ಬೆಂಗಳೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಮಾ.21ರಿಂದ ಏ.4ರವರೆಗೆ ನಡೆಯಲಿದೆ. ಈ ಸಂಬಂಧ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಎಸ್‌ಎಸ್‌ಎಲ್‌ಸಿಗೆ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 15,881 ಶಾಲೆಗಳ 8,42,817 ವಿದ್ಯಾರ್ಥಿಗಳು, 38,091 ಪುನರಾವರ್ತಿತ ಮತ್ತು 15,539 ಖಾಸಗಿ ಸೇರಿ 8,96,447 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
3,35,468 ಬಾಲಕರು, 3,78,389 ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಇದ್ದಾರೆ. 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಎಸ್‌ಎಸ್‌ಎಲ್‌ಸಿಗೆ 2,818 ಸ್ಥಾನಿಕ, ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1,662 ವಿಚಕ್ಷಣ ದಳವನ್ನು ಪರೀಕ್ಷಾ ಭದ್ರತೆ ದೃಷ್ಟಿಯಿಂದ ನೇಮಿಸಲಾಗಿದೆ.
1,117 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ನಿಗದಿ ಮಾಡಲಾಗಿದೆ. 65 ಸಾವಿರ ಮೌಲ್ಯಮಾಪಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಬಸವ ರಾಜೇಂದ್ರ ತಿಳಿಸಿದ್ದಾರೆ.
ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ 8,96,447 ನೋಂದಣಿ ಮಾಡಿಕೊಂಡಿದ್ದು, 26,479 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಬಿಗಿ ಭದ್ರತೆಯಲ್ಲಿ ಪರೀಕ್ಷೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದೆ. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದ್ದು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಪರಿಗಣಿಸಿ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಿಸಲಾಗುತ್ತದೆ.
ಹಾಗೆಯೇ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳ ವಿರುದ್ಧ ಶಿಕ್ಷಣ ಕಾಯ್ದೆ ನಿಯಮಗಳಡಿ ಅಗತ್ಯವಾದ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಪರೀಕ್ಷೆ ನಡೆಸಲು ಸೂಕ್ತ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ.
ಕನಿಷ್ಠ ಉತ್ತೀರ್ಣ ಅಂಕ 35ಕ್ಕೆ ನಿಗದಿ
ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ಕನಿಷ್ಠ ಉತ್ತೀರ್ಣರಾಗಲು ಶೇ.35 ಅಂಕಗಳನ್ನು ನಿಗದಿ ಮಾಡಿದೆ.
ಕಳೆದ ವರ್ಷ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರಿಂದ ಲಿತಾಂಶ ಕುಸಿತವಾದ ಹಿನ್ನೆಲೆಯಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಈ ವರ್ಷ ಹಿಂದಿನ ನಿಯಮಗಳಂತೆ ಶೇ.35ಕ್ಕೆ ನಿಗದಿ ಮಾಡಲಾಗಿದೆ. ಇದರಲ್ಲಿ ಥಿಯೆರಿಯಲ್ಲಿ ಪ್ರಥಮ ಭಾಷೆಯಲ್ಲಿ 35 ಹಾಗೂ ಇತರೆ ವಿಷಯಗಳಲ್ಲಿ ಕನಿಷ್ಠ 28 ಅಂಕ ಮತ್ತು ಆಂತರಿಕ ಅಂಕಗಳು ಸೇರಿ ಒಟ್ಟು 35 ಪಡೆದಿರಬೇಕು.