ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ, ಯಾರು ಈ ಸಿಪಿ ರಾಧಾಕೃಷ್ಣನ್?

(ಆ.18) ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿ ಆಯ್ಕೆ ಕುರಿತು ಸಭೆ ಸೇರಿದ್ದ ಬಿಜೆಪಿ ಸುದೀರ್ಘ ಚರ್ಚೆ ಬಳಿಕ ಅಭ್ಯರ್ಥಿ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಿಸಲಾಗಿದೆ.

ತಮಿಳುನಾಡು ಮೂಲದ ಸಿಪಿ ರಾಧಕೃಷ್ಣನ್ ಹೆಸರು ಘೋಷಣೆಗೆ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದೆ.

ತಮಿಳುನಾಡು ಮೂಲದ ಸಿಪಿ ರಾಧಾಕೃಷ್ಣನ್

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗಮನಸೆಳೆದಿದ್ದ ಸಿಪಿ ರಾಧಾಕೃಷ್ಣನ್ ಬಳಿಕ ಕೊಯಂಬತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜಕೀಯ ಜೀವನದ ನಿಸ್ವಾರ್ಥ ಸೇವೆ ಸಲ್ಲಿಸಿದ ಸಿಪಿ ರಾಧಕೃಷ್ಣನ್ ಅವರನ್ನು ಬಿಜೆಪಿ ರಾಜ್ಯಾಪಾಲರಾಗಿ ನೇಮಕ ಮಾಡಿತ್ತು. ಪುದುಚೇರಿ, ಜಾರ್ಖಂಡ್ ಹಾಗೂ ಸದ್ಯ ಮಹಾರಾಷ್ಟ್ರ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಿಳುನಾಡು ಮೂಲದ ರಾಧಾಕೃಷ್ಣನ್ ಅಭ್ಯರ್ಥಿ ಘೋಷಣೆ ಹಿಂದೆ ತಮಿಳುನಾಡು ಚುನಾವಣೆ ರಣತಂತ್ರವೂ ಅಡಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಸಿಪಿ ರಾಧಾೃಷ್ಣನ್ ತಮ್ಮ 16ನೇ ವಯಸ್ಸಿನಿಂದ ಆರ್‌ಎಸ್‌ಎಸ್ ಸ್ವಯಂ ಸೇವಕರಾಗಿದ್ದಾರೆ. ಇದೀಗ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್, ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2004 ರಿಂದ 2007ರ ವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳುನಾಡಿನಲ್ಲಿ 93 ದಿನಗಳ ರಥಯಾತ್ರೆ ನಡೆಸಿ ಪಕ್ಷ ಸಂಘಟಿಸಿದ ಕೀರ್ತಿೂ ರಾಧಾಕೃಷ್ಣನ್‌ಗಿದೆ. 2012ರಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲಿನ ದಾಳಿ ವಿರೋಧಿಸಿ ಮೆಟ್ಟುಪಾಲಯಂನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತಮಿಳನಾಡು ಪೊಲೀಸರು ಬಂಧಿಸಿದ್ದರು.

2004ರ ವಿಶ್ವಸಂಸ್ಥೆಗೆ ತೆರಳಿದ ಪಾರ್ಲಿಮೆಂಟ್ ನಿಯೋಗದ ಸದಸ್ಯರಾಗಿದ್ದ ಸಿಪಿ ರಾಧಾಕೃಷ್ಣನ್, 58ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು.2014ರಲ್ಲಿ ತೈವಾನ್ ದೇಶಕ್ಕೆ ತೆರಳಿದ ಭಾರತ ನಿಯೋಗದ ಸದಸ್ಯರಾಗಿದ್ದರು. 2016ರಿಂದ 2020ರ ವರೆಗೆ ಭಾರತದ ಕೊಯಿರ್ ಬೋರ್ಡ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯಪಾಲರಾಗಿ ಸೇವೆ

2023ರಲ್ಲಿ ಸಿಪಿ ರಾಧಾಕೃಷ್ಣನ್ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ ಮಾಡಿತ್ತು. 2024ರಲ್ಲಿ ಹೆಚ್ಚುವರಿಯಾಗಿ ಪುದುಚೇರಿ ರಾಜ್ಯಪಾಲರ ಜವಾಬ್ದಾರಿಯನ್ನು ನೀಡಲಾಗಿತ್ತು. ತೆಲಂಗಾಣ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಜುಲೈ 27, 2024ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಕಳೆದ ಒಂದು ವರ್ಷದಿಂದ ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮಿಳುನಾಡಿನ ಮೋದಿ ಎಂದೇ ಜನಪ್ರಿಯ

ದಕ್ಷಿಣ ಭಾರತದ ಬಿಜೆಪಿಯ ಹಿರಿಯ ನಾಯಕರಾಗಿರುವ ಸಿಪಿ ರಾಧಾಕೃಷ್ಣನ್, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಾಯಕನಾಗಿ, ಸ್ವಯಂ ಸೇವಕ ಸಂಘದ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯ ಎಲ್ಲಾ ನಾಯಕರು ಸಿಪಿ ರಾಧಕೃಷ್ಣನ್ ಅವರಿಗೆ ಅತ್ಯಂತ ಗೌರವ ನೀಡುತ್ತಾರೆ. ಇಷ್ಟೇ ಅಲ್ಲ ಸಿಪಿ ರಾಧಾಕೃಷ್ಣನ್ ತಮಿಳುನಾಡಿನ ಮೋದಿ ಎಂದು ಜನಪ್ರಿಯರಾಗಿದ್ದಾರೆ.

Source: Suvarna News

Views: 253

Leave a Reply

Your email address will not be published. Required fields are marked *