ಸೈಫ್ ಅಲಿ ಖಾನ್​ ಮೇಲೆ ದಾಳಿ ಮಾಡಿದವ ಬಾಂಗ್ಲಾದೇಶಿ ಪ್ರಜೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹತ್ಯಾ ಪ್ರಯತ್ನ ಮಾಡಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳ್ಳಂಬೆಳಿಗ್ಗೆ ಮುಂಬೈ ಬಳಿಯ ಥಾಣೆಯಲ್ಲಿ ಸೈಫ್ ಅಲಿ ಖಾನ್​ ಮೇಲೆ ದಾಳಿ ಮಾಡಿದ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ 9 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮುಂಬೈ ಮಹಾನಗರ ವಿಭಾಗ-9ರ ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದರು.

ಬಂಧಿತ ಆರೋಪಿ ಭಾರತೀಯನಲ್ಲ ಬದಲಿಗೆ ಬಾಂಗ್ಲಾದೇಶಿ ಎಂಬ ಅನುಮಾನವಿದೆ ಎಂದ ದೀಕ್ಷಿತ್ ಅವರು, ಬಂಧಿತನ ಬಳಿ ಭಾರತಕ್ಕೆ ಸಂಬಂಧಿಸಿದ ಯಾವುದೇ ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಗಳು ಪತ್ತೆಯಾಗಿಲ್ಲ ಎಂದಿದ್ದಾರೆ. ಮುಂದುವರೆದು, ಆತ ತನ್ನ ಪರಿಚಯವನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಆತನ ಮೂಲ ಹೆಸರು ಬೇರೆಯದೇ ಇದೆಯೆಂಬ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದಾರೆ ಪೊಲೀಸರು. ಆರೋಪಿಯ ಹೆಸರು ಮೊಹಮ್ಮದ್ ಷರೀಫುಲ್ಲಾ ಇಸ್ಲಾಂ ಶೆಹ​ಜಾದ್ ಎಂದು ಸಹ ಮಾಹಿತಿ ಹಂಚಿಕೊಂಡಿದ್ದಾರೆ ಡಿಸಿಪಿ ದೀಕ್ಷಿತ್ ಗೆಡಾಮ್.

ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದು, ಇಂದು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ ಆ ನಂತರ ವಶಕ್ಕೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈಗ ಬಂಧನವಾಗಿರುವ ಆರೋಪಿ ಮುಂಬೈನ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಈತ ಇಲ್ಲಿ ಹೆಸರು ಬದಲಾವಣೆ ಮಾಡಿಕೊಂಡು ಓಡಾಡುತ್ತಿದ್ದನಂತೆ.

ಬುಧವಾರ ತಡರಾತ್ರಿ ಸೈಫ್ ಅಲಿ ಖಾನ್​ರ ಮುಂಬೈನ ಬಾಂದ್ರಾದ ಮನೆಗೆ ನುಗ್ಗಿದ್ದ ಆರೋಪಿ, ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಸೈಫ್ ಅಲಿ ಖಾನ್​ರ ಹೊಟ್ಟೆ, ಕತ್ತು, ಬೆನ್ನಿಗೆ ಆರು ಬಾರಿ ಇರಿದಿದ್ದ ಆರೋಪಿ ಸ್ಥಳದಿಂದ ಪರಾರಿ ಆಗಿದ್ದ. ಕೂಡಲೇ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೈಫ್ ಅಲಿ ಖಾನ್ ಬೆನ್ನಿನಿಂದ 2.50 ಇಂಚಿನ ಚಾಕುವನ್ನು ಹೊರತೆಗೆಯಲಾಗಿತ್ತು. ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಇಂದೇ ಸೈಫ್ ಅಲಿ ಖಾನ್ ಡಿಸ್​ಚಾರ್ಜ್ ಆಗುವ ಸಾಧ್ಯತೆ ಇದೆ.

Source : https://tv9kannada.com/entertainment/bollywood/saif-ali-khan-case-police-said-attacker-is-from-bangladesh-mcr-966118.html

Leave a Reply

Your email address will not be published. Required fields are marked *