T20 World Cup : ಭಾನುವಾರ ಬಾರ್ಬಡೋಸ್ನ ಕೆನ್ನಿಂಗ್ಟನ್ ಓವೆಲ್ನಲ್ಲಿ ನಡೆದ ಸೂಪರ್8ನ ತನ್ನ ಕೊನೆಯ ಪಂದ್ಯದಲ್ಲಿ ಅಮೆರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಯುಎಸ್ಎ ನೀಡಿದ್ದ 116ರನ್ಗಳ ಸಾಧಾರಣ ಗುರಿಯನ್ನ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಫಿಲಿಪ್ ಸಾಲ್ಟ್ 58 ಎಸೆತಗಳಲ್ಲಿ ಪೂರೈಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಬಟ್ಲರ್ ಕೇವಲ 38 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ಗಳ ನೆರವಿನಿಂದ ಅಜೇಯ 83 ರನ್ಗಳಿಸಿದರೆ, ಸಾಲ್ಟ್ 21 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 25 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಸೆಮಿಫೈನಲ್ ನಿರ್ಧರಿಸುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಅದ್ಭುತ ಬೌಲಿಂಗ್ ಮಾಡಿದ ಚಾಂಪಿಯನ್ ತಂಡ ಕ್ರಿಕೆಟ್ ಶಿಸು ತಂಡವನ್ನು ಕೇವಲ 115 ರನ್ಗಳಿಗೆ ಆಲೌಟ್ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಬಟ್ಲರ್ ಕೇವಲ 9.4 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿ 2024ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಅಲ್ಪ ಮೊತ್ತಕ್ಕೆ ಆಲೌಟ್
ಈಗಾಗಲೇ ಟೂರ್ನಮೆಂಟ್ನಿಂದ ಹೊರ ಬಿದ್ದಿದ್ದ ಅಮೆರಿಕಾ ತಂಡ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಯಿತು. ಆಂಗ್ಲ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ಯುಎಸ್ಎ ನಿರಂತವಾವಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು. 24 ಎಸೆತಗಳಲ್ಲಿ 30 (24 ಎಸೆತ, 1 ಬೌಂಡರಿ, 2 ಸಿಕ್ಸರ್) ರನ್ಗಳಿಸಿದ ನಿತೀಶ್ ಕುಮಾರ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರನ್ನು ಹೊರೆತುಪಡಿಸಿದರೆ ಕೋರಿ ಆ್ಯಂಡರ್ಸನ್ 28 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 29ರನ್ಗಳಿಸಿದರೆ, ಹರ್ಮೀತ್ ಸಿಂಗ್ 17 ಎಸೆತಗಳಲ್ಲಿ 21 ರನ್ಗಳಿಸಿ 3ನೇ ಗರಿಷ್ಠ ಸ್ಕೋರರ್ ಆದರು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಗೋಲ್ಡನ್ ಬ್ಯಾಟ್ ರೇಸ್ನಲ್ಲಿದ್ದ ಆ್ಯಂಡ್ರೀಸ್ ಗೌಸ್ ಕೇವಲ 8 ರನ್ಗಳಿಸಿದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ ಸ್ಟೇವನ್ ಟೇಲರ್ 12 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಲೀಗ್ನಲ್ಲಿ ಅಬ್ಬರಿಸಿದ್ದ ನಾಯಕ ಆ್ಯರೋನ್ ಜೋನ್ಸ್ 10, ಅನುಭವಿ ಮಿಲಂದ್ ಕುಮಾರ್ 4 ರನ್ಗಳಿಸಿದರು. ಕೊನೆಯ ಮೂರು ಬ್ಯಾಟರ್ಗಳು ಸೊನ್ನೆ ಸುತ್ತಿದರು.
ಹ್ಯಾಟ್ರಿಕ್ ಪಡೆದ ಜೋರ್ಡನ್
ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಕ್ರಿಸ್ ಜೋರ್ಡನ್ 19ನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸೇರಿ 4 ವಿಕೆಟ್ ಪಡೆದರು. ಜೋರ್ಡನ್ 19 ಓವರ್ನ ಮೊದಲ ಎಸೆತದಲ್ಲಿ ಕೋರಿ ಆ್ಯಂಡರ್ಸನ್(28) ವಿಕೆಟ್ ಪಡೆದರೆ, 2ನೇ ಎಸೆತ ಡಾಟ್ ಬಾಲ್ ಆಯಿತು. ನಂತರ ಸತತ ಮೂರು ಎಸೆತಗಳಲ್ಲಿ ಆಲಿ ಖಾನ್(0), ನೊಶ್ತುಷ್ ಕೆನೆಂಜೆ (0) ಹಾಗೂ ನೇತ್ರಾವಾಲ್ಕರ್ (0) ವಿಕೆಟ್ ಪಡೆದರು. ಇದು ವಿಶ್ವಕಪ್ನಲ್ಲಿ ಇಂಗ್ಲೆಂಡ್ ಬೌಲರ್ ಪಡೆದ ಮೊದಲ ಹ್ಯಾಟ್ರಿಕ್ ಆಗಿದೆ. ಒಟ್ಟಾರೆ 2024ರ ವಿಶ್ವಕಪ್ನ 3ನೇ ಹ್ಯಾಟ್ರಿಕ್ ಆಗಿದೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಸೂಪರ್ 8ನಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಸತತ 2 ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದು ವಿಶ್ವದಾಖಲೆ ಬರೆದಿದ್ದರು.
ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ
ಯುಎಸ್ಎ ನೀಡಿದ್ದ 116ರನ್ಗಳ ಸಾಧಾರಣ ಗುರಿಯನ್ನು 9.4 ಓವರ್ಗಳಲ್ಲಿ ತಲುಪುವ ಮೂಲಕ ಇಂಗ್ಲೆಂಡ್ ಸೆಮಿಫೈನಲ್ಸ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಪಂದ್ಯ ಕಳೆದುಕೊಂಡಿದ್ದ ಇಂಗ್ಲೆಂಡ್ ಈ ಪಂದ್ಯವನ್ನು ಇನ್ನೂ 8 ಎಸೆತಗಳಿರುವಂತೆ ಗೆಲ್ಲಬೇಕಿತ್ತು. ಆದರೆ ಇನ್ನೂ 10.2 ಓವರ್ ಇರುವಂತೆ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ನಾಕೌಟ್ ಹಂತಕ್ಕೇರಿತು. ದಕ್ಷಿಣ ಆಫ್ರಿಕಾ 2ನೇ ಸ್ಥಾನಕ್ಕೆ ಕುಸಿದಿದೆ.
ಈ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ನೆಟ್ ರನ್ರೇಟ್ 0.4ರಿಂದ +1.992ಕ್ಕೆ ಏರಿಕೆಯಾಗಿದೆ. ನಾಳೆ (ಭಾರತೀಯ ಕಾಲಾಮಾನ) ನಡೆಯುವ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದವರು ಸೆಮಿಫೈನಲ್ಸ್ ಪ್ರವೇಶಿಸಲಿವೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ದಕ್ಷಿಣ ಆಫ್ರಿಕಾ ಈಗಾಗಲೇ 4 ಅಂಕಗಳನ್ನು ಹೊಂದಿದೆ. ಆದರೆ ರನ್ರೇಟ್ನಲ್ಲಿ ವಿಂಡೀಸ್ ಮತ್ತು ಇಂಗ್ಲೆಂಡ್ಗಿಂತ ಹಿಂದೆ ಬಿದ್ದಿರುವುದರಿಂದ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ ಮಾತ್ರ ಸೆಮಿಫೈನಲ್ಸ್ ಪ್ರವೇಶಿಸಲು ಅನುಕೂಲವಾಗಲಿದೆ. ಒಂದು ವೇಳೆ ಸೋತರೆ ರನ್ ರೇಟ್ ಆಧಾರದ ಮೇಲೆ ವಿಂಡೀಸ್ ಉಪಾಂತ್ಯಕ್ಕೆ ಲಗ್ಗೆ ಹಿಡಲಿದೆ.