 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಸ್ವತಃ ಬೌಲಿಂಗ್‌ಗೆ ಇಳಿದ ನಾಯಕ ಸೂರ್ಕುಮಾರ್ ಯಾದವ್  2 ವಿಕೆಟ್ ಪಡೆಯುವ ಮೂಲಕ ಪಂದ್ಯ ಟೈ ಆಗುವಂತೆ ನೋಡಿಕೊಂಡರು.

ಸೂಪರ್‌ ಓವರ್‌ನಲ್ಲಿ ರೋಚಕ ಗೆಲುವು

137 ರನ್ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 2 ರನ್ ಗಳಿಸಿತು. ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ತಾವಾಡಿದ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಗೆಲುವು ದಾಖಲಿಸಿದರು.

ಸುಂದರ್ ಪಂದ್ಯಶ್ರೇಷ್ಠ, ಸೂರ್ಯ ಸರಣಿಶ್ರೇಷ್ಠ

ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವಿಗೆ ಕಾರಣಕರ್ತರಾದ ಸ್ಪಿನ್ನರ್ ವಾಷಿಂಗ್‌ಟನ್ ಸುಂದರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ನಾಯಕ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Source : https://kannada.news18.com/news/sports/india-beat-sri-lanka-in-super-over-ddr-1795676.html

Leave a Reply

Your email address will not be published. Required fields are marked *