ಮಳೆಯಿಂದ ಉಕ್ಕೇರಿದ ಯಮುನೆ; ತಾಜ್​ಮಹಲ್ ಗೋಡೆಗೂ ಅಪ್ಪಳಿಸಿದ ನೀರು! ಅಪಾಯವಿಲ್ಲವೆಂದ ಪುರಾತತ್ವ ಇಲಾಖೆ

ಯಮುನಾ ನದಿ ಪಾತ್ರದಲ್ಲಿರುವ ಐತಿಹಾಸಿಕ ಪ್ರೇಮ ಸ್ಮಾರಕ ತಾಜ್​ಮಹಲ್​ ಪ್ರವಾಹಕ್ಕೆ ತುತ್ತಾಗಿದೆ. ನೀರು ಅದರ ಗೋಡೆಗಳಿಗೆ ಬಂದು ಅಪ್ಪಳಿಸುತ್ತಿದೆ. ಆದರೆ, ಸ್ಮಾರಕಕ್ಕೆ ಅಪಾಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದೆ.

ಆಗ್ರಾ (ಉತ್ತರಪ್ರದೇಶ): ವ್ಯಾಪಕ ಮಳೆಯಿಂದಾಗಿ ಯಮುನಾ ನದಿ ಉಕ್ಕೇರಿದ್ದು, ದೆಹಲಿಯನ್ನು ಮುಳುಗಿಸಿದೆ.

ಇತ್ತ ಅದೇ ನದಿ ದಡದ ಮೇಲಿರುವ ತಾಜ್​ಮಹಲ್​ವರೆಗೂ ನೀರು ನುಗ್ಗಿದೆ. ಐತಿಹಾಸಿಕ ಮಹಲ್​ನ ಗೋಡೆಗಳವರೆಗೆ ನೀರು ಬಂದು ನಿಂತಿದೆ. ಇಷ್ಟಾದರೂ ಇದರಿಂದ ಸ್ಮಾರಕಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ನದಿನೀರಿನ ಮಟ್ಟವು 499 ಅಡಿಗಳಷ್ಟು ಮೇಲೆ ಬಂದಿದೆ. ಇದು ಮಧ್ಯಮ ಪ್ರವಾಹದ ಮಟ್ಟವಾಗಿದೆ. ಮಂಗಳವಾರ ಈ ಭಾಗದಲ್ಲಿ 499.97 ಅಡಿಯಷ್ಟು ನೀರು ಬಂದ ಕಾರಣ ತಾಜ್​ಮಹಲ್‌ನ ಗೋಡೆಗಳವರೆಗೆ ನೀರು ಬಂದಿದೆ. ಹಿಂದಿನ ಭಾಗದ ಉದ್ಯಾನವನ್ನು ಸಂಪೂರ್ಣವಾಗಿ ಮುಳುಗಿಸಿದೆ. 1978 ಮತ್ತು 2010 ರಲ್ಲಿ ಪ್ರವಾಹ ಬಂದು ಇದೇ ರೀತಿ ಆಗಿತ್ತು. ಆದರೆ, ಏನೂ ಆಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಸ್ಮಾರಕದಲ್ಲಿನ ಮುಖ್ಯ ಸಮಾಧಿಯನ್ನು 42 ಬಾವಿಗಳ ಅಡಿಪಾಯದ ಮೇಲೆ ಎತ್ತರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಎಷ್ಟೇ ನೀರು ಬಂದರೂ ತಾಜ್​ಮಹಲ್​ ಮುಳುಗಲ್ಲ. ಯಾವುದೇ ಹಾನಿ ಕೂಡ ಉಂಟಾಗುವುದಿಲ್ಲ. ಉದ್ಯಾನವನಗಳು ನೀರು ತುಂಬಿಕೊಂಡಿವೆ. ಪ್ರವಾಹ ಇಳಿದ ಬಳಿಕ ಸ್ವಚ್ಛ ಮಾಡಲಾಗುವುದು ಎಂದು ಅಧಿಕಾರಿಗಳ ಸ್ಪಷ್ಟನೆ.

1978 ರಲ್ಲಿ ನೆಲಮಾಳಿಗೆಗೆ ನುಗ್ಗಿದ್ದ ನೀರು: 2010 ಮತ್ತು 1978 ರಲ್ಲಿ ಭೀಕರ ಪ್ರವಾಹ ಉಂಟಾಗಿ ಯಮುನಾ ನದಿ ಭೋರ್ಗರೆದು ತಾಜ್​ಮಹಲ್‌ನ ಗೋಡೆಗಳವರೆಗೆ ಬಂದಿತ್ತು. ಅದರಲ್ಲೂ 1978 ರ ಪ್ರವಾಹದಲ್ಲಿ ಸ್ಮಾರಕದ ನೆಲಮಾಳಿಗೆಗೆ ನೀರು ನುಗ್ಗಿತ್ತು. ಬಳಿಕ ಪ್ರವಾಹ ಇಳಿದು ನೀರು ಇಂಗಿತ್ತು. ಸ್ಮಾರಕಕ್ಕೆ ಯಾವುದೇ ಸಮಸ್ಯೆಯಾಗಿರಲಿಲ್ಲ ಎಂದು ತಾಜ್​ಮಹಲ್‌ ಸಂರಕ್ಷಣಾ ಸಹಾಯಕ ರಾಜಕುಮಾರ ವಾಜಪೇಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

1978 ರ ಪ್ರವಾಹದಲ್ಲಿ ನೀರು ನುಗ್ಗಿದ್ದರಿಂದ್ದ ಸ್ಮಾರಕದಲ್ಲಿ ಹೂಳು ತುಂಬಿಕೊಂಡಿತ್ತು. 508 ಅಡಿಗಳಷ್ಟು ನೀರು ಬಂದಿತ್ತು. ಇದು ಭೀಕರ ಪ್ರವಾಹವಾಗಿತ್ತು. ಪೂರ್ವ ಗೇಟ್‌ನಲ್ಲಿರುವ ಸಂದಲಿ ಮಸೀದಿ ಮತ್ತು ಪಶ್ಚಿಮ ಗೇಟ್‌ನಲ್ಲಿನ ಖಾನ್-ಎ-ಆಲಂ ನರ್ಸರಿಯವರೆಗೂ ನೀರು ತುಂಬಿಕೊಂಡಿತ್ತು. ಅದಾದ ಬಳಿಕ ಪ್ರವಾಹದ ನೀರಿನಿಂದ ಸ್ಮಾರಕವನ್ನು ರಕ್ಷಿಸಲು ಎರಡು ರಕ್ಷಣಾ ಗೋಡೆಗಳನ್ನು ನಿರ್ಮಿಸಾಗಿದೆ. ಒಂದನ್ನು ಬಸಾಯಿ ಘಾಟ್‌ನಲ್ಲಿ ಮತ್ತು ಇನ್ನೊಂದನ್ನು ದಸರಾ ಘಾಟ್‌ನಲ್ಲಿ ಕಟ್ಟಲಾಗಿದೆ. ಇದು ನದಿ ನೀರನ್ನು ತಡೆಹಿಡಿಯುತ್ತದೆ ಎಂದು ಮಾಹಿತಿ ನೀಡಿದರು.

ಕೆಲವೆಡೆ ಜನರಿಗೆ ನಿರ್ಬಂಧ: ನದಿ ಪ್ರವಾಹದ ನೀರು ಹರಿದುಬಂದ ಕಾರಣ ಇಲ್ಲಿನ ಮೆಹ್ತಾಬ್ ಬಾಗ್ ಅನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ನದಿ ನೀರು ಉದ್ಯಾನದ ಆವರಣ ತುಂಬಿಕೊಂಡಿದೆ. ನದಿ ತಟದ ಘಾಟ್‌ಗಳಲ್ಲಿ ಜನರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/maleyindha+ukkeridha+yamune+taaj+mahal+godegu+appalisidha+niru+apaayavillavendha+puraatatva+ilaakhe-newsid-n519856904?listname=newspaperLanding&topic=bharat&index=0&topicIndex=1&mode=pwa&action=click

Leave a Reply

Your email address will not be published. Required fields are marked *