IND vs ENG: ಇಂಗ್ಲೆಂಡ್‌ ವಿರುದ್ಧ ಸತತ 7ನೇ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

India vs England ODI: ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಅವರ ಶತಕ (119 ರನ್) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂಗ್ಲೆಂಡ್ 304 ರನ್ ಗಳಿಸಿದರೆ, ಭಾರತ 44.3 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಭಾರತ ಇಂಗ್ಲೆಂಡ್ ವಿರುದ್ಧ ಸತತ 7 ಏಕದಿನ ಸರಣಿಗಳನ್ನು ಗೆದ್ದ ದಾಖಲೆ ನಿರ್ಮಿಸಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಸತತ 7 ಏಕದಿನ ಸರಣಿಗಳನ್ನು ಗೆದ್ದ ದಾಖಲೆ ನಿರ್ಮಿಸಿದೆ. ಕಟಕ್‌ನ ಬರಾಬತಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಬೆನ್ ಡಕೆಟ್ ಮತ್ತು ಜೋ ರೂಟ್ ಅವರ ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 10 ವಿಕೆಟ್‌ಗೆ 304 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ರೋಹಿತ್ ಶರ್ಮಾ ಅವರ ಶತಕದ ನೆರವಿನಿಂದ 44.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಇಂಗ್ಲೆಂಡ್​ಗೆ ಸ್ಫೋಟಕ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಅರ್ಧಶತಕದ ಪಾಲುದಾರಿಕೆಯೊಂದಿಗೆ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಈ ವೇಳೆ ಸಿಕ್ಕ ಜೀವದಾನವನ್ನೂ ಸದುಪಯೋಗಪಡಿಸಿಕೊಳ್ಳದ ಸಾಲ್ಟ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ಮತ್ತೊಬ್ಬ ಆರಂಭಿಕ ಡಕೆಟ್ 65 ರನ್ ಕಲೆಹಾಕಿದರೆ, ಜೋ ರೂಟ್ 69 ರನ್‌ಗಳ ಇನ್ನಿಂಗ್ಸ್ ಆಡಿದರು. ರೂಟ್ ಮತ್ತು ಡಕೆಟ್ ಹೊರತುಪಡಿಸಿ, ಲಿಯಾಮ್ ಲಿವಿಂಗ್‌ಸ್ಟೋನ್ 32 ಎಸೆತಗಳಲ್ಲಿ 41 ರನ್ ಗಳಿಸಿದರು, ಇದರಿಂದಾಗಿ ತಂಡವು ಸವಾಲಿನ ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಇಂಗ್ಲೆಂಡ್ ವೇಗಕ್ಕೆ ಕಡಿವಾಣ ಹಾಕಿದ ವೇಗಿಗಳು

ಆರಂಭದಲ್ಲಿ, ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಆದರೆ ಕೊನೆಯಲ್ಲಿ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ಇತ್ತ ಟೀಂ ಇಂಡಿಯಾ ಕೂಡ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಇದರ ಹೊರತಾಗಿಯೂ, ಇಂಗ್ಲೆಂಡ್ ತಂಡವು 300 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡ್ ಪರ ಸಾಲ್ಟ್ 26, ಹ್ಯಾರಿ ಬ್ರೂಕ್ 31, ನಾಯಕ ಜೋಸ್ ಬಟ್ಲರ್ 34, ಆದಿಲ್ ರಶೀದ್ 14, ಜೇಮೀ ಓವರ್ಟನ್ ಆರು ಮತ್ತು ಗಸ್ ಅಟ್ಕಿನ್ಸನ್ ಮೂರು ರನ್​ಗಳ ಕಾಣಿಕೆ ನೀಡಿದರು.

ಭಾರತಕ್ಕೆ ಉತ್ತಮ ಆರಂಭ

304 ರನ್​​ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 136 ರನ್‌ಗಳ ಜೊತೆಯಾಟ ನೀಡಿದರು. ಆದರೆ 17 ನೇ ಓವರ್‌ನಲ್ಲಿ ಶುಭ್​ಮನ್ ಗಿಲ್ ಔಟಾಗುವುದರೊಂದಿಗೆ ಈ ಜೊತೆಯಾಟ ಮುರಿದು ಬಿತ್ತು. ಅಂತಿಮವಾಗಿ ಗಿಲ್ 52 ಎಸೆತಗಳಲ್ಲಿ 60 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ರೋಹಿತ್ 32ನೇ ಶತಕ

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸ್ಟಂಪ್ ಹೊರಗೆ ಹೋಗುವ ಚೆಂಡನ್ನು ಆಡಲು ಯತ್ನಿಸಿ ವಿಕೆಟ್​ ಕೀಪರ್​ಗೆ ಕ್ಯಾಚಿತ್ತು ಔಟಾದರು. ಇದಾದ ನಂತರ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ಮೂರನೇ ವಿಕೆಟ್‌ಗೆ ಹಿಟ್‌ಮ್ಯಾನ್ ಜೊತೆ 70 ರನ್​ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದೇ ವೇಳೆ ರೋಹಿತ್ 76 ಎಸೆತಗಳಲ್ಲಿ ತಮ್ಮ 32 ನೇ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ರೋಹಿತ್ 90 ಎಸೆತಗಳಲ್ಲಿ 12 ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಸಹಾಯದಿಂದ 119 ರನ್‌ ಕೆಲಹಾಕಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಹಾಗೂ ಜಡೇಜಾ ಚುರುಕಿನ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Source: https://tv9kannada.com/sports/cricket-news/india-wins-odi-series-vs-england-psr-976282.html

Leave a Reply

Your email address will not be published. Required fields are marked *