ಹೇಳಿ ಹೋಗದೇ ಕಾರಣವಾ… ನಿಶ್ಯಬ್ದದಲ್ಲೂ ಮೊಳಗುವ ಗೆಜ್ಜೆಯ ಸದ್ದು | ಬರಹ: ಚೇತನ್ ಕುಮಾರ್ ಸಿ.

ಹೇಳಿ ಹೋಗದೇ ಕಾರಣವಾ….

ಪ್ರೀತಿಯ ಹೃದಯಾ….

ಅದು ಎಲ್ಲಾ ದಿನದಂತಲ್ಲಾ ಮೋಡವು ಹನಿಯಾಗಿ ಸುರಿದು ಭೂಮಿಗೆ ಮುತ್ತಿನ ಮಳೆಗರೆಯುತ್ತಿತ್ತು. ಮರಗಿಡಗಳು ತಮ್ಮ ಮೈಕೊಳೆಯ ತೊಳೆದುಕೊಳ್ಳುತ್ತಿದ್ದವು. ಮಲೆನಾಡೆಂದರೆ ಹಾಗೆ ಬಿಡುವಿಲ್ಲದೆ ನಿಡುಸುಯ್ಯುವುದು. ಮಳೆಹನಿ ಬೀಳುವಾಗ ವಿಶ್ವವಿದ್ಯಾಲಯದಿಂದ ಮನೆಗೆ ಹೂರಟಿದ್ದ ನಾನು ಮರದ ಆಸರೆಯಲ್ಲಿ ನಿಂತಿರಲು, ನೀರಿಗೆ ಬಿದ್ದ ಹನಿಯ ಸಪ್ಪಳ ಕೇಳುತ್ತಿದ್ದ ಕಿವಿಗೆ ಎಲ್ಲೋ ದೂರದಲ್ಲಿ ಹನಿಗಳ ಸದ್ದಿಗಿಂತ ಆಸರೆಗಾಗಿ ಓಡಿಬರುತಿದ್ದವಳ ಕಾಲ್ಗೆಜ್ಜೆಯ ಶಬ್ಧ ನನ್ನ ಚಿತ್ತವನ್ನು ತನ್ನತ್ತ ಸೆಳೆದಿತ್ತು. ಆಸರೆಯ ಅರಸಿ ಬಂದವಳು ನನ್ನರಸಿಯಾಗ ಹೊರಟಿದ್ದವಳು ಶ್ವೇತವಸ್ತçಧಾರಿಯಾಗಿ, ಚಿಗರಿಯ ಹಾಗೆ ನಾನಿಂತ ಮರದಡಿಗೆ ಬಂದಳು. ಮೊಗದ ತುಂಬ ತುಂಬಿರುವ ನೀರಿನ ಪಸೆ ಒರೆಸಿಕೊಳ್ಳುತ್ತಿರುವ ಅವಳ ನೋಡುತ್ತ ನಿಂತ ನಾನು ನನ್ನನ್ನೇ ಮರೆತಿದ್ದೆ. ನಮ್ಮಿಬ್ಬರದು ಮಾತಿಲ್ಲ ಕಥೆಯಿಲ್ಲ ಆದರೆ ನನ್ನ ಮನಸ್ಸಿನ ತುಂಬಾ ರೋಮಾಂಚನ. ಮಳೆಯು ಇಳೆಯ ಮೇಲೆ ಇಳಿಯುವುದು ನಿಂತಾಗ ದಾರಿ ದೂರವಾಗುವವರೆಗೂ ಅವಳ ಹಿಂದೆ ನಡೆಯಬೇಕೆಂದೆನಿಸಿತ್ತು. ಅಷ್ಟರಲ್ಲಿ ನಮ್ಮ ನೆಚ್ಚಿನ ವೋಲ್ವೋ ‘ಗಜಾನನ’ ಬಸ್ಸು ತನ್ನ ಬರುವಿಕೆಯ ತಿಳಿಸಲು ಧ್ವನಿಮಾಡಿ ನಮ್ಮಿಬ್ಬರ ನಡುವೆ ಬಂದು ನಿಂತಿದ್ದ.

ಇಬ್ಬರೂ ಶಿವಮೊಗ್ಗದವರೆಂದು ತಿಳಿದದ್ದು ಆ ಗಜಾನನನಿಂದಲೇ. ಬಸ್ಸಿನಲ್ಲಿ ನಿಂತೇ ಸಾಗತೊಡಗಿದೆ. ಕೆಲವು ನಿಮಿಷಗಳ ನಂತರ ಸೀಟುಸಿಕ್ಕಾಗ ಕುಳಿತೆ, ನನ್ನ ಮನಸ್ಸಿನ ತುಂಬಾ ಅವಳೇ ನೆಲೆಸಿದ್ದಳು. ಕಣ್ಣು ಕುಳಿತಲ್ಲಿಂದಲೇ ಅವಳ ಹುಡುಕತೊಡಗಿತು. ಆಗ ‘ಕಾಲ್ಗೆಜ್ಜೆ’ ಯ ಶಬ್ಧ ವನ್ನು ಕೇಳಿದ ಕಿವಿ ತಾನೇ ಪುಣ್ಯವಂತನೆAದು ಕಣ್ಣನ್ನು ಮೂದಲಿಸುತ್ತಿತ್ತು. ಹುಡುಕಿ ಹುಡುಕಿ ನನ್ನ ಲಡಕಿ ಸಿಗದಿದ್ದಾಗ ಕಣ್ಣು ಕಿಟಕಿಯ ಮೇಲೆ ಜಾರಿತು. ಆದರೂ ಛಲಬಿಡದ ತ್ರಿವಿಕ್ರಮನಂತೆ ಹುಡುಕುವ ಹಂಬಲ ಮಾತ್ರ ನನ್ನೊಳಗೆ ಕಡಿಮೆಯಾಗಲೇ ಇಲ್ಲ 30ಕೀ.ಮೀ ದೂರದ ಪ್ರಯಾಣದಲ್ಲಿ ನನ್ನ ಮನಸ್ಸಿನ ತುಂಬಾ ಪಯಣಿಸಿದವಳು ಅವಳು, ಅವಳ ಕಾಲ್ಗೆಜ್ಜೆಯ ಶಬ್ಧ, ನಿಃಶಬ್ಧವಾಗಿ ನನ್ನೊಳಗೆ ನೆಲೆಯಾಗಿತ್ತು. ಅಂತೂ ನಮ್ಮನ್ನು ನಮ್ಮ ಸ್ವಸ್ಥಾನಕ್ಕೆ ತಂದು ಬಿಟ್ಟ ‘ಗಜಾನನ’ ಇಳಿಯುವ ಕೊನೆಜಾಗ ಎಂದು ಬೊಬ್ಬೆ ಹೊಡೆಯತೊಡಗಿದ. ಇವುಗಳ ಮಧ್ಯೆ ಕೇಳಿದ ಆ ಗೆಜ್ಜೆ ಶಬ್ಧದೆಡೆಗೆ ಆಕರ್ಷಿತವಾದ ಕಣ್ಣು ಮತ್ತು ಮನಸ್ಸಿನ ವೇಗವು ಗಾಳಿಗಿಂತಲೂ ವೇಗವಾಗತೊಡಗಿತು. ಆದರೆ ಬೆಳ್ಳಿಬಟ್ಟೆಯ ಒಡತಿಯ ಕಾಣದೇ ಮನದಲ್ಲಿ ಕಪ್ಪನೆ ಮೋಡ ಆವರಿಸಿತ್ತು. ಮಧುರ ಕ್ಷಣಗಳ ಮೆಲುಕುಹಾಕುತ್ತ 4ಕೀ.ಮೀ ನಡೆದದ್ದು ತಿಳಿಯಲ್ಲೆ ಇಲ್ಲ. ಮನೆಗೆ ಬಂದು ಮುದಗೊಳ್ಳಲು ಹೊರಟಾಗ ಕನ್ನಡಿಯೊಳು ಬೆನ್ನು ಮಾಡಿ ನಿಂತಿದ್ದ ಮಾನಿನಿ ಕಂಡಳು ಆದರೆ ಕೈಗೆ ಸಿಗದಾದಳು. ಬೆಚ್ಚನೆ ಕಾಫಿ ಹೀರುತ್ತ ಕುಳಿತು ರೇಡಿಯೋ ಹಾಕಿದೆ. ಅವರಿಗೂ ನನ್ನ ಅಣಕಿಸುವ ಆಸೆಯೆಂದೆನಿಸುತ್ತದೆ. ಅದಕ್ಕೆ ‘ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆನುತಾ…’ ಎಂಬ ಸಾಲನ್ನು ಕೇಳಿದ್ದೇ ತಡ ನನ್ನ ಎದೆ ಝಲ್ಲೆಂದದ್ದು ಸುಳ್ಳಲ್ಲ. ಮನದ ತುಂಬಾ ಬಳ್ಳಿಯ ಹಾಗೆ ಹಬ್ಬಿದ ಮಾನಿನಿ ಯಾರು? ನಗುವ ಶಬ್ಧದ ಮೂಲಕ ನನ್ನನ್ನೇ ಸೂರೆ ಮಾಡಿದ ನೀರೆ ಯಾರು? ಎಂಬ ಪ್ರಶ್ನೆಗಳು ಉತ್ತರವಿಲ್ಲದೆ ಮನಸ್ಸಿನ ಮೂಲೆಯಲ್ಲೆಲ್ಲಾ ಓಡಾಡತೊಡಗಿದವು. ಗೆಜ್ಜೆಯ ಸಪ್ಪಳ ಕೇಳಿದ ಕಿವಿ, ಬಟ್ಟೆಯ ಅಂದ ಕಂಡ ಕಣ್ಣು ನನ್ನನ್ನು ಅಣಕಿಸತೊಡಗಿದವು. ಆದರೇ ಸಿಹಿಯಾದ ನೋವನ್ನು ಹೊತ್ತುಕೊಂಡ ಮನಸ್ಸು ಅವಳಿಗಾಗಿ ಮಿಡಿಯುತ್ತಲೇ ಇತ್ತು.

ಮರು ದಿನ ಗುರುವಾರ. ಪ್ರತಿವಾರದಂತೆ ರಾಯರ ಮಠಕ್ಕೆ ಹೋದೆ. ರಾಯರಿಗೆ ಕೈ ಮುಗಿಯುವ ಹೊತ್ತಿಗೆ ಆ ಗೆಜ್ಜೆಯ ಶಬ್ಧ ಮತ್ತೇ ಘಲ್ಲು ಘಲ್ಲೆನುತ್ತಿತ್ತು. ಆ ದನಿಯ ದೊರೆಸಾನಿಯ ಹುಡುಕಲು ಹೊರಟೆ. ಪ್ರದಕ್ಷಿಣೆಯ ಪಥದಲ್ಲಿ, ನೀಳ ಕೇಶರಾಶಿಯ ನಲಿದಾಡಿಸುತ್ತಿದ್ದ ಕುವರಿಯ ಮೊಗವ ನೋಡಲು ಅವಕಾಶವಿದ್ದರೂ ಐದು ಸುತ್ತು ಅವಳ ಹಿಂದೆ ಸುತ್ತಿದ್ದಾಯಿತು. ಗುರುಗಳ ಕ್ಷಮೆಕೋರುತ್ತ, ರಾಯರ ಧ್ಯಾನದಿಂದ ರಾಣಿಯ ಧ್ಯಾನದ ಕಡೆಗೆ ಹೊರಳಿದ್ದೆ. ಮನದಲ್ಲಿ ಆತಂಕ, ದುಗುಡಗಳ ಹೊಂದಿದ್ದರೂ ಆಕೆಯ ಮೊಗದ ಕಡೆಗೆ ನೋಟ ಬೀರಿದಾಗ ನಿಧಾನವಾಗಿ ನನ್ನ ಮೊಗದಲ್ಲಿ ನಗೆಯು ನವಿರಾಗಿ ಅರಳತೊಡಗಿತು. ಕೆಲದಿನಗಳ ನಂತರ ವಿಶ್ವವಿದ್ಯಾಲಯದಲ್ಲೂ, ರಾಯರ ಮಠದಲ್ಲೂ ಆಕೆ ಸಿಗದಿದ್ದಾಗ ನಾನು ನಿಜಕ್ಕೂ ಹಿಡಿಸೊಪ್ಪಿನಂತಾಗಿ ಹೋಗಿದ್ದೆ. ಇದ್ದಕ್ಕಿದ್ದಂತೆ ಒಂದು ದಿನ ಆಕೆ ಧುತ್ತೆಂದು ಕಣ್ಣೆದುರು ನಿಂತಾಗ ಮಾತನಾಡಿಸಲು ಯಾಕೋ ಧೈರ್ಯ ಸಾಲದೆ ಹೋಯಿತು. ತನ್ನ ನೀಲಿ ಬಣ್ಣದ ‘ಹ್ಯಾಂಡ ಕೀ’ಯನ್ನು ಬೀಳಿಸಿ ಹೊರಟವಳಿಗೆ ತೆಗೆದು ಕೊಡಲು ಮುಂದಾದಾಗ ಆಕಾಶದ ನಡುವಿನ ನಕ್ಷತ್ರಗಳಂತೆ ಕಂಡ ಬರಹ ಅದು
“ನನ್ನ ನಗುವಿಗೆ ಒಡೆಯ, ನನ್ನನ್ನು ಜೀವನ ಪೂರ್ತಿ ಕಾಯಬಲ್ಲೆಯಾ, ನಾನೇನೆ ನೀನಾಗ ಬಲ್ಲೆಯಾ? ನನ್ನಿನಿಯ ನೀನೆನ್ನುತ್ತಿದೆ ನನ್ನೀ ಹೃದಯ…..” ಎಂಬ ಸಾಲನ್ನು ನೋಡಿದ್ದೇ ತಡ. ನಮ್ಮಿಬ್ಬರ ಮೊಗದಲ್ಲಿನ ನವಿಲುಗರಿಗಳು ವಿನಿಮಯವಾಗಿದ್ದವು.

ನನ್ನೊಳು ನೀ ನಿನ್ನೊಳು ನಾ ನಗುತಿರುವಾಗ ನಾಳೆಗಳೇಕೆ ನಮಗೆ ನಾಳೆಗಳ ಚಿಂತೆಗಳೇಕೆ ಎಂಬ ನನ್ನ ಉತ್ತರಕ್ಕೆ ನಾಚಿದ ಮೊಗವು ನನ್ನ ಭುಜದ ಮೇಲೆ ವಿರಾಜಮಾನವಾಗಿತ್ತು. ನಾಳೆಗಳ ನಡುವೆ ಕಳೆದು ಹೋಗಲು ಹೊರಟಿದ್ದೆವು. ಸ್ವರ್ಗಕ್ಕೆ ಕಿಚ್ಚನ್ನು ಹಚ್ಚುವ ಪ್ರೀತಿ ನಮ್ಮಿಬ್ಬರನ್ನು ಸೇರಿಸಿತ್ತು. ವಿಷಯ ಏನೆಂದರೆ, ನಾನು ಎನ್.ಎಸ್.ಎಸ್ ನಲ್ಲಿ ಕ್ರೀಯಾಶೀಲನಾಗಿರುವುದು, ನಾಟಕ, ಮೂಕಾಭಿನಯ, ಪ್ರಹಸನ ಇತರೆ ಸಾಂಸ್ಕçತಿಕ ಚಟುವಟಿಕೆಗಳಲ್ಲಿ ನಿರೂಪಕನಾಗಿ ನೋಡಿದ್ದ ಆಕೆ ನನ್ನ ಅಭಿಮಾನಿಯಾಗಿದ್ದಳು. ಹಾಗಾಗಿ ಕಷ್ಟವಿಲ್ಲದೆ ಇಷ್ಟಪಟ್ಟವಳು ಸಿಕ್ಕಿದ್ದಳು.

ನಮ್ಮಗಳ ಪಾಲಿಗೂ ‘ಪ್ರೇಮಿಗಳ ದಿನ’ ಬಂದಾಗ ಮೊದಲ ವರ್ಷದ ಆಚರಣೆ ಸದಾ ನೆನಪಿನಲ್ಲುಳಿಯಬೇಕು ಎಂದು ನಿರ್ಧರಿಸಿದೆವು. ನನಗಾಗಿ ಅವಳು ರವಿಬೆಳೆಗೆರೆಯ ‘ಲವಲವಿಕೆ’ ಪುಸ್ತಕವನ್ನು ತರುವಾಗ ನಮ್ಮ ವೋಲ್ವೋ ‘ಗಜಾನನ’ ನಾನೇ ಮುಟ್ಟದ ನನ್ನವಳಿಗೆ ಮೆತ್ತಗೆ ಮುತ್ತಿಕ್ಕಿದ್ದ, ನನ್ನಾಕೆ ರಕ್ತದ ಮಡುವಲ್ಲಿ ಮಾತಿಲ್ಲದ್ದೆ ಮಲಗಿದ್ದಳು. ಏನೊಂದು ತಿಳಿಯದಾದೆ. ಎಲ್ಲವೂ ‘ಶೂನ್ಯ’ ಎಂಬ ಭಾವನೆ. ನನ್ನ ಬದುಕಿಗೆ ಹೆಸರಾಗಬೇಕಾದವಳು ಹೆಸರಿಲ್ಲದವಳಂತೆ ಹೋಗಿದ್ದಳು. ನನ್ನಿಂದ ಆದ ತಪ್ಪಾದರೂ ಏನು? ನನ್ನನ್ನೇಕೆ ಒಬ್ಬಂಟಿ ಮಾಡಿ ಹೋದೆ? ಯಾರಿಗೂ ಹೇಳಲಾಗದ ಭಾವನೆ, ಹೇಳಿದರೂ ಅರ್ಥವಾಗದ ಯಾತನೆ. ಹೇಳಿ ಹೋಗಬಾರದಿತ್ತೇ ಕಾರಣವ…. ಉಳಿಸಿಹೋಗಿರುವುದು ಒಂದೇ, ನಿಶಬ್ಧದಲ್ಲೂ ಶಬ್ಧವಾಗುವ ನಿನ್ನ ಕಾಲ್ಗೆಜ್ಜೆ ಮಾತ್ರ…..
ಸದಾ ನಿನ್ನ ದನಿಗಳಿಗೆ ಕಿವಿಯಾಗಿರುವವ…..

ಚೇತನ್ ಕುಮಾರ್ ಸಿ

Leave a Reply

Your email address will not be published. Required fields are marked *