ಸಮಸ್ಯೆ ಅಥವಾ ದುರ್ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಬೇಗ ಬರಲ್ಲ ಎಂದು ಜನರು ಪೊಲೀಸ್ ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದರು. ಆದರೆ, ಇದಕ್ಕೆಲ್ಲ ಈಗ ಮುಕ್ತಿ ಸಿಕ್ಕಿದೆ. ನಿಮ್ಮ ಒಂದು ಕರೆ ಪೊಲೀಸ್ ಇಲಾಖೆ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಇರುವಂತೆ ಮಾಡುತ್ತದೆ. ಅದು ಹೇಗೆ? ಈ ಸುದ್ದಿ ಓದಿ.

ಬೆಂಗಳೂರು, ಜುಲೈ 18: ಜನರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು (Bengaluru City Police) ಹಲವು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ವೇಗವಾಗಿ ಜನರ ಸುರಕ್ಷತೆಗೆ ಧಾವಿಸುವ ದೃಷ್ಟಿಯಿಂದ ಪೊಲೀಸ್ ಇಲಾಖೆ 112 ಪ್ರಾರಂಭಿಸಿದೆ. ಇದೀಗ ಇನ್ನೂ ವೇಗವಾಗಿ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಂತ್ರಜ್ಞಾನ ಮೊರೆ ಹೋಗಿದೆ. ಪೊಲೀಸ್ ಇಲಾಖೆ “ಸೇಫ್ ಕನೆಕ್ಟ್” ಎಂಬ ವಿಶಷ್ಟ ಉಪಕ್ರಮ ಪರಿಚಯಿಸಿದ್ದು, ಇದರಿಂದ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸರಿಗೆ ಅನಕೂಲವಾಗಲಿದೆ. ಯಾವ ಉಪಕ್ರಮ, ಅದರ ವಿಶೇಷತೆ, ಹೇಗೆ ಕಾರ್ಯ ನಿರ್ವಹಿಸುತ್ತೆ ಎಂಬ ಎಲ್ಲ ಮಾಹಿತಿ ಇಲ್ಲಿದೆ.
“ಸೇಫ್ ಕನೆಕ್ಟ್” ಮೂಲಕ ಸುರಕ್ಷಿತವಾಗಿರಿ!
Karnataka State App (KSP) ಆ್ಯಪ್ನಲ್ಲಿ ಸೇಫ್ ಕನೆಕ್ಟ್ ವೈಶಿಷ್ಟ್ಯವು, ತಕ್ಷಣವೇ ಪೊಲೀಸ್ ಕಮಾಂಡ್ ಸೆಂಟರ್ಗೆ ವಿಡಿಯೋ ಹಾಗೂ ಆಡಿಯೋ ಕಾಲ್ ಮಾಡಬಹುದು. ಇದರಿಂದ ನಿಮ್ಮ ಲೈವ್ ಲೋಕೇಶನ್ ಪೊಲೀಸರಿಗೆ ತಿಳಿಯುತ್ತದೆ. ಆಗ ಪೊಲೀಸರು ತಕ್ಷಣ ನಿಮ್ಮ ನೆರವಿಗೆ ಧಾವಿಸುತ್ತಾರೆ.
ಆ್ಯಪ್ ಡೌನ್ಲೋಡ್ ಹೇಗೆ
- ಪ್ಲೇಸ್ಟೋರ್ನಲ್ಲಿ ಕೆಎಸ್ಪಿ ಅಂತ ಸರ್ಚ್ ಮಾಡಿ, ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ.
- ನಿಮ್ಮ ದೂರವಾಣಿ ಸಂಖ್ಯೆ, ಜಿಲ್ಲೆ ನಮೂದಿಸಿ ಲಾಗಿನ್ ಆಗಿ.
- ಆ್ಯಪ್ ಕಾರ್ಯಾರಂಭವಾಗುತ್ತದೆ.
- ಆ್ಯಪ್ ಒಳಗಡೆ ಸೇಫ್ ಕನೆಕ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಡಿಯೋ ಅಥವಾ ವಿಡಿಯೋ ಕರೆ ಮಾಡಬಹುದು.
ಕಾರ್ಯನಿರ್ವಹಣೆ ಹೇಗೆ?
ತುರ್ತು ವಿಡಿಯೋ ಕರೆ: KSP ಆ್ಯಪ್ ಮೂಲಕ, ಸೇಫ್ ಕನೆಕ್ಟ್ ಸೌಲಭ್ಯ ಬಳಸಿ ತೊಂದರೆಯಲ್ಲಿರುವ ವ್ಯಕ್ತಿ ಕಮಾಂಡ್ ಸೆಂಟರ್ಗೆ ತುರ್ತು ವಿಡಿಯೋ ಕರೆ ಮಾಡಬಹುದು.
ಘಟನೆಯ ಸ್ಥಳದ ಮಾಹಿತಿ ಹಂಚಿಕೆ: ಕರೆ ಮಾಡಿದ ವ್ಯಕ್ತಿಯ ಈಗಿನ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕಮಾಂಡ್ ಸೆಂಟರ್ ನಿಂದ ವ್ಯಕ್ತಿಯ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಘಟನೆಯ ಪ್ರಸಾರ: ಬಳಕೆದಾರರು ಘಟನೆಯ ನೇರಪ್ರಸಾರ ಮಾಡುವ ಮೂಲಕ ಘಟನೆಯ ದೃಶ್ಯ ಸಾಕ್ಷ್ಯ ಒದಗಿಸಿ. ಪರಿಣಾಮಕಾರಿ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಪಡೆಯಬಹುದು.
ಕಮಾಂಡ್ ಸೆಂಟರ್ ಪ್ರತಿಕ್ರಿಯೆ: ಪೊಲೀಸ್ ಅಧಿಕಾರಿಗಳು ಕರೆಯನ್ನು ಸ್ವೀಕರಿಸಿ, ಘಟನೆಯನ್ನು ಪರಿಶೀಲಿಸಿ, ಹತ್ತಿರದ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುವ ಮೂಲಕ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ.
ನಾಗರೀಕರಿಗೆ ಪ್ರಯೋಜನಗಳು
ತುರ್ತು ಸಂದರ್ಭದಲ್ಲಿ ಪೊಲೀಸರೊಂದಿಗೆ ತ್ವರಿತವಾಗಿ ಸಂಪರ್ಕ ಸಾಧಿಸಿ, ನೈಜ-ಸಮಯದ ಸಂವಹನ ಮತ್ತು ಲೈವ್ ಟ್ರ್ಯಾಕಿಂಗ್ ಸಮಯೋಚಿತ ಸಹಾಯವನ್ನು ಖಚಿತಪಡಿಸುತ್ತದೆ. ನಿಮ್ಮ ವರದಿಯನ್ನು ರೆಕಾರ್ಡ್ ಮಾಡಿ ಗಂಭೀರವಾಗಿ ಪರಿಗಣಿಸಲಾಗುವುದು.
ಪೊಲೀಸರಿಗೆ ಪ್ರಯೋಜನಗಳು
ವಿಡಿಯೋ ಮತ್ತು ಲೊಕೇಷನ್ ಮಾಹಿತಿಯ ಮೂಲಕ, ಘಟನೆಯ ಸ್ಪಷ್ಟ ಚಿತ್ರಣ ಲಭ್ಯವಿರುತ್ತದೆ. ನಿಖರವಾದ ಸ್ಥಳ ಬ್ಯಾಕಿಂಗ್ನಿಂದ, ತ್ವರಿತವಾಗಿ ಘಟನೆಯ ಸ್ಥಳಕ್ಕೆ ತಲುಪಿ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ರೆಕಾರ್ಡ್ ಮಾಡಿದ ಕರೆಗಳು ಮತ್ತು ವರದಿಗಳು ಅಮೂಲ್ಯವಾದ ಪುರಾವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಸಮುದಾಯದಲ್ಲಿ ವಿಶ್ವಾಸ ಮತ್ತು ಸಹಕಾರವನ್ನು ಉತ್ತಮಗೊಳಿಸುವುದು.
ಪ್ರಮುಖ ಅಂಶಗಳು
- ಸೇಫ್ ಕನೆಕ್ಟ್ ಬಳಕೆದಾರರಿಗೆ ಸುರಕ್ಷತೆ ಮತ್ತು ಹೆಚ್ಚಿಸುತ್ತದೆ.
- ಕರೆ ಮಾಡಿದವರ ಲೈವ್ ಲೊಕೇಶನ್ ಅನ್ನು ಕಮಾಂಡ್ಸೊಂಟರ್ ನೊಂದಿಗೆ ಹಂಚಿಕೊಳ್ಳುತ್ತದೆ.
- ಬೆಂಗಳೂರು ನಗರ ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ತ್ವರಿತ ಪರಿಹಾರವನ್ನು ಒದಗಿಸುತ್ತಾರೆ.
- ಬಳಕೆದಾರರಿಗೆ ಪೊಲೀಸರೊಂದಿಗೆ ಸಲೀಸಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
- ಬಳಕೆದಾರರು ತಮ್ಮ ಡೇಟಾ ರಕ್ಷಿಸಲಾಗಿದೆ ಮತ್ತು ಅವರ ಸಂವಹನಗಳು ಎಲ್ಲಾ ಸಮಯದಲ್ಲೂ ಖಾಸಗಿಯಾಗಿವೆ ಎಂದು ನಂಬಹುದು.