ದೇಗುಲಗಳು ನಿರ್ಮಾಣವಾಗುತ್ತಿವೆ, ಆದರೆ ಜನರ ಹೃದಯದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳು ಬೆಳೆಯುತ್ತಿಲ್ಲ : ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 14 : ವೀರಭದ್ರಸ್ವಾಮಿಯ ಗುಗ್ಗಳ ಸಮಯದಲ್ಲಿ ಕೆಂಡವನ್ನು ತುಳಿದಾಗ ಹಾಗೂ ಭಕ್ತಾಧಿಗಳ ಕೈಗೆ, ಬಾಯಿಗೆ ಸೂತ್ರವನ್ನು ಹಾಕಿದಾಗ ಅವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಇದು ವೀರಭದ್ರನ ಪಾವಡ ಎಂದು ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಮಠದ ಶಿಲಾಮಠ ತಾವರೆಕೆರೆ, ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ(ರಿ)ಯ ಗೌರವಾಧ್ಯಕ್ಷರಾದ ಶ್ರೀ ರೇಣುಕ
ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಭಕ್ತ ಮಂಡಳಿವತಿಯಿಂದ ಹಮ್ಮಿಕೊಂಡಿದ್ದ ವೀರಾಂಜನೇಯ ಹಾಗೂ ಶ್ರೀ ಭದ್ರಕಾಳಮ್ಮ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಭಗವಂತನ ಸೇವೆಯಲ್ಲಿ
ಉತ್ಸಾಹ ಮತ್ತು ಭಕ್ತಿ ಇರಬೇಕು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಡಿಮೆ ಅವಧಿಯಲ್ಲಿ ಈ ಕಾರ್ಯವನ್ನು ನಿರ್ಮಿಸಿರುವುದು ಸಂತೋಷದ ವಿಷಯ. ದೇವಸ್ಥಾನದಲ್ಲಿ ಸ್ವಚ್ಛತೆಕಾಪಾಡಿ ಕೊಂಡು ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸುವುದು ಮುಖ್ಯ ಎಂದರು.

ವೀರಭದ್ರ ನಮ್ಮ ದೇಶದಲ್ಲಿ ಮಾತ್ರವಲ್ಲಿ ಹೊರ ದೇಶದಲ್ಲಿಯೂ ಸಹಾ ಇದ್ದಾನೆ, ಈತನನ್ನು ಆರಾಧನೆ ಮಾಡುವವರ ಸಂಖ್ಯೆ ಬೇರೆ ದೇವರುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವೀರಭದ್ರ ದೇವರ ಆರಾಧನೆ ಸಮಯದಲ್ಲಿ ನಡೆಯಯವ ಗುಗ್ಗಳದಲ್ಲಿ ಹಾಯುವ ಕೆಂಡದಿಂದ ಇದುವರೆವಿಗೂ ಯಾರಿಗೂ ಸಹಾ ಯಾವುದೇ ರೀತಿಯ ಹಾನಿಯಾಗಿಲ್ಲ, ಇದ್ದಲ್ಲದೆ ಭಕ್ತಾಧಿಗಳು ಕೈಗೆ, ಬಾಯಿಗೆ ಹಾಕಿಸಿಕೊಳ್ಳುವ
ಸೂತ್ರವೂ ಸಹಾ ಅವರಿಗೆ ಯಾವುದೇ ರೀತಿಯ ತೊಂದರೆಯನ್ನು ಸಹಾ ಮಾಡಿಲ್ಲ ಇದೆಲ್ಲ ವೀರಭದ್ರಸ್ವಾಮಿಯ ಪವಾಡವಾಗಿದೆ ಎಂದು ಶ್ರೀಗಳು ತಿಳಿಸಿದರು.

ಮನುಷ್ಯರು, ಭಾವನಾತ್ಮಕವಾಗಿ ಪರಿಶುದ್ಧವಾಗಿ ಇರಬೇಕು. ಭಗವಂತನ ಸೇವೆಯಲ್ಲಿ ಸದಾ ತೊಡಗಿದ್ದಾಗ ದೇವರ ಕೃಪೆಯಿಂದ ಮನುಕುಲದ ಏಳಿಗೆ ಆಯಾಗುತ್ತದೆ. ಧರ್ಮಸಭೆಗೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ. ಹೆಣ್ಣುಮಕ್ಕಳಿಗೆ ಕೊಟ್ಟಂತಹ ಗಮನ, ಎಚ್ಚರಿಕೆ
ಗಂಡುಮಕ್ಕಳಿಗೆ ಕೊಡಬೇಕು ಕುಟುಂಬದ, ಯಜಮಾನಿಕೆ ತಾಯಂದಿರು ನಡೆಸುತ್ತಿದ್ದರೆ ಇದು ಒಳ್ಳೇಯ ಕಾರ್ಯ ಎಂದು ಹೇಳಿ ಬರೀ ಹೊರಗಿನ ದೇಗುಲಗಳ ನಿರ್ಮಾಣ ಮುಖ್ಯವಲ್ಲ ದೇಗುಲದ ಜೊತೆಗೆ ವ್ಯಕ್ತಿಗಳೂ ಕೂಡ ಪುನರ್ ನಿರ್ಮಾಣವಾಗಬೇಕು. ತಮ್ಮೊಳಗೆ ಯಾವ ರೀತಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂಬುದೇ ನಿಜವಾದ ಆಧ್ಯಾತ್ಮಿಕತೆ ಎಂದರು.

ಮಸೀದಿ, ಚರ್ಚ್ ಹಾಗೂ ದೇಗುಲಗಳಲ್ಲಿ ಇರುವುದು ದೇವರೇ. ಅವರವರ ಭಕ್ತಿ, ಭಾವಕ್ಕೆ ತಕ್ಕಂತೆ ಇರುವ ದೇವರ ನೆಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಜೀವನದ ಮೌಲ್ಯಗಳು ಎಲ್ಲ ಧರ್ಮಗಳಲ್ಲಿ ಅಡಕವಾಗಿವೆ. ದೇಗುಲದಂತೆ ಮನಸೂ ಶುದ್ಧವಾಗಿರಲಿ ಎನ್ನುವುದು ಮುಖ್ಯ ಎಂದು ತಿಳಿಸಿ “ಪ್ರತಿ ವರ್ಷ ಅನೇಕ ದೇಗುಲಗಳು ನಿರ್ಮಾಣವಾಗುತ್ತಿವೆ. ಆದರೆ, ಜನರ ಹೃದಯದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳು ಬೆಳೆಯುತ್ತಿಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ,” ಎಂದು ಕಳವಳ ವ್ಯಕ್ತಪಡಿಸಿ “ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡಬೇಕು. ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಅವರ ಹೃದಯದಲ್ಲಿ ಬಿತ್ತಬೇಕು. ಇಲ್ಲದಿದ್ದರೆ, ಪಕ್ಕದ ರಾಷ್ಟ್ರಗಳಲ್ಲಿರುವಂತೆ ಕ್ರೂರತ್ವ ಬೆಳೆಯುವ ಅಪಾಯವಿದೆ” ಎಂದು ಎಚ್ಚರಿಸಿದ ಶ್ರೀಗಳು ದೇಗುಲ ಕಟ್ಟಿದ್ದು ಸಾರ್ಥಕವಾಗುತ್ತದೆ. “ದುಶ್ಚಟಗಳನ್ನು ಮಠಾಧೀಶರ ಪಾದಕ್ಕೆ ಅರ್ಪಿಸಿ, ಉತ್ತಮ ಸಂಸ್ಕಾರ ಮತ್ತು ಆಚಾರಗಳನ್ನು ಬೆಳೆಸಿಕೊಂಡಾಗ ಮಾತ್ರ ದೇವರು ನಮ್ಮ ಹೃದಯದಲ್ಲಿ ನೆಲೆಸುತ್ತಾನೆ. ಆಗ ನಮಗೂ ನಿಜವಾದ ಸಂತಸ ಲಭಿಸುತ್ತದೆ” ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಪಟೇಲ್ ರುದ್ರಪ್ಪ, ಜಯ್ಯಣ್ಣ, ಆರೂಢಚಾರ್ಯ, ಪ್ರಸನ್ನಕುಮಾರ್, ನಿರಂಜನ್ ಪಾಪಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು. ಪಟೇಲ್ ಶಿವಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದಕ್ಕೂ ಮುನ್ನಾ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಮಠದ ಶಿಲಾಮಠ ತಾವರೆಕೆರೆ, ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ(ರಿ)ಯ ಗೌರವಾಧ್ಯಕ್ಷರಾದ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳನ್ನು ಸಿದ್ದಾಪಿರ ಗ್ರಾಮದ ದ್ವಾರ ಭಾಗಿಲಿಂದ ಗ್ರಾಮದವರೆಗೂ ವಿವಿಧ ರೀತಿಯ ಮಂಗಳ ವಾದ್ಯದೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ವೇದಿಕೆ ಕರತರಲಾಯಿತು. ಇದೇ ಸಮಯದಲ್ಲಿ
ಶ್ರೀ ಭದ್ರಕಾಳಮ್ಮ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ಶಿಲ್ಪಿಗಳು, ಅರ್ಚಕರು, ಪುರೋಹಿತರನ್ನು ಸನ್ಮಾನಿಸಲಾಯಿತು.

ಲೋಕ ಕಲ್ಯಾಣಾರ್ಥವಾಗಿ ಮೇ.13 ರಂದು ಗಂಗಾ ಪೂಜೆ, ಗೋ ಪೂಜೆ, ದೀಪ ಪೂಜೆ, ಗಣಪತಿ ಸ್ವಸ್ತಿ ಪುಣ್ಯಾಹ ವಾಚನ ಹಾಗೂ ವಿಗ್ರಹ ಸಂಸ್ಕಾರ ಪೂಜಾ ಕಾರ್ಯಕ್ರಮ ಹಾಗೂ ಮೇ. 14ರ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಕಲಶ ಸ್ಥಾಪನೆ, ಉತ್ಸವಮೂರ್ತಿಗೆ ಪ್ರಾಣ ಪತ್ರಿಷ್ಠೆ, ರುದ್ರಾಭಿಷೇಕ, ಗಣ ಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಿದ್ದಾಪುರ ಹಾಗೂ ಸುತ್ತಾ-ಮುತ್ತಲ್ಲಿನ ಗ್ರಾಮಸ್ಥರು ಹಾಗೂ ಸಮಸ್ತ ಭಕ್ತಾದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *