ಶಾಮನೂರು ಶಿವಶಂಕರಪ್ಪರ ಅಗಲಿಕೆ: ರಾಜಕೀಯ, ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

ಶಾಮನೂರು ಶಿವಶಂಕರಪ್ಪನವರಿಗೆ ಸಂತಾಪ ತಿಳಿಸಿದ ಭೀಮಸಮುದ್ರ ರಾಜಕೀಯ ವ್ಯಕ್ತಿಗಳು ಹಾಗೂ ವೀರಶೈವ ಸಮಾಜದ ಮುಖಂಡರುಗಳು.

ದಾವಣಗೆರೆ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನವು ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿವಿಧ ಪಕ್ಷಗಳ ನಾಯಕರು, ಸಮಾಜದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪರು ರಾಜಕಾರಣವನ್ನು ಅಧಿಕಾರವಲ್ಲ, ಸೇವೆ ಎಂದು ಭಾವಿಸಿ ಜೀವನಪೂರ್ತಿ ದಾನ, ಧರ್ಮ ಹಾಗೂ ಸಾರ್ವಜನಿಕ ಸೇವೆಗೆ ತಮ್ಮನ್ನು ಅರ್ಪಿಸಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು ಎಂದರು. ಕಾಲೇಜುಗಳು, ಸಕ್ಕರೆ ಕಾರ್ಖಾನೆಗಳು, ಆಸ್ಪತ್ರೆಗಳ ಸ್ಥಾಪನೆಯ ಮೂಲಕ ಸಾರ್ವಜನಿಕ ಜೀವನಕ್ಕೆ ಶಾಶ್ವತ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ದಾವಣಗೆರೆಗೂ ಮಾತ್ರವಲ್ಲದೆ ಇಡೀ ರಾಜ್ಯಕ್ಕೂ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಹಾಗೂ ಉದ್ಯಮಿ ಜಿ.ಎಸ್. ಅನಿತ್ ಕುಮಾರ್ ಸಂತ ಅಪ್ಪ ಅವರು ಶ್ರದ್ಧಾಂಜಲಿ ಸಲ್ಲಿಸಿ, ವೀರಶೈವ ಸಮಾಜದ ಹಿರಿಯ ನಾಯಕನ ಅಗಲಿಕೆಯಿಂದ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದರು.

ಕೃಷಿಕ ಹಾಗೂ ಉದ್ಯಮಿ ಬಿ.ಟಿ. ಪುಟ್ಟಪ್ಪ ಮಾತನಾಡಿ, ಶಾಮನೂರು ಶಿವಶಂಕರಪ್ಪರನ್ನು ದಾವಣಗೆರೆ ಅಭಿವೃದ್ಧಿಯ ಹರಿಕಾರರೆಂದು ವರ್ಣಿಸಿದರು. ವೀರಶೈವ ಸಮಾಜಕ್ಕೂ ವೈಯಕ್ತಿಕವಾಗಿಯೂ ಅವರೊಂದಿಗೆ ಆತ್ಮೀಯ ಸಂಬಂಧವಿತ್ತು. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಚಿತ್ರದುರ್ಗ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಅವರು, 2002ರಲ್ಲಿ ತಮ್ಮನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿಸಲು ಹಾಗೂ 2013ರಲ್ಲಿ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆಯಲು ಶಾಮನೂರು ಶಿವಶಂಕರಪ್ಪರು ಸಹಕರಿಸಿದ್ದರು ಎಂದು ಸ್ಮರಿಸಿದರು. ಅಜಾತಶತ್ರುವಂತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅವರು ದೀರ್ಘಕಾಲ ಶಾಸಕರಾಗಿರುವುದು ಅಪರೂಪದ ಸಾಧನೆ ಎಂದು ಹೇಳಿದರು.

ಚಿತ್ರದುರ್ಗ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಮಾತನಾಡಿ, ವೀರಶೈವ ಸಮಾಜವನ್ನು ಒಗ್ಗೂಡಿಸುವಲ್ಲಿ ಶಾಮನೂರು ಶಿವಶಂಕರಪ್ಪರ ಪಾತ್ರ ಮಹತ್ವದ್ದಾಗಿತ್ತು. ಯಾವುದೇ ಅಧಿಕಾರಾಸೆಯಿಲ್ಲದೆ ರಾಜಕೀಯದಲ್ಲಿ ಸೇವೆ ಮಾಡಿದ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪರ ನಿಧನಕ್ಕೆ ರಾಜಕೀಯ ವಲಯ, ಸಮಾಜದ ವಿವಿಧ ವರ್ಗಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಸೇವೆ ಮತ್ತು ಕೊಡುಗೆಗಳು ಸದಾ ಸ್ಮರಣೀಯವಾಗಿರುತ್ತವೆ.

Views: 11

Leave a Reply

Your email address will not be published. Required fields are marked *