ಚಿತ್ರದುರ್ಗ: ಜ.25 : ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಶನಿವಾರ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜೆ ಎನ್ ಕೋಟೆ ಸರ್ಕಾರಿ ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ “ಯುವ ಮತದಾರರು ಅಂದರೆ 18 ವರ್ಷ ತುಂಬಿದ ಹೊಸ ಮತದಾರರು. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಆಲೋಚನೆಗಳು, ಆಕಾಂಕ್ಷೆಗಳು ಮತ್ತು ಮೌಲ್ಯಗಳು ದೇಶದ ರಾಜಕೀಯ ದೃಶ್ಯಾವಳಿಯನ್ನು ಬದಲಾಯಿಸುವ ಶಕ್ತಿ ಹೊಂದಿವೆ.ಮುಂದಿನ ಚುನಾವಣೆಗಳಲ್ಲಿ ಯುವ ಮತದಾರರಾಗಿ ಹೊರಹೊಮ್ಮುವ ಪ್ರೌಢಶಾಲಾ ಮಕ್ಕಳು ಈಗಿನಿಂದಲೇ ಚುನಾವಣೆ ಮತ್ತು ಮತದಾನದ ಮಹತ್ವದ ಬಗ್ಗೆ ಅರಿತುಕೊಳ್ಳುವುದು ಅವಶ್ಯ ಎಂದು ಅಭಿಪ್ರಾಯ ಪಟ್ಟರು.
ಮತದಾನ ದಿನದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮುಮ್ತಾಜ್ ಮತದಾನ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜೊತೆಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಅರ್ಹ ಪ್ರತಿನಿಧಿಯನ್ನು ಆರಿಸುವುದು ಕೂಡಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯಾಧಿಕಾರಿ ರಮೇಶ್, ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಕರಿಬಸವಣ್ಣ ಶಾಲೆಯ ಸಹ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.