ಆಸೀಸ್ ಬಿಗಿ ಹಿಡಿತ; ಮತ್ತೆ ಕೈಕೊಟ್ಟ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೇಡ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 337 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 128 ರನ್ ಕಲೆಹಾಕಿದೆ. ರೋಹಿತ್ ಪಡೆ ಇನ್ನೂ 29 ರನ್​ಗಳ ಇನ್ನಿಂಗ್ಸ್ ಹಿನ್ನಡೆಯಲ್ಲಿದೆ. ತಂಡದ ಪರ ರಿಷಬ್ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಜೇಯರಾಗಿ ಉಳಿದಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದೀಗ ಈ ಇಬ್ಬರ ಮೇಲೆ ತಂಡದ ಸೋಲು ಗೆಲುವು ನಿರ್ಧಾರವಾಗಲಿದೆ. ಒಂದು ವೇಳೆ ಮೂರನೇ ದಿನದಾಟದಲ್ಲಿ ಈ ಇಬ್ಬರು ಬೇಗನೇ ವಿಕೆಟ್ ಒಪ್ಪಿಸಿದರೆ, ಟೀಂ ಇಂಡಿಯಾಕ್ಕೆ ಸೋಲು ಖಚಿತ ಎಂತಲೇ ಹೇಳಬಹುದು.

ಬ್ಯಾಟಿಂಗ್ ವೈಫಲ್ಯ

ಅಡಿಲೇಡ್‌ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ತೀರ ಕಳಪೆಯಾಗಿತ್ತು. ಆದಾಗ್ಯೂ ಎರಡನೇ ಇನ್ನಿಂಗ್ಸ್​ನಲ್ಲಿ ತಂಡ ಪುಟಿದೇಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ಪರ್ತ್​ ಟೆಸ್ಟ್​ನಲ್ಲೂ ಇದೇ ಸನ್ನಿವೇಶವಿದ್ದಾಗ ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠ ಪ್ರದರ್ಶನ ನೀಡಿತ್ತು. ಆದರೆ ಪರ್ತ್​ನಲ್ಲಿ ತೋರಿದ ಪ್ರದರ್ಶನವನ್ನು ಅಡಿಲೇಡ್‌ನಲ್ಲಿ ಪುನಾರವರ್ತಿಸಲು ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗಕ್ಕೆ ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟಿಂಗ್‌ ವಿಭಾಗದ ಪೆವಿಲಿಯನ್ ಪರೇಡ್ ನಡೆಯಿತು.

ಒಂದೇ ಸೆಷನ್​ನಲ್ಲಿ 5 ವಿಕೆಟ್ ಪತನ

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಆರಂಭವೇ ಕಳಪೆಯಾಗಿತ್ತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮತ್ತೆ ಫೇಲ್ ಆಗಿದ್ದು, ತಂಡಕ್ಕೆ ಬಲಿಷ್ಠ ಆರಂಭ ನೀಡಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 2 ಜೀವದಾನವನ್ನು ಬಳಸಿಕೊಂಡು 37 ರನ್ ಗಳಿಸಿದ್ದ ರಾಹುಲ್, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ ಏಳು ರನ್ ಗಳಿಗೆ ಸುಸ್ತಾದರು. ನಂತರ ಬೋಲ್ಯಾಂಡ್ ಯಶಸ್ವಿ (24) ಮತ್ತು ವಿರಾಟ್ ಕೊಹ್ಲಿ (11) ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಎರಡು ಹೊಡೆತ ನೀಡಿದರು. ಇತ್ತ ಉತ್ತಮ ಆರಂಭವನ್ನು ಪಡೆದುಕೊಂಡಿದ್ದ ಶುಭಮನ್ ಗಿಲ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಅವರು 28 ರನ್ ಗಳಿಸಿದ್ದಾಗ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರು. ಎಂದಿನಂತೆ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡ ನಾಯಕ ರೋಹಿತ್ ಶರ್ಮಾ ಕಮ್ಮಿನ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ 2ನೇ ದಿನದಾಟದ ಕೊನೆಯ ಸೆಷನ್​ನಲ್ಲೇ ಟೀಂ ಇಂಡಿಯಾದ ಪ್ರಮುಖ 5 ವಿಕೆಟ್​ಗಳು ಪತನಗೊಂಡಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

337 ರನ್ ಕಲೆಹಾಕಿದ ಆಸೀಸ್

ಇದಕ್ಕೂ ಮೊದಲು ಒಂದು ವಿಕೆಟ್‌ಗೆ 86 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ 251 ರನ್ ಗಳಿಸುವಷ್ಟರಲ್ಲಿ ಕೊನೆಯ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಆಸ್ಟ್ರೇಲಿಯಾ 337 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿತು. ತಂಡದ ಪರ ಟ್ರಾವಿಸ್ ಹೆಡ್ 140 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ನಾಲ್ಕು ವಿಕೆಟ್ ಪಡೆದರು.

Source : https://tv9kannada.com/sports/cricket-news/india-vs-australia-2nd-day-australia-dominates-in-adelaide-psr-946387.html

Leave a Reply

Your email address will not be published. Required fields are marked *