ಚಿತ್ರದುರ್ಗ ಜು. 22 : ದಾರಿಯನ್ನು ತಪ್ಪಿದಾಗ ಒಳ್ಳೆಯ ದಾರಿಯನ್ನು ತೋರಿಸುವವನೇ ಗುರು, ಮಾನವನ ಮನಸ್ಸಿನ ಕತ್ತಲೆಯನ್ನು ದೂರು ಮಾಡುವವರೆ ನಿಜವಾದ ಗುರಗಳಾಗಿದ್ದಾರೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಕಬೀರಾನಂದಾಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಗುರು ಪೂರ್ಣಿಮಯ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಮನಸ್ಸಿನ ದುಃಖವನ್ನು ಕಳೆಯುವವನು ಗುರುವಾಗುತ್ತಾನೆ. ಗುರಿವಿನ ಪಾದಗಳಲ್ಲಿ ನಮ್ಮ ಮನಸ್ಸನ್ನು ನೀಡದೇ ಹೋದರೆ ನಮ್ಮಲ್ಲಿನ ಸಂಪತ್ತು ಯಾವ ಪ್ರಯೋಜಕ್ಕೂ ಸಹಾ ಬರುವುದಿಲ್ಲ, ನಮ್ಮೆಲ್ಲಾ ಜ್ಞಾನಕ್ಕೆ ಗುರುವಿನ ಕಾರುಣ್ಯ ಅಗತ್ಯವಾಗಿದೆ. ಗುರುವಿನ ಕೃಪೆ ಬಾರದೆ ಹೋದರೆ ನಾವು ಯಾವ ವಿದ್ಯೆಯಲ್ಲಿಯೂ ಸಹಾ ಪರಿಣಿತಿಯನ್ನು ಹೊಂದಲು ಸಾಧ್ಯವಿಲ್ಲ. ನಮ್ಮ ಮನಸ್ಸಿನ ದುಃಖವನ್ನು ಕಳೆಯುವವನೆ ನಿಜವಾದ ಗುರುವಾಗಿದ್ದಾನೆ, ನಮ್ಮಲ್ಲಿ ಅಜ್ಞಾನ ಎಂಬ ಕಣ್ಣು ರೋಗ ಬಂದಿದೆ ಅದನ್ನು ಜ್ಞಾನ ಎಂಬ ಔಷಧಿಯಿಂದ ಯಾರು ತೆರೆಯುತ್ತಾರೋ ಅವರೇ ಗುರು ಎಂದರು.

ಗುರುವಾದವರಿಗೆ ಜಾತಿ, ಮತಗಳಿಲ್ಲ, ಯಾರು ಅಜ್ಞಾನದಿಂದ ಬಳಲಿ ಬಂದವರಿಗೆ ಜ್ಞಾನವನ್ನು ನೀಡುವವನೇ ಗುರುವಾಗಿರುತ್ತಾನೆ. ತಮ್ಮ ಜ್ಞಾನಾರ್ಜನೆ ತಕ್ಕಂತೆ ಗುರುಗಳು ಇರುತ್ತಾರೆ. ಆಸೆಗೆ ಅಜ್ಞಾನವೇ ಕಾರಣವಾಗಿದೆ ಇದರಿಂದ ಮಾನವಗಳಿಕೆಯಲ್ಲಿ ತೊಡಗುತ್ತಾನೆ. ನಾನು, ನನ್ನದು ಎನ್ನುವುದು ದುಃಖಕ್ಕೆ ಕಾರಣವಾಗಿದೆ. ಮನಸ್ಸಿನ ಖಾಯಿಲೆ ದೂರವಾಗಬೇಕಾದರೆ ಗುರುವಿನ ಅನುಗ್ರಹ ಅಗತ್ಯವಾಗಿದೆ. ಗುರುಗಳ ಸನ್ನಿಧಾನದಲ್ಲಿಯೇ ಜ್ಞಾನವನ್ನು ಪಡೆಯಬೇಕಿದೆ. ಗುರು ಎಂದರೆ ಶಿಕ್ಷಕ ಎಂದು ಅರ್ಥವಲ್ಲ, ಕಂಡ ಕಂಡವರೆಲ್ಲ ಗುರುಗಳಾಗಲು ಸಾಧ್ಯವಿಲ್ಲ, ಇನ್ನೂಬ್ಬರ ಹಿತವನ್ನು ಕಾಯುವವನೇ ಗುರು. ಸರ್ವ ಜನ ಸುಖಿನೋಭವಂತು ಎನ್ನುವವರೆ ಗುರು ಆಗಿದ್ದಾರೆ ಎಂದರು.
ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಹುರುಳಿ ಬಸವರಾಜು ಮಾತನಾಡುತ್ತಾ ಜನನ ಮರಣಗಳ ನಡುವಿನ ಮನುಷ್ಯರ ಜೀವನದಲ್ಲಿ ನೋವು,ನಲಿವು ಸದಾ ಇದ್ದೇ ಇರುತ್ತದೆ. ಈ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸುವ ಮರ್ಮವನ್ನು ತಿಳಿಸಿ ಆ ಮೂಲಕ ಸಮನ್ವಯದಿಂದ ನಡೆಸಲು ಹೇಳುವವನೇ ಗುರು ತಾಯಿ ,ತಂದೆ, ಶೈಕ್ಷಣಿಕ ಗುರು ಜೊತೆಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಾವು ಹೆಜ್ಜೆ ಇಡಬೇಕಾದರೆ ಅದಕ್ಕೂ ಮಾರ್ಗದರ್ಶಕ ಗುರು ಬೇಕಾಗುತ್ತಾನೆ. ಕನ್ನಡ ನಾಡಿನಲ್ಲಿ ಕಾಲಕಾಲಕ್ಕೆ ಅನೇಕ ಗುರು ಪರಂಪರೆಯ ದೊಡ್ಡ ಶಕ್ತಿ ಮುನ್ನಡೆಸಿರುವುದನ್ನು ನಾವು ಕಾಣಬಹುದಾಗಿದೆ. ಅಜ್ಞಾನ, ಅಂಧಕಾರ ಓಡಿಸುವ ಮೂಲಕ ಜೀವನವನ್ನು ಸನ್ಮಾರ್ಗದತ್ತ ನಡೆಸುವುದೆ ಗುರುವಿನ ಕೆಲಸವಾಗಿದೆ. ಹಾಗೆ ಇಂದಿನ ಮಕ್ಕಳಿಗೆ ಅಂಕಗಳಿಕೆಯೇ ಕೇವಲ ಶಿಕ್ಷಣದ ಗುರಿಯಲ್ಲ. ಉತ್ತಮ ಸಂಸ್ಕಾರ, ಸನ್ನಡತೆ ಕಲಿಸುವುದು ಶಿಕ್ಷಣದ ಗುರಿ ಎನ್ನುವುದನ್ನು ನಮ್ಮ ಶಾಲಾ-ಕಾಲೇಜುಗಳು ಕಲಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮ ಸುಬ್ರರಾಯ, ಮಂಜುನಾಥ್ ಗುಪ್ತ, ರಾಮಮೂರ್ತಿ ರವರು ಮಾತನಾಡಿದರು. ಸಮಾರಂಭದಲ್ಲಿ ನಾಗರಾಜ್ ಸಂಗಂ, ಗೋಪಾಲಸ್ವಾಮಿ ನಾಯ್ಕ್, ಓಂಕಾರ ಮೂರ್ತಿ, ಭದ್ರಾವತಿಯ ರಾಮಮೂರ್ತಿ, ಪ್ರಶಾಂತ್, ಹೋಸಳ್ಳಿಯ ಶಿವಣ್ಣ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗುರು ಪೂರ್ಣೀಮೆ ಅಂಗವಾಗಿ ಶಿವಲಿಂಗಾನಂಧ ಶ್ರೀಗಳ ಪಾದಪೂಜೆಯನ್ನು ನೇರವೇರಿಸಲಾಯಿತು. ಸುಬ್ರಾರಾಯ್ ಭಟ್ಟರು ವೇದ ಘೋಷ ಮಾಡಿದರೆ ಶಿಕ್ಷಕಿ ಸುಮನ ಪ್ರಾರ್ಥಿಸಿದರು, ವೀರಣ್ಣ ಸ್ವಾಗತಿಸಿದರು. ಆಯಿತೋಳ ವಿರೂಪಾಕ್ಷಪ್ಪ ಸಂಗಡಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.