ಕ್ರಿಕೆಟ್ ಅನ್ನು ಕರ್ನಾಟಕದ ವಿವಿಧ ಭಾಗಗಳಿಗೂ ಹರಡಬೇಕು ಎಂಬ ದೃಷ್ಟಿಯಿಂದ ಈಗಾಗಲೇ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿಯೇ ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ರಣಜಿ ಸೇರಿದಂತೆ ಹಲವು ಮಹತ್ವದ ಪಂದ್ಯಗಳನ್ನು ನಡೆಸಲಾಗುತ್ತಿದೆ. ಇದೀಗ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇದೀಗ ನೂತನ ಪ್ರಥಮ ದರ್ಜೆ ಕ್ರೀಡಾಂಗಣ ತಲೆ ಎತ್ತಲಿದೆ. ಜೆಎಚ್ ಪಟೇಲ್ ಬಡಾವಣೆಯ 8 ಎಕರೆ ಜಾಗದಲ್ಲಿ ಸುಮಾರು 93 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಾಣ ಆಗಲಿದ್ದು ಈ ಬಗ್ಗೆ ವಿಶೇಷ ವರದಿ ಇಲ್ಲಿದೆ.
- ದಾವಣಗೆರೆ ಜಿಲ್ಲೆಯ ಕ್ರಿಕೆಟ್ ಪ್ರಿಯರ ಕನಸು ಶೀಘ್ರವೇ ಸಾಕಾರ
- ಜೆಎಚ್ ಪಟೇಲ್ ಬಡಾವಣೆಯ 8 ಎಕರೆಯಲ್ಲಿ ಸುಸಜ್ಜಿತ ಮೈದಾನ
- ರಣಜಿ, ಕೆಪಿಎಲ್ ಸೇರಿದಂತೆ ಮಹತ್ವದ ಪಂದ್ಯಗಳಿಗೆ ಅವಕಾಶ
ಭಾರತ ಕ್ರಿಕೆಟ್ ತಂಡಕ್ಕೆ ವೇಗದ ಬೌಲರ್ ವಿನಯ್ ಕುಮಾರ್ ಕೊಡುಗೆ ನೀಡಿರುವ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶೀಘ್ರದಲ್ಲಿಯೇ ಪ್ರಥಮ ದರ್ಜೆಯ ಟರ್ಫ್ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ.
ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತ ಕ್ರಿಕೆಟ್ ಮೈದಾನಬೇಕೆಂಬ ಕೂಗು ಬಹು ವರ್ಷಗಳಿಂದ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಹಾಗೂ ಆಟಗಾರರದ್ದಾಗಿತ್ತು. ಆದರೆ, ಈ ಕನಸು ನನಸಾಗದೇ ಹಾಗೆಯೇ ನನೆಗುದಿಗೆ ಬಿದ್ದಿತ್ತು. ಈಗ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಟರ್ಫ್ ಪಿಚ್‌ವುಳ್ಳ ಸುಸಜ್ಜಿತ ಮೈದಾನ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಿರುವುದರಿಂದ ಕ್ರಿಕೆಟ್ ಪ್ರಿಯರ ಕನಸಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.
2018ರಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ(ದೂಡಾ)ವು ಕೆಎಸ್‌ಸಿಎಗೆ ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ8 ಎಕರೆ 31 ಗುಂಟೆ ಜಾಗ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಮೈದಾನ ಆರಂಭಿಸಲು 2022ರಲ್ಲಿ ಪ್ರಯತ್ನ ನಡೆದಿತ್ತು. ಆದರೆ, ಕಾರಣಾಂತರದಿಂದ ಅದು ನನೆಗುದಿಗೆ ಬಿದ್ದ ಕಾರಣ ಅಲ್ಲಿ ಸಾಮಾನ್ಯ ಮೈದಾನ ನಿರ್ಮಿಸಿ, ಕಾಂಪೌಂಡ್ ನಿರ್ಮಿಸಿ ಹಾಗೆಯೇ ಬಿಡಲಾಗಿತ್ತು.
ಜೆ.ಎಚ್. ಪಟೇಲ್ ಬಡಾವಣೆಯಲ್ಲಿಟಫ್‌ರ್ ಪಿಚ್ ಸೇರಿದಂತೆ ಇತರೆ ಸೌಲಭ್ಯವುಳ್ಳ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 93 ಲಕ್ಷ ರೂ. ವೆಚ್ಚದಲ್ಲಿಟೆಂಡರ್ ನಡೆದಿದ್ದು, ಪ್ಲಾನ್ ಸಿದ್ಧಪಡಿಸಿ ಮಹಾನಗರ ಪಾಲಿಕೆ ಅಪ್ರೋವಲ್‌ಗೆ ಸಲ್ಲಿಸಲಾಗಿದೆ. ನಾಳೆ, ನಾಳಿದ್ದು ಅಪ್ರೋವಲ್ ಸಿಗುವ ನಿರೀಕ್ಷೆ ಇದೆ. ಇದು ಸಿಕ್ಕ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು.
ಕೆ.ಶಶಿಧರ್, ಕೆಎಸ್‌ಸಿಎ ತುಮಕೂರು ವಲಯ ಸಂಚಾಲಕ.
ಟೆಂಡರ್ ಪ್ರಕ್ರಿಯೆ ಪೂರ್ಣ
ಈಗ ಇದೇ ಜಾಗದಲ್ಲಿ ಕೆಎಸ್‌ಸಿಎ 93 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಇನ್ನು ಮೈದಾನದ ನೀಲನಕ್ಷೆ ತಯಾಸಿರುವ ಕೆಎಸ್‌ಸಿಎ ಅನುಮತಿಗೆ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದು, ಇನ್ನೂ ಕೆಲವೇ ದಿನಗಳಲ್ಲಿಅಪ್ರೋವಲ್ ಸಿಗುವ ಸಾಧ್ಯತೆ ಇದೆ. ಇದಾದ ಬಳಿಕ ಮೈದಾನ ನಿರ್ಮಾಣ ಪ್ರಕ್ರಿಯೆ ಶುರುವಾಗಲಿದೆ.
ಮೈದಾನದಲ್ಲಿ ಏನಿರಲಿದೆ?
ಸುಸಜ್ಜಿತ ಮೈದಾನವು ಪೆವಿಲಿಯನ್, ಟರ್ಫ್ ಪಿಚ್, ಬೇರೆ ಊರುಗಳಿಂದ ಬರುವ ಆಟಗಾರರು ಉಳಿದುಕೊಳ್ಳಲು ಡಾರ್ಮೆಟ್ರಿ, ಡ್ರಸ್ಸಿಂಗ್ ರೂಮ್ ತಲೆ ಎತ್ತಲಿವೆ. ಅಲ್ಲದೇ, ಹುಲ್ಲುಹಾಸು ಸಹ ಅಳವಡಿಸಲಾಗುವುದು. ನಿತ್ಯದ ಅಭ್ಯಾಸಕ್ಕಾಗಿ ನೆಟ್ಸ್ ವ್ಯವಸ್ಥೆ, ಪಂದ್ಯ ನಡೆದಾಗ ಪ್ರೇಕ್ಷಕರ ತಾತ್ಕಾಲಿಕ ಗ್ಯಾಲರಿ ಸಿದ್ಧಪಡಿಸಿಕೊಳ್ಳಲು ಅವಕಾಶ ಇರಲಿದೆ.
ರಣಜಿ ಪಂದ್ಯದ ಆತಿಥ್ಯದ ಅವಕಾಶ
”ನಗರದಲ್ಲಿ ಟರ್ಫ್ ಪಿಚ್ ನಿರ್ಮಾಣವಾದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ ರಣಜಿ ಸೇರಿ ಎಲ್ಲ ರೀತಿಯ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗೆ ದಾವಣಗೆರೆ ಆತಿಥ್ಯ ವಹಿಸುವ ಅವಕಾಶ ಒದಗಿ ಬರಲಿದೆ. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗೆ ಅವಕಾಶ ನೀಡುವುದರಿಂದ ಇಲ್ಲಿಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲಿವೆ. ಹಗಲು ಹೊತ್ತಿನಲ್ಲಿ ರಣಜಿ ಅಲ್ಲದೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಗಳನ್ನೂ ಸಹ ಆಯೋಜಿಸಬಹುದಾಗಿದೆ” ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.