ಐರನ್ ಮ್ಯಾನ್ 70.3 ರೇಸ್‌ನಲ್ಲಿ ತೇಜಸ್ವಿ ಸೂರ್ಯಗೆ ಗೆಲುವು: ಈ ಸಾಧನೆ ಮಾಡಿದ ಮೊದಲ ಜನಪ್ರತಿನಿಧಿ!

ಪಣಜಿ (ಗೋವಾ): ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ಜರುಗಿದ ಐರನ್‌ಮ್ಯಾನ್ 70.3 ಚಾಲೆಂಜ್ ರೇಸ್​ ಜಯಿಸಿದ ದೇಶದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೇಸ್​ನ 2 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟ ಸೇರಿ ಮೂರು ವಿಭಾಗಗಳಲ್ಲಿ ಅವರು ಭಾಗವಹಿಸಿದ್ದರು.

ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದು, ತೇಜಸ್ವಿ ಸೂರ್ಯ 8 ಗಂಟೆ, 27 ನಿಮಿಷ 32 ಸೆಕೆಂಡುಗಳಲ್ಲಿ ಸ್ಪರ್ಧೆಯ ಮೂರು ವಿಭಾಗಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐರನ್‌ಮ್ಯಾನ್ 70.3 ಗೋವಾದ ನಾಲ್ಕನೇ ಆವೃತ್ತಿಯನ್ನು ರೇಸ್​ನ ರಾಯಭಾರಿ ಮತ್ತು ಟೆನಿಸ್ ದಂತಕಥೆ ಲಿಯಾಂಡರ್ ಪೇಸ್, ​​ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಸಂಸ್ಥಾಪಕ ಮತ್ತು ಸಿಇಒ ಯೋಸ್ಕಾ ಮತ್ತು ಐರನ್‌ಮ್ಯಾನ್ 70.3 ಗೋವಾ ರೇಸ್ ನಿರ್ದೇಶಕ ದೀಪಕ್​ ರಾಜ್​, ಹರ್ಬಲೈಫ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗಣೇಶನ್ ವಿ.ಎಸ್. ಅವರು ಭಾನುವಾರ ಮಿರಾಮರ್ ಬೀಚ್‌ನಲ್ಲಿ ಚಾಲನೆ ನೀಡಿದರು.

ಪ್ರಧಾನಿ ಮೋದಿ ಶ್ಲಾಘನೆ: ಈ ಸಾಧನೆಗಾಗಿ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ”ಶ್ಲಾಘನೀಯ ಸಾಧನೆ! ಇದು ಅನೇಕ ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೇಪಣೆ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫಿಟ್ ಇಂಡಿಯಾವು ಸ್ಫೂರ್ತಿ: ತಮ್ಮ ಸಾಧನೆಯ ಬಗ್ಗೆ ಸೂರ್ಯ ಸಂತಸ ವ್ಯಕ್ತಪಡಿಸಿದ್ದು, ಸ್ಪರ್ಧೆಗೆ ಕಟ್ಟುನಿಟ್ಟಿನ ತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ. “ಐರನ್‌ಮ್ಯಾನ್ 70.3 ಗೋವಾ, 50ಕ್ಕೂ ಹೆಚ್ಚು ದೇಶಗಳ ಅಥ್ಲೀಟ್‌ಗಳನ್ನು ಆಕರ್ಷಿಸುತ್ತ ಹೆಸರುವಾಸಿಯಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ಫಿಟ್‌ನೆಸ್ ಉತ್ಸಾಹಿಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ. ಸವಾಲೆಂಬುದು ಸಹಿಷ್ಣುತೆ, ದೈಹಿಕ ಮತ್ತು ಮಾನಸಿಕ ಸದೃಢತೆಯ ಅಂತಿಮ ಪರೀಕ್ಷೆಯಾಗಿದೆ. ಕಳೆದ 4 ತಿಂಗಳುಗಳಲ್ಲಿ, ನನ್ನ ಫಿಟ್‌ನೆಸ್ ಸುಧಾರಣೆಗೆ ನಾನು ಕಠಿಣ ತರಬೇತಿ ಪಡೆದಿದ್ದೇನೆ. ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಂತೋಷವಾಗಿದೆ. ಪ್ರಧಾನಿ ಮೋದಿಯವರು ಆರಂಭಿಸಿದ ಫಿಟ್ ಇಂಡಿಯಾವು ನನಗೆ ಸ್ಫೂರ್ತಿಯಾಗಿದೆ. ಅದು ನನ್ನ ಫಿಟ್‌ನೆಸ್ ಗುರಿ ತಲುಪಲು ನೆರವಾಯಿತು” ಎಂದು ಸೂರ್ಯ ಹೇಳಿದ್ದಾರೆ.

ಆರೋಗ್ಯಕರ ರಾಷ್ಟ್ರವಾಗಬೇಕು: ಭಾರತಕ್ಕಾಗಿ ಪ್ರಶಸ್ತಿ ಗೆಲ್ಲಲು ತೀವ್ರ ತರಬೇತಿ ಮತ್ತು ಕಠಿಣ ಪರಿಶ್ರಮಪಡುವ ದೇಶದ ಕ್ರೀಡಾಪಟುಗಳಿಗೆ ತಮ್ಮ ಸಾಧನೆಯನ್ನು ಸೂರ್ಯ ಅರ್ಪಿಸಿದರು. ”ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಯುವ ರಾಷ್ಟ್ರವಾಗಿ, ನಾವು ನಮ್ಮ ದೈಹಿಕ ಸಾಮರ್ಥ್ಯವನ್ನು ಪೋಷಿಸಬೇಕು ಮತ್ತು ಹೆಚ್ಚು ಆರೋಗ್ಯಕರ ರಾಷ್ಟ್ರವಾಗಬೇಕು. ಫಿಟ್ ಆಗುವ ಪ್ರಯತ್ನದಿಂದ ನಮಗೆ ಹೆಚ್ಚು ಶಿಸ್ತು ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೆ, ನೀವು ಕೈಗೊಳ್ಳುವ ಯಾವುದೇ ಉದ್ಯಮದಲ್ಲಿ ಕೂಡ ಯಶಸ್ಸಿಗೆ ಅದು ನೆರವಾಗುತ್ತದೆ” ಎಂದರು.

”ಫಿಟ್‌ ಇಂಡಿಯಾ ಆಂದೋಲನವು ಫಿಟ್‌ನೆಸ್ ಬಗ್ಗೆ ಈ ಜಾಗೃತಿ ಹೆಚ್ಚಿಸುತ್ತ, ನಮ್ಮ ರಾಷ್ಟ್ರಕ್ಕೆ ಮೂಲಭೂತವಾಗಿ ಅಗತ್ಯವಿರುವ ಫಿಟ್‌ನೆಸ್ ದಿನಚರಿಯತ್ತ ಹೆಚ್ಚಿನ ಜನರನ್ನು ಆಕರ್ಷಿಸುವಲ್ಲಿ ಸಾಕಷ್ಟು ನೆರವಾಗಿದೆ. ರೇಸ್​​ನಲ್ಲಿ ನಾನೊಬ್ಬ ಫಿನಿಶರ್ ಆಗಿ, ಫಿಟ್‌ನೆಸ್ ಗುರಿಯು ನಿಜವಾಗಿಯೂ ನಿಮ್ಮನ್ನು ನಿಖರ ಗಡಿಯತ್ತ ಕೊಂಡೊಯ್ಯುತ್ತದೆ ಮತ್ತು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂಬುದನ್ನು ಯುವಜನರಿಗೆ ಹೇಳಬಲ್ಲೆ” ಎಂದು ತಿಳಿಸಿದರು.

Source : https://www.etvbharat.com/kn/!bharat/mp-tejasvi-surya-completes-ironman-challenge-pm-modi-lauds-feat-karnataka-news-kas24102800624

Leave a Reply

Your email address will not be published. Required fields are marked *