“ಎಜ್ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್” ಇಂದಿನಿಂದ: ಭಾರತಕ್ಕೆ ಮತ್ತೊಂದು ಸತ್ವಪರೀಕ್ಷೆ

ಜ್ಬಾಸ್ಟನ್: ಗೆಲುವುದನ್ನೇ ಹವ್ಯಾಸ ಮಾಡಿಕೊಂಡಂತೆ ಇದ್ದ ಭಾರತ ತಂಡ ಈಗ ಸೋಲಿನಲ್ಲೂ ಹಾಗೆಯೇ ಸಾಗುತ್ತಿದೆ. ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಸೋಲು ಇದಕ್ಕೆ ಕನ್ನಡಿ. ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದ ಭಾರತ, ಕೊನೆಯಲ್ಲಿ ಎಡವಟ್ಟು ಮಾಡಿಕೊಂಡಿತು.

ಧೈರ್ಯದಿಂದ ಆಡಿದ ಇಂಗ್ಲೆಂಡ್‌ಗೆ ಮಣಿಯಿತು.

ಶುಭಮನ್ ಗಿಲ್ ಅವರ ಸಾರಥ್ಯದ ಯುವ ತಂಡಕ್ಕೆ ಇದು ಮೊದಲ ಪರೀಕ್ಷೆಯಾಗಿತ್ತು. ಆಯಂಡರ್ಸನ್‌- ತೆಂಡೂಲ್ಕರ್‌ ಟ್ರೋಫಿಯಲ್ಲಿ ಇನ್ನೂ ನಾಲ್ಕು ಟೆಸ್ಟ್‌ಗಳು ಬಾಕಿಯಿವೆ. ಇವುಗಳಲ್ಲಿ ಎರಡನೇ ಪಂದ್ಯ ಬುಧವಾರ ಎಜ್ಬಾಸ್ಟನ್‌ನಲ್ಲಿ ಆರಂಭವಾಗಲಿದೆ.

ಮೂವರು ದಿಗ್ಗಜರ- ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆರ್‌.ಅಶ್ವಿನ್‌- ನಿವೃತ್ತಿಯಿಂದ ತಂಡ ಪರಿವರ್ತನೆಯ ಹಾದಿಯಲ್ಲಿದೆ. ಇಂಥ ಸಂದರ್ಭದಲ್ಲಿ ಎಡವಟ್ಟುಗಳಾಗುವುದು ಸಹಜ. ಅದರಲ್ಲೂ ಇಂಗ್ಲೆಂಡ್‌ನಂಥ ಪರಿಸ್ಥಿತಿಯಲ್ಲಿ ಅನುಭವಿ ವೃತ್ತಿಪರ ತಂಡಗಳೂ ಮೈಮರೆಯುವಂತಿಲ್ಲ.

ಹೆಡ್‌ ಕೋಚ್‌ ಗೌತಮ್‌ ಗಂಭೀರ್ ಅವಧಿಯಲ್ಲಿ ತಂಡ ಸತತವಾಗಿ ಸೋಲು ಕಾಣುತ್ತಿದೆ. ಅವರು ಈಗಿನ ಹುದ್ದೆ ವಹಿಸಿಕೊಂಡ ನಂತರ ಆಡಿದ 11 ಟೆಸ್ಟ್‌ಗಳಲ್ಲಿ ತಂಡ ಏಳರಲ್ಲಿ ಸೋತು, ಮೂರು ಗೆದ್ದು, ಒಂದು ಡ್ರಾ ಮಾಡಿಕೊಂಡಿದೆ. ಈ ಗೆಲುವು ಬಂದಿದ್ದು ಬಾಂಗ್ಲಾದೇಶ ತಂಡದ ಎದುರು. ನಂತರ ನ್ಯೂಜಿಲೆಂಡ್ ಎದುರು 0-3 ವೈಟ್‌ವಾಷ್‌ ಅನುಭವಿಸಬೇಕಾಯಿತು. ಅದೂ ತವರಿನಲ್ಲಿ, ಜೊತೆಗೆ ಪೂರ್ಣಪ್ರಮಾಣದ ತಂಡ ಆಡಿದ್ದಾಗ.

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನಾಯಕನಾಗಿ, ನಂತರ ಕೋಚ್ ಆಗಿ ಯಶಸ್ಸು ಕಂಡಿದ್ದ ಗಂಭೀರ್‌ ಅವರು ಟೀಮ್‌ ಇಂಡಿಯಾದ ಹೊಣೆ ಹೊತ್ತಾಗ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಈಗ ಅವರ ನಿರ್ವಹಣೆ ಪರಾಮರ್ಶೆಗೆ ಒಳಗಾಗುತ್ತಿದೆ. ಗಂಭೀರ್‌ ಮುಂದಿನ ಕೆಲವು ವಾರಗಳಲ್ಲಿ ಇನ್ನಷ್ಟು ಕಠಿಣ ಪರೀಕ್ಷೆ ಎದುರಿಸಬೇಕಾಗುತ್ತದೆ.

ಲೀಡ್ಸ್‌ ಟೆಸ್ಟ್‌ ಹಿನ್ನಡೆಯ ನಂತರ ಅವರು ಮತ್ತು ಗಿಲ್‌ ಯಾವ ರೀತಿಯ ಸಂಯೋಜನೆಯೊಡನೆ ಕಣಕ್ಕಿಳಿಯುತ್ತಾರೆ ಎಂಬುದರಿಂದ ಈ ಪರೀಕ್ಷೆ ಆರಂಭವಾಗಲಿದೆ. ಜಸ್‌ಪ್ರೀತ್‌ ಬೂಮ್ರಾ ಆಡುವರೇ, ಇಲ್ಲವೇ ಎಂಬುದನ್ನು ತಂಡದ ಚಿಂತಕರ ಚಾವಡಿ ಖಚಿತಪಡಿಸಿಲ್ಲ. ಆದರೆ ‘ನೆಟ್ಸ್‌’ನಲ್ಲಿ (ತಾಲೀಮು ವೇಳೆ) ಕಂಡಹಾಗೆ, ಈ ಮುಂಚೂಣಿ ಬೌಲರ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು, ಆಕಾಶ್ ದೀಪ್‌ ಅವರಿಗೆ ಅವಕಾಶ ಸಿಗಬಹುದು. ಹೀಗಾದಲ್ಲಿ ಮೊಹಮ್ಮದ್ ಸಿರಾಜ್ ಅವರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಪ್ರಸಿದ್ಧ ಕೃಷ್ಣ ಮತ್ತು ಆಕಾಶ್‌ ಅವರು ಈ ಮಟ್ಟದಲ್ಲಿ ಅನನುಭವಿಗಳು.

ಭಾರತ ಇಬ್ಬರು ಸ್ಪಿನ್ನರ್‌ಗಳೊಡನೆ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಎರಡನೇ ಸ್ಪಿನ್ನರ್‌ ಕುಲದೀಪ್ ಯಾದವ್‌ ಆಗುತ್ತಾರೆಯೇ ಅಥವಾ ಬ್ಯಾಟಿಂಗ್‌ಗೆ ಬಲ ನೀಡಬಲ್ಲ ವಾಷಿಂಗ್ಟನ್ ಸುಂದರ್ ಆಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಇದು ಪಿಚ್‌ ಮತ್ತು ಹವಾಮಾನದ ಪರಿಸ್ಥಿತಿಯನ್ನು ಅವಲಂಬಿಸಿದೆ.

ಗಿಲ್‌ ಯುವನಾಯಕನಾಗಿರುವ ಕಾರಣ ಪ್ರಮುಖ ನಿರ್ಧಾರಗಳನ್ನು ಗಂಭೀರ್‌ ಕೈಗೊಳ್ಳಲಿದ್ದು, ಅವರು ಸೂಕ್ತ ಸಂಯೋಜನೆ ರೂಪಿಸಿಕೊಳ್ಳಬೇಕಾಗಿದೆ. ಮತ್ತೊಂದು ಸೋಲು ಭಾರತವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದು. ಜೊತೆಗೆ ಗಂಭೀರ್ ಮತ್ತಷ್ಟು ವಿಮರ್ಶೆಗೆ ಗುರಿಯಾಗಬಹುದು.

ಇದೆಲ್ಲದರ ಜೊತೆಗೆ ಭಾರತಕ್ಕೆ ಎಜ್ಬಾಸ್ಟನ್‌ ಸ್ಮರಣೀಯ ತಾಣವೂ ಅಲ್ಲ. ಇಲ್ಲಿ ಆಡಿದ ಪಂದ್ಯಗಳಲ್ಲಿ ಭಾರತ ಏಳು ಸೋತಿದ್ದು, ಒಂದು ಡ್ರಾ ಆಗಿದೆ.

ಇನ್ನೊಂದು ಕಡೆ ಇಂಗ್ಲೆಂಡ್‌ ತುಂಬು ವಿಶ್ವಾಸದಿಂದ ಇದೆ. ವೇಗದ ಬ್ಯಾಟಿಂಗ್‌ನಿಂದ ಟೆಸ್ಟ್‌ ಕ್ರಿಕೆಟ್‌ಗೆ ಹೊಸ ವಾಖ್ಯಾನ ಬರೆದ ತಂಡ ಇದು. ಲೀಡ್ಸ್‌ನಲ್ಲಿ ಹಿನ್ನಡೆಯಿಂದ ಅದು ಗೆಲುವು ಕಸಿದ ರೀತಿ ಅಮೋಘವಾಗಿತ್ತು. ಅಂತಿಮ ದಿನ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರೀತಿ ‘ಬಾಝ್‌ಬಾಲ್‌’ ಕ್ರಿಕೆಟ್‌ ಶೈಲಿಗೆ ಅದು ಸೂಕ್ತವೆಂಬುದನ್ನು ನಿರೂಪಿಸಿತು.

ಅದು ಯಾವುದೇ ಬದಲಾವಣೆ ಮಾಡದೇ 11ರ ಬಳಗವನ್ನು ಎರಡು ದಿನ ಮೊದಲೇ ಪ್ರಕಟಿಸಿರುವುದು ಅದರ ವಿಶ್ವಾಸಕ್ಕೆ ಕನ್ನಡಿ. ಅದು ಗೊಂದಲದಲ್ಲಿ ಇರುವ ಭಾರತ ತಂಡದ ಗಾಯದ ಮೇಲೆ ಉಪ್ಪುಸವರಲು ಯತ್ನಿಸಲಿದೆ.

ತಂಡಗಳು

ಭಾರತ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್‌ (ಉಪ ನಾಯಕ-ವಿಕೆಟ್‌ ಕೀಪರ್), ಅಭಿಮನ್ಯು ಈಶ್ವರನ್‌, ಯಶಸ್ವಿ ಜೈಸ್ವಾಲ್‌, ಧ್ರುವ್ ಜುರೆಲ್‌, ಕರುಣ್ ನಾಯರ್‌, ಕೆ.ಎಲ್‌.ರಾಹುಲ್‌, ಸಾಯಿ ಸುದರ್ಶನ್‌, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್‌, ಆಕಾಶ್ ದೀಪ್‌, ಅರ್ಷದೀಪ್ ಸಿಂಗ್‌, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್‌, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್.

ಇಂಗ್ಲೆಂಡ್‌ (ಅಂತಿಮ 11): ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲಿ ಪೋಪ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಬೆನ್‌ ಸ್ಟೋಕ್ಸ್‌ (ನಾಯಕ), ಜೇಮಿ ಸ್ಮಿತ್‌ (ವಿಕೆಟ್‌ ಕೀಪರ್‌), ಕ್ರಿಸ್‌ ವೋಕ್ಸ್‌, ಬ್ರೈಡನ್‌ ಕಾರ್ಸ್‌, ಜೋಶ್ ಟಂಗ್‌ ಮತ್ತು ಶೋಯೆಬ್‌ ಬಶೀರ್.

Views: 5

Leave a Reply

Your email address will not be published. Required fields are marked *