ದಕ್ಷಿಣ ಭಾರತದವರಿಗೆ ಮುಂದಿನ ಬಿಜೆಪಿ ಅಧ್ಯಕ್ಷ ಪಟ್ಟ? ಹೋಳಿ ಹಬ್ಬದ ಬಳಿಕ ಹೆಸರು ಘೋಷಣೆ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಮುಂದಿನ ವರ್ಷಗಳಲ್ಲಿ ಬಿಜೆಪಿ ದಕ್ಷಿಣ ಭಾರತದ ಮೇಲೆ ಹೆಚ್ಚಿನ ಗಮನ ಹರಿಸಲಿದ್ದು, ಜಿ. ಕಿಶನ್ ರೆಡ್ಡಿ ಮತ್ತು ದಗ್ಗುಬಾಟಿ ಪುರಂದೇಶ್ವರಿ ಅವರಂತಹ ಹೆಸರುಗಳು ದಕ್ಷಿಣದಿಂದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬರುವ ಸಾಧ್ಯತೆಯಿದೆ.

ನವದೆಹಲಿ (ಮಾರ್ಚ್ 4): ಹೋಳಿ ಹಬ್ಬದ ನಂತರ (ಮಾರ್ಚ್ 14) ಮತ್ತು ಮಾರ್ಚ್ 21ಕ್ಕೂ ಮೊದಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮುಂದಿನ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ. ಮಾರ್ಚ್ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಭೆಗೂ ಮೊದಲು ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುತ್ತದೆ ಎನ್ನಲಾಗಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಶೇ. 50ರಷ್ಟು ರಾಜ್ಯಗಳಲ್ಲಿ ಸಂಘಟನಾ ಚುನಾವಣೆಗಳ ಬಗ್ಗೆ ಬಿಜೆಪಿ ಬಹಳ ಸಕ್ರಿಯವಾಗಿದೆ. ಆಯ್ದ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾರ್ಚ್ 14ರೊಳಗೆ ಚುನಾವಣೆಗಳನ್ನು ನಡೆಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಆರ್​ಎಸ್ಎಸ್, ಬಿಜೆಪಿ, ಜೆಡಿಎಸ್ ಹುನ್ನಾರ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ

ಈ ಬಾರಿ, ಆರ್ ಎಸ್​ಎಸ್ ಸಭೆಯು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳಲಿದೆ. ಏಕೆಂದರೆ ಚರ್ಚೆಯ ಕೇಂದ್ರಬಿಂದು ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಕಾರ್ಯತಂತ್ರವಾಗಿರುತ್ತದೆ. ಇಲ್ಲಿಯವರೆಗೆ, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಸಿಕ್ಕಿಂ, ನಾಗಾಲ್ಯಾಂಡ್, ರಾಜಸ್ಥಾನ, ಅಸ್ಸಾಂ, ಚಂಡೀಗಢ, ಗೋವಾ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮೇಘಾಲಯ, ಲಕ್ಷದ್ವೀಪಗಳು ಬಿಜೆಪಿ ಸಾಂಸ್ಥಿಕ ಕೂಲಂಕುಷ ಪರೀಕ್ಷೆಗೆ ಸಾಕ್ಷಿಯಾಗಿವೆ. ನಂತರ ಪಶ್ಚಿಮ ಬಂಗಾಳದಂತಹ ರಾಜ್ಯಗಳು ಆರ್‌ಜಿ ಕರ್ ಪ್ರತಿಭಟನೆಯಿಂದಾಗಿ ತಡವಾಗಿ ಪ್ರಾರಂಭವಾದವು. ಪ್ರಸ್ತುತ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಲಾಗಿರುವುದರಿಂದ ಈಗ ಮುಂದಿನ ರಾಜ್ಯ ಅಧ್ಯಕ್ಷರ ಬಗ್ಗೆ ಯಾವುದೇ ಒಮ್ಮತವಿಲ್ಲ.

ಮುಂದಿನ ಬಿಜೆಪಿ ಅಧ್ಯಕ್ಷ ಯಾರು?:

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದ ಮೇಲೆ ಹೆಚ್ಚಿನ ಗಮನವಿದ್ದು, ಮುಂದಿನ ಬಿಜೆಪಿ ಅಧ್ಯಕ್ಷರು ದಕ್ಷಿಣ ಭಾರತದಿಂದ ಆಯ್ಕೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷರೂ ಆಗಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಹೆಸರು ಬಿಜೆಪಿ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೇಳಿಬರುತ್ತಿದೆ. ದಕ್ಷಿಣದಿಂದ ಕೇಳಿಬರುತ್ತಿರುವ ಮತ್ತೊಂದು ಹೆಸರು ಕೂಡ ಆಂಧ್ರಪ್ರದೇಶದ್ದೇ. ಆಂಧ್ರದ ದಗ್ಗುಬಾಟಿ ಪುರಂದೇಶ್ವರಿ ಪ್ರಸ್ತುತ ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷೆ. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಕೊಯಮತ್ತೂರಿನ ಶಾಸಕಿ ವನತಿ ಶ್ರೀನಿವಾಸನ್ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Source : https://tv9kannada.com/national/bjp-next-president-to-be-from-south-india-jp-nadda-successor-to-be-named-after-holi-festival-sct-986628.html

Leave a Reply

Your email address will not be published. Required fields are marked *