![BCCI and Virat Kohli](https://images.tv9kannada.com/wp-content/uploads/2023/05/BCCI-and-Virat-Kohli-1024x576.jpg)
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ (BCCI) ಜೊತೆ ಜರ್ಮನ್ ಕ್ರೀಡಾ ಸಾಮಗ್ರಿಗಳ ಕಂಪನಿ ಅಡಿಡಾಸ್ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಬಹುಕೋಟಿ ಒಪ್ಪಂದದ ಮೂಲಕ ಪ್ರತಿಷ್ಠಿತ ಅಡಿಡಾಸ್ (Adidas) ಸಂಸ್ಥೆಯೊಂದಿಗೆ ಕಿಟ್ ಪ್ರಾಯೋಜಕತ್ವಕ್ಕೆ ಸಹಿ ಹಾಕಿದೆ. ವರದಿಗಳ ಪ್ರಕಾರ, ಈ ಜರ್ಮನ್ ಕಂಪನಿ 5 ವರ್ಷಕ್ಕೆ ಬಿಸಿಸಿಐಗೆ 350 ಕೋಟಿ ರೂ. ನೀಡಲಿದೆ. ಈ ಒಪ್ಪಂದದ ಪ್ರಕಾರ ಇನ್ನುಮುಂದೆ ಟೀಮ್ ಇಂಡಿಯಾ (Team India) ಆಟಗಾರರು ತೊಡುವ ಜೆರ್ಸಿಯ ಮೇಲೆ ಅಡಿಡಾಸ್ ಕಂಪನಿಯ ಲೋಗೋ ಇರಲಿದೆ.
“ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಜೊತೆಗೆ ಬಿಸಿಸಿಐ ಪಾಲುದಾರಿಕೆಯನ್ನು ಘೋಷಿಸಲು ಸಂತೋಷವಾಗಿದೆ. ನಾವು ಕ್ರಿಕೆಟ್ ಆಟವನ್ನು ಬೆಳೆಸಲು ಬದ್ಧರಾಗಿದ್ದೇವೆ ಮತ್ತು ವಿಶ್ವದ ಪ್ರಮುಖ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಡಿಡಾಸ್ ಜೊತೆ ಪಾಲುದಾರರಾಗಲು ಹೆಚ್ಚು ಉತ್ಸುಕರಾಗಿದ್ದೇವೆ,” ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
IPL 2023: ಕೈಕೊಟ್ಟ ಬೌಲರ್ಗಳು: ಸೋಲಿನೊಂದಿಗೆ RCB ಅಭಿಯಾನ ಅಂತ್ಯ..!
I’m pleased to announce @BCCI‘s partnership with @adidas as a kit sponsor. We are committed to growing the game of cricket and could not be more excited to partner with one of the world’s leading sportswear brands. Welcome aboard, @adidas
— Jay Shah (@JayShah) May 22, 2023
ಇತ್ತೀಚೆಗೆ ಎಂಪಿಎಲ್ ಕಂಪನಿ, ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಮಧ್ಯದಲ್ಲಿ ಮುರಿದುಕೊಂಡಿತ್ತು. ಇದರ ನಂತರ ಕಿಲ್ಲರ್ ಜೀನ್ಸ್ ಕಂಪನಿ ಸ್ವಲ್ಪ ಸಮಯದವರೆಗೆ ಟೀಮ್ ಇಂಡಿಯಾದ ಜೆರ್ಸಿಯ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಆದರೆ ಈಗ ಅಡಿಡಾಸ್ ಈ ಒಪ್ಪಂದವನ್ನು ಪಡೆದುಕೊಂಡಿದೆ. 2020 ರ ವರೆಗೆ, ನೈಕ್ ಕಂಪನಿಯು ಟೀಮ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭಾರತ ತಂಡ ಮತ್ತು ನೈಕ್ ನಡುವಿನ ಒಡನಾಟ 14 ವರ್ಷಗಳ ಕಾಲ ನಡೆಯಿತು. ಇದರಡಿಯಲ್ಲಿ ಪ್ರತಿ ಪಂದ್ಯಕ್ಕೆ ನೈಕ್ ಕಂಪನಿ 85 ಲಕ್ಷ ರೂಪಾಯಿಗಳನ್ನು ಬಿಸಿಸಿಐಗೆ ಪಾವತಿಸುತ್ತಿತ್ತು.
ಐಪಿಎಲ್ 2023 ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿಯಲಿದ್ದು, ಇದರಲ್ಲಿ ಅಡಿಡಾಸ್ ಕಿಟ್ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ. ಐಸಿಸಿ ಡಬ್ಲ್ಯೂಟಿಸಿ ಫೈನಲ್ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ.
ಈಗಾಗಲೇ ಈ ಮಹತ್ವದ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ಈ ಹಿಂದೆ ಟೆಸ್ಟ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ ಕಮ್ಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು ಶುಭ್ಮನ್ ಗಿಲ್ ಆಯ್ಕೆ ಆಗಿದ್ದಾರೆ. ಕೆಎಸ್ ಭರತ್ ವಿಕೆಟ್ ಕೀಪರ್ ಆಗಿರಲಿದ್ದಾರೆ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಆಲ್ರೌಂಡರ್ಗಳಾಗಿ ನಾಲ್ವರು ಆಯ್ಕೆ ಆಗಿದ್ದು ರವಿಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದಾರೆ. ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕಟ್ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ