ಬಾಹ್ಯಾಕಾಶದಲ್ಲೇ ಉಳಿದ ಸುನೀತಾ, ಬುಚ್​; ಲಾಂಚ್​​ ಪ್ಯಾಡ್​ನಲ್ಲಿ ತಾಂತ್ರಿಕ ಸಮಸ್ಯೆ.

SPACEX DELAYS FLIGHT : ಬಾಹ್ಯಾಕಾಶ ಕೇಂದ್ರದಿಂದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್‌ ಮತ್ತು ಬುಚ್ ಅವರನ್ನು ಕರೆತರುವ ಪ್ರಯತ್ನಕ್ಕೆ ಮತ್ತೆ ಕೊಂಚ ಹಿನ್ನಡೆಯಾಗಿದೆ.

ಕೇಪ್​ ಕ್ಯಾನವೆರಲ್(ಯುಎಸ್ಎ)​: ಕಳೆದ ಒಂಭತ್ತು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಸಿಲುಕಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಅವರು ಇನ್ನೇನು ಭೂಮಿಗೆ ವಾಪಸಾಗಲಿದ್ದಾರೆ ಎಂಬ ಖುಷಿಯ ನಡುವೆ ಇದೀಗ ಮತ್ತೆ ನಿರಾಸೆ ಮೂಡಿದ್ದು, ಅವರ ಆಗಮನ ಮತ್ತಷ್ಟು ವಿಳಂಬವಾಗಲಿದೆ. ಉಡ್ಡಯನ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಇದಕ್ಕೆ ಕಾರಣ.

ಗಗನಯಾತ್ರಿಗಳನ್ನು ಕರೆತರಲು ಅಮೆರಿಕ ಕಾಲಮಾನದ ಅನುಸಾರ ಬುಧವಾರ 7.48ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾ ಸ್ಪೇಸ್​ ಮಿಷನ್​ನ ಕ್ರ್ಯೂ10 ನೌಕೆ​ ಉಡಾವಣೆಯಾಗಬೇಕಿತ್ತು. ಆದರೆ, ಇನ್ನೇನು ಉಡಾವಣೆಗೆ 45 ನಿಮಿಷ ಬಾಕಿ ಇರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಈ ಕುರಿತು ಮಾತನಾಡಿರುವ ನಾಸಾ ಲಾಂಚ್​ ಕಮೆಂಟರ್​​ ಡೆರ್ರೊಲ್​ ನೈಲ್​, “ಹೈಡ್ರಾಲಿಕ್​ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಉಡಾವಣೆ ಸಾಧ್ಯವಾಗಿಲ್ಲ” ಎಂದು ತಿಳಿಸಿದರು.

ಇದೇ ವೇಳೆ, “ಉಡಾವಣೆ ರದ್ದಾಗಿದೆ. ಗುರುವಾರ ಮತ್ತೆ ಉಡ್ಡಯಿಸುವ ಸಾಧ್ಯತೆ ಇದೆ” ಎಂದು ಫೆಡರಲ್​ ವೈಮಾನಿಕ ಆಡಳಿತದ ಬಾಹ್ಯಾಕಾಶ ಸಲಹೆಗಾರರು ಹೇಳಿದ್ದಾರೆ.

ಕಳೆದ ಜೂನ್​ನಲ್ಲಿ ಐಎಸ್​ಎಸ್​ (ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರ)ಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್ ಅವರು​​ ಬೋಯಿಂಗ್​ ಸ್ಟಾರ್​ಲೈನರ್​ನಲ್ಲಿ ಕಂಡುಬಂದ ಪ್ರೊಪಲ್ಯುಷನ್​ ಸಮಸ್ಯೆಯಿಂದ ಅಲ್ಲಿಯೇ ಉಳಿಯುವಂತಾಗಿದೆ.

ಆರಂಭದಲ್ಲಿ 8 ದಿನದ ಮಿಷನ್​ಗೆ ಇಬ್ಬರು ತೆರಳಿದ್ದರು. ಕ್ರ್ಯೂ 9 ಸ್ಪೇಸ್​ಎಕ್ಸ್​ ಡ್ರಾಗನ್​ ಮೂಲಕ ಕರೆತರಲು ಸೆಪ್ಟೆಂಬರ್​ನಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ, ಈ ನೌಕೆ ಕೇವಲ ಇಬ್ಬರನ್ನು ಮಾತ್ರ ಕರೆತರುವ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ವಿಲಿಯನ್ಸ್​ ಮತ್ತು ವಿಲ್ಮೊರ್​​ಗೆ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಇದೀಗ ಕ್ರ್ಯೂ 10ರ ಮೂಲಕ ಮಾತ್ರ ಅವರು ಭೂಮಿಗೆ ಬರಲು ಸಾಧ್ಯವಿದೆ.

ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಲ್ಮೋರ್​​, “ಸಣ್ಣ ಅವಧಿಗೆ ಯೋಜನೆ ರೂಪಿಸಿದ್ದರೂ ದೀರ್ಘ ಕಾಲ ಉಳಿಯುವ ವ್ಯವಸ್ಥೆಯೊಂದಿಗೆ ನಾವು ಬಂದಿದ್ದೆವು. ಇದೇ ಮಾನವ ಬಾಹ್ಯಕಾಶ ವಿಮಾನದ ಕಾರ್ಯಕ್ರಮ. ಇದರ ಯೋಜನೆ ತಿಳಿದಿರುವುದಿಲ್ಲ. ಅನಿರೀಕ್ಷಿತ, ಆಕಸ್ಮಿಕ ಯೋಜನೆಯಾಗಿರುತ್ತದೆ. ಭಾನುವಾರ ಕ್ರ್ಯೂ 9 ಹೊರಡಲು ತಯಾರಿ ನಡೆಸಿದ್ದು, ಇದಕ್ಕೆ ಹವಾಮಾನ ಪೂರಕವಾಗಿರಬೇಕು. ಇದು ಫ್ಲೋರಿಡಾ ತೀರದಲ್ಲಿ ಇಳಿಯಲಿದೆ” ಎಂದು ಹೇಳಿದ್ದಾರೆ.

Source : https://www.etvbharat.com/kn/!technology/spacex-delays-flight-to-replace-nasas-stuck-astronauts-after-launch-pad-problem-kas25031301197

Leave a Reply

Your email address will not be published. Required fields are marked *