ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರ ರಾಜ್ಯದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ (ಪಿಎಸ್ಟಿ) ಭವಿಷ್ಯವನ್ನೇ ಬುಡಮೇಲು ಮಾಡಿದೆ. ವಿದ್ಯಾರ್ಹತೆ ಪರಿಗಣಿಸದೆ ವಿಷಯವಾರು ವರ್ಗಾವಣೆ, ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯದಿಂದಾಗಿ 1.11 ಲಕ್ಷ ಶಿಕ್ಷಕರ ಸ್ಥಿತಿ ಡೋಲಾಯಮಾನವಾಗಿದೆ.

ಈ ಪರಿಸ್ಥಿತಿ ವಿರುದ್ಧ ಸಿಡಿದೆದ್ದಿರುವ ಶಿಕ್ಷಕರು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ. ರಾಜ್ಯದಲ್ಲಿ ಸುಮಾರು 80, 000 ಪಿಎಸ್ಟಿ ಶಿಕ್ಷಕರು ಬಿ.ಎ, ಬಿ.ಎಸ್ಸಿ, ಬಿ.ಎಡ್, ಎಂ.ಎ, ಎಂ.ಎಸ್ಸಿ, ಎಂ.ಎಡ್, ಎಂ.ಫಿಲ್, ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಆದರೂ ಇವರಿಗೆ ಬಡ್ತಿ ನೀಡುವ ಬದಲು ಹಿಂಬಡ್ತಿ ನೀಡಲಾಗಿದೆ!
ಬಡ್ತಿಗೆ ದೊಡ್ಡ ಪೆಟ್ಟು: 2016ಕ್ಕೂ ಮುಂಚೆ 1-7/8ಕ್ಕೆ ನೇಮಕ ಹೊಂದಿದ್ದ ಶಿಕ್ಷಕರನ್ನು ಪಿಎಸ್ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿ ಹಿಂಬಡ್ತಿ ನೀಡಲಾಗಿದೆ. 6-8ನೇ ತರಗತಿ ಬೋಧನೆಗೆಂದು ಜಿಪಿಟಿ ಎಂಬ ಹೊಸ ವೃಂದ ಸೃಜಿಸಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಇದು ಸೇವಾನಿತರ ಪಿಎಸ್ಟಿ ಶಿಕ್ಷಕರ ಸೇವೆ ಮತ್ತು ವಿದ್ಯಾರ್ಹತೆ ನಿರ್ಲಕ್ಷಿಸಿ ಹಿಂಬಡ್ತಿ ನೀಡಿದ್ದು ಸಾಂವಿಧಾನಿಕ ಆಶಯ ಉಲ್ಲಂಘಿಸಲಾಗಿದೆ. ಶಿಕ್ಷಣ ಇಲಾಖೆ ಈ ಕ್ರಮದಿಂದ ಶಿಕ್ಷಕರಿಗೆ ಸೇವಾ ಜೇಷ್ಠತೆ, ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲೆ ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆಯಲ್ಲಿ ಅನ್ಯಾಯವಾಗಿದೆ.
ಈವರೆಗೆ ಬಿ.ಎಡ್ ಅರ್ಹತೆ ಪಡೆದ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ಕೊಡುವ ನಿಯಮವಿತ್ತು. ಆದರೆ ಈಗ 1-7/8 ಶಿಕ್ಷಕರನ್ನು 1-5 ತರಗತಿ ಬೋಧನೆಗೆ ಇಳಿಸಿ ಕಡಿಮೆ ವೇತನ ಶ್ರೇಣಿಯ ಹುದ್ದೆಯಾದ 6-8ನೇ ತರಗತಿ ಬೋಧನೆಗೆ ಬಡ್ತಿ ನೀಡುತ್ತೇವೆ ಎನ್ನುತ್ತಿರುವುದರಿಂದ ಈಗಾಗಲೇ 1-7/8ನೇ ತರಗತಿ ಬೋಧನೆ ಮಾಡುತ್ತಿದ್ದ ಶಿಕ್ಷಕರಿಗೆ ಹಿಂಬಡ್ತಿಯಾಗಿದೆ.
ತೀವ್ರಗೊಂಡ ಆಕ್ರೋಶ: ಮೊದಲಿದ್ದ ಅಖಂಡ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು 1-5 ಮತ್ತು 6-8 ಎಂದು 2 ವೃಂದದಲ್ಲಿ ವಿಭಾಗಿಸಿ ಪಿಎಸ್ಟಿ ಶಿಕ್ಷಕರನ್ನು ಕೆಳವೃಂದಕ್ಕೆ ಸೀಮಿತಗೊಳಿಸಿರುವುದು ಶಿಕ್ಷಕರ ತೀವ್ರ ಅಸಮಾಧಾನಕ್ಕೆ ಇಂಬು ಮಾಡಿಕೊಟ್ಟಿದೆ. ವೃಂದ ವಿಭಜನೆ ಮಾಡಿರುವುದರಿಂದ ಬಡ್ತಿ, ವರ್ಗಾವಣೆ ಮಾತ್ರವಲ್ಲ, ವೇತನದಲ್ಲೂ ದೊಡ್ಡ ತಾರತಮ್ಯವಾಗಿದೆ.
ಬಡ್ತಿ ಇಲ್ಲದೇ ನಿವೃತ್ತಿ!: ಜಿಪಿಟಿ ಶಿಕ್ಷಕರನ್ನೂ ಮುಖ್ಯ ಶಿಕ್ಷಕರ ಹುದ್ದೆ ಬಡ್ತಿಗೆ ಪರಿಗಣಿಸಿರುವುದರಿಂದ ಸಾವಿರಾರು ಪಿಎಸ್ಟಿ ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದೂ ಬಡ್ತಿ ಇಲ್ಲದೇ ನಿವೃತ್ತರಾಗುತ್ತಿದ್ದಾರೆ!
ಪಾಠಕ್ಕೆ ಪಿಎಸ್ಟಿ, ಸೌಲಭ್ಯಕ್ಕೆ ಜಿಪಿಟಿ?: ರಾಜ್ಯದಲ್ಲಿ 51 ಸಾವಿರ ಜಿಪಿಟಿ ಶಿಕ್ಷಕರ ನೇಮಕ ಮಾಡಬೇಕಿತ್ತು. ಆದರೆ ಈವರೆಗೆ 21 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಇನ್ನೂ ಸುಮಾರು 30 ಸಾವಿರ ಜಿಪಿಟಿ ಹುದ್ದೆ ಖಾಲಿ ಇವೆ. ಜಿಪಿಟಿ ಶಿಕ್ಷಕರ ಕೆಲಸವನ್ನೂ ಈಗ ಪಿಎಸ್ಟಿ ಶಿಕ್ಷಕರೇ ನಿಭಾಯಿಸುತ್ತಿದ್ದಾರೆ. ಆದರೆ, ಈ ಶಿಕ್ಷಕರಿಗೆ ವರ್ಗಾವಣೆ, ಬಡ್ತಿ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ.
ಹಿಂದಿ ಶಿಕ್ಷಕರಿಗೆ ಪಿಎಸ್ಟಿ ಪಟ್ಟ: ಹಿಂದಿ ಬೋಧನೆ ಆರಂಭವಾಗುವುದು 6ನೇ ತರಗತಿಯಿಂದ. ಆದರೆ, 2016ಕ್ಕೂ ಮುಂಚೆ ನೇಮಕಗೊಂಡ ಹಿಂದಿ ಭಾಷಾ ಶಿಕ್ಷಕರಿಗೆ ಪಿಎಸ್ಟಿ ಪಟ್ಟ ಕಟ್ಟಿ 1-5ನೇ ತರಗತಿಗೆ ಸೀಮಿತಗೊಳಿಸಲಾಗಿದೆ. ಹಿಂದಿ ಭಾಷಾ ಶಿಕ್ಷಕರು ಯಾರಿಗೆ ಪಾಠ ಮಾಡಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರಕ್ಕೆ ಆಗ್ರಹ: ಹಿಂಬಡ್ತಿಗೊಳಗಾದ ಶಿಕ್ಷಕರನ್ನು (ಪಿಎಸ್ಟಿ) ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆ ಯೊಂದಿಗೆ ಪದನಾಮೀಕರಣ ಮಾಡುವುದರಿಂದ ನಿಯಮ ಪಾಲನೆ ಜತೆಗೆ, ಶಿಕ್ಷಕರ ವರ್ಗಾವಣೆ ಸಮಸ್ಯೆ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿ, ಪಿಎಸ್ಟಿ ಮತ್ತು ಜಿಪಿಟಿ ಹುದ್ದೆಗಳ ಸಮನ್ವಯದ ಸಮಸ್ಯೆ, ಕಾಲಮಿತಿ ಬಡ್ತಿಗಳು ಮತ್ತು ಸೇವಾ ಜೇಷ್ಠತೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಪಿಎಸ್ಟಿ ಶಿಕ್ಷಕರ ಒಕ್ಕೊರಲ ಆಗ್ರಹವಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕಾರ್ಯಕಾರಿ ಆದೇಶ ಹೊರಡಿಸಬೇಕು. ಆ ಮೂಲಕ ಉಲ್ಲಂಘಿತ ನಿಯಮ ಸರಿಪಡಿಸಬೇಕು. ಜತೆಗೆ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ, ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು.
| ಕೆ.ನಾಗೇಶ್ ಹಾಗೂ ಚಂದ್ರಶೇಖರ ನುಗ್ಗಲಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
. 2016ಕ್ಕಿಂತ ನೇಮಕವಾಗಿರುವ ಶಿಕ್ಷಕರಿಗೆ 2017ರ ಸಿ ಆಂಡ್ ಆರ್ ಅನ್ವಯಿಸಬಾರದು
. 1-7/8ಕ್ಕೆ ನೇಮಕ ಆಗಿರುವವರಿಗೆ 1-5ಕ್ಕೆ ಹಿಂಬಡ್ತಿ ನೀಡಿದ್ದನ್ನು ವಾಪಸ್ ಪಡೆಯಬೇಕು
. 2016 ಮುನ್ನ ನೇಮಕವಾದ ಎನ್ಸಿಟಿಇ ವಿದ್ಯಾರ್ಹತೆ ಇರುವರನ್ನು ಜಿಪಿಟಿಯಾಗಿ ಪರಿಗಣಿಸಿ
. ಬಿ.ಎಡ್ ಪದವಿ ಪಡೆದ ಎಲ್ಲ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು
. ಪಿಎಸ್ಟಿ ಶಿಕ್ಷಕರಿಗೆ ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು
. ಮುಖ್ಯ ಶಿಕ್ಷಕರ ಹುದ್ದೆಗೆ ಹಿಂದಿನಂತೆ ವಿದ್ಯಾರ್ಹತೆ ಪರಿಗಣಿಸಬಾರದು
. ಅಖಂಡ ಸೇವಾ ಹಿರಿತನದ ಮೇಲೆ ಬಡ್ತಿ ನೀಡಬೇಕು
Source : https://www.vijayavani.net/lakhs-of-primary-school-teachers-are-ready-to-fight