ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು ಎಂಬುದಕ್ಕೆ ಈ ಇಬ್ಬರು ಸಹೋದರ-ಸಹೋದರಿಯರು ಸಾಕ್ಷಿಯಾಗಿದ್ದು, ತಮ್ಮ ಸಾಧನೆ ಮೂಲಕ ಸ್ಫೂರ್ತಿ ನೀಡುತ್ತಿದ್ದಾರೆ.

ಉಡುಪಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು ಎಂಬುದಕ್ಕೆ ಈ ಇಬ್ಬರು ಸಹೋದರ-ಸಹೋದರಿಯರು ಸಾಕ್ಷಿಯಾಗಿದ್ದು, ತಮ್ಮ ಸಾಧನೆ ಮೂಲಕ ಸ್ಫೂರ್ತಿ ನೀಡುತ್ತಿದ್ದಾರೆ.
ಉಡುಪಿ ಮೂಲದ ಗಣೇಶ್ ಕುಲಾಲ್ ಪಂಜಿಮಾರ್ (35) ಮತ್ತು ಅವರ ಸಹೋದರಿ ಸುಮಾ ಪಂಜಿಮಾರ್ (22) ತಮ್ಮ ಪೇಟಿಂಗ್ ಮೂಲಕ ಸಾಧನೆ ಮಾಡುತ್ತಿದ್ದು, ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ.
ಗಣೇಶ್ ಕುಲಾಲ್ ಪಂಜಿಮಾರ್ ಮತ್ತು ಸುಮಾ ಪಂಜಿಮಾರ್ ಇಬ್ಬರು ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (OI) ಎಂಬ ಆನುವಂಶಿಕ ಕಾಯಿಲೆ (ಮೂಳೆಗಳನ್ನು ದುರ್ಬಲಗೊಳಿಸುವ ಕಾಯಿಲೆ)ಯಿಂದ ಬಳುತ್ತಿದ್ದಾರೆ. ತಮಗಿರುವ ಅಂಗವೈಕಲ್ಯವನ್ನು ಲೆಕ್ಕಸದ ಇವರು ಕಲೆಯಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡಿದ್ದು, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.
ಗಣೇಶ್ ಅವರು YouTube ವೀಡಿಯೊಗಳನ್ನು ನೋಡುವ ಮೂಲಕ ಪೇಟಿಂಗ್ ಎಂಬ ಕಲೆಯನ್ನು ಕಲಿತುಕೊಂಡಿದ್ದು, ಈ ವರೆಗೂ 700ಕ್ಕೂ ಹೆಚ್ಚು ರೇಖಾಚಿತ್ರ ಹಾಗೂ ವರ್ಣರಂಜಿತ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳನ್ನು ನಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ.
ಇನ್ನು ಸುಮಾ ಅವರು ತಮ್ಮ ನೆಚ್ಚಿನ ಕ್ವಿಲ್ಲಿಂಗ್ ಕಲೆಯನ್ನು ಕಲಿತುಕೊಂಡಿದ್ದು, ಕಣ್ಮನ ಸೆಳೆಯುವ ಅನೇಕ ಕೃತಿಗಳನ್ನು ಸೃಷ್ಟಿಸಿದ್ದಾರೆ.

5 ವರ್ಷದ ಮಗುವಿದ್ದಾಗಲೇ ಗಣೇಶ್ ಅವರಿಗೆ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಕಾಯಿಲೆ ಇರುವುದಾಗಿ ತಿಳಿದುಬಂದಿದೆ. ಇನ್ನು ಸುಮಾ ಅವರಿಗೆ 7 ತಿಂಗಳ ಮಗುವಿದ್ದಾಗ ಅನುವಂಶಿಕ ಕಾಯಿಲೆ ಪತ್ತೆಯಾಗಿತ್ತು. ಇಬ್ಬರೂ 6ನೇ ತರಗತಿವರೆಗೂ ಶಾಲೆಗೆ ಹೋಗಿದ್ದು, ನಡೆಯಲು ಸಾಧ್ಯವಾಗದ ಕಾರಣ, ಶಾಲೆ ತೊರೆಯುವಂತಾಗಿತ್ತು. ಸುಮಾ ಅವರಿಗೆ ಈ ವರೆಗೂ 8 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗಣೇಶ್ ಅವರು ಕೇವಲ 22 ಕೆಜಿ ತೂಕವಿದ್ದು, ಒಮ್ಮೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ತಮ್ಮ ಈ ಸ್ಥಿತಿಯ ಹೊರತಾಗಿಯೂ ಇಬ್ಬರೂ ಶಿಕ್ಷಣದಿಂದ ವಂಚಿತರಾಗಲು ಬಯಸಿಲ್ಲ. ತಮ್ಮಿಂದ ಸಾಧ್ಯವಿಲ್ಲ ಎಂದು ಸುಮ್ಮನೆ ಕೂರಲಿಲ್ಲ. ದಾನಿಗಳ ಮೂಲಕ ಶಿಕ್ಷಣ ಪಡೆಯಲು ಪ್ರಯತ್ನಿಸಿದರು. ಈ ಪ್ರಯತ್ನದ ಫಲವಾಗಿ ದಾನಿಯೊಬ್ಬರಿಂದ ಗಣೇಶ್ ಅವರಿಗೆ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜಿಂಗ್ ಟ್ರೈಸಿಕಲ್ ವ್ಯವಸ್ಥೆಯಾಯಿದು. ಬಳಿಕ ಗಣೇಶ್ ಬಿ.ಕಾಂ ಕೋರ್ಸ್ ಪೂರ್ಣಗೊಳಿಸಿದರು. ಬಳಿಕ ಕಲೆಯತ್ತ ಗಣೇಶ್ ಅವರು ತಮ್ಮ ಪಯಣವನ್ನು ಪ್ರಾರಂಭಿಸಿದರು.
ಸಾಕಷ್ಟು ಮಂದಿ ಚಿತ್ರಕಲೆ ಕಲಿಯುವ ಸಲುವಾಗಿ ನನ್ನ ಬಳಿಗೆ ಬಂದರು. ಆದರೆ, ಅವರನ್ನು ತಿರಸ್ಕರಿಸಬೇಕಾಯಿತು. ಕಲಾಭಿಮಾನಿಗಳಿಂದ ನನಗೆ ಸಿಕ್ಕಿರುವ ಬೆಂಬಲವೇ ನಮಗೆ ಅತ್ಯುತ್ತಮ ಪ್ರೇರಣೆ ಎಂದು ಗಣೇಶ್ ಅವರು ಹೇಳಿದ್ದಾರೆ.
ಗಣೇಶ್ ಅವರು ಹಲವು ದೇವರು, ಗಣ್ಯ ವ್ಯಕ್ತಿಗಳು, ಪಕ್ಷಿ ಹಾಗೂ ಪ್ರಾಣಿಗಳ ರೇಖಾ ಚಿತ್ರಗಳನ್ನು ಬಿಡಿಸಿದ್ದಾರೆ. 100 ಕ್ಕೂ ಹೆಚ್ಚು ಕಲೆ ಮತ್ತು ಕರಕುಶಲ ಕೃತಿಗಳನ್ನು ರಚಿಸಿರುವ ಸುಮಾ, ತಮ್ಮ ಸಹೋದರ ಗಣೇಶ್ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಗಣೇಶ್ ಅವರನ್ನು ವಿವಿಧ ಸಂಘ ಸಂಸ್ಥೆಗಳು 44 ಕ್ಕೂ ಹೆಚ್ಚು ಬಾರಿ ಸನ್ಮಾನಿಸಿವೆ ಮತ್ತು 2021 ರಲ್ಲಿ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಬೆಳಗಾನ ಜಾವ ಚಿತ್ರಕಲೆ ಬಿಡಿಸುವುದು ನನಗಿಷ್ಟ. ಕಲಾಕೃತಿಗೆ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ ಎಂದು ಗಣೇಶ್ ಹೇಳಿದ್ದಾರೆ.
ಇನ್ನು ಗಣೇಶ್ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ (ಗಣೇಶ್ ಪಂಜಿಮಾರ್ ಆರ್ಟ್ಸ್) ನ್ನೂ ಕೂಡ ಹೊಂದಿದ್ದು, ಅಲ್ಲಿ ಕಲೆ ಕುರಿತು ಗಣೇಶ್ ಅವರಲ್ಲಿರುವ ಪ್ರತಿಭೆ ಹಾಗೂ ಸಮರ್ಪಣೆಯನ್ನು ನಾವು ನೋಡಬಹುದಾಗಿದೆ.
ತಮ್ಮ ಕಲೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಣೇಶ್ ಅವರು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕಷ್ಟು ಜನರು ಮೆಚ್ಚುಗೆಗಳನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಸುಮಾ ಅವರು ಕೀ ಚೈನ್ ಗಳ ತಯಾರಿಕೆ, ರೇಷ್ಮೆ ದಾರದ ಕಲೆ, ಮಣ್ಣಿನ ಕಲೆ ಮತ್ತು ಕ್ವಿಲ್ಲಿಂಗ್ ಕೆಲಸ ಮಾಡುತ್ತಿದ್ದು, ತಮ್ಮ ಕಲೆಯಿಂದಾಗಿ 20 ಸನ್ಮಾನ ಪಡೆದುಕೊಂಡಿದ್ದಾರೆ.
ಗಣೇಶ್ ಮತ್ತು ಸುಮಾ ಅವರ ಕಲೆಯನ್ನು ನೋಡಿರುವ ಮಂಗಳೂರು ಮೂಲದ ವೈದ್ಯ ಡಾ.ಅಣ್ಣಯ್ಯ ಕುಲಾಲ್ ಉಳ್ತೂರ್ ಅವರು ಮಾತನಾಡಿ, ಎಲ್ಲಾ ಅಡೆತಡೆಗಳನ್ನು ಮುರಿದು ಭರವಸೆ ಮತ್ತು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿರುವ ಗಣೇಶ್ ಮತ್ತು ಸುಮಾ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆಂದು ಹೇಳಿದ್ದಾರೆ.
ಸಾಕಷ್ಟು ಮಂದಿಗೆ ಅನುಕೂಲಗಳಿರುತ್ತವೆ. ಆದರೂ, ಪರಾವಲಂಬಿಗಳಾಗಿರುತ್ತಾರೆ. ಆದರೆ, ಜೀವನದಲ್ಲಿ ಮಾನಸಿಕ ದೈರ್ಯ ಮುಖ್ಯ ಎಂಬುದನ್ನು ಗಣೇಶ್ ಮತ್ತು ಸುಮಾ ಸಾಬೀತು ಮಾಡಿದ್ದಾರೆ. ಇಬ್ಬರೂ ದೈಹಿಕವಾಗಿ ವಿಕಲಾಂಗ ಮಕ್ಕಳ ಪೋಷಕರಿಗೆ ಸ್ಫೂರ್ತಿಯಾಗಿದ್ದಾರೆಂದು ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0