ಸೂರ್ಯನ ಬಿಸಿಲು ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು, ಕೆಲವು ಸಂಭಾವ್ಯ ಹಾನಿಗಳನ್ನು ಉಂಟು ಮಾಡಬಲ್ಲುದಾಗಿದೆ. ಇದು ನಾವು ಯಾವ ರೀತಿಯ ಬಿಸಿಲಿಗೆ ಒಡ್ಡಿಕೊಳ್ಳುತ್ತೇವೆ ಮತ್ತು ಎಷ್ಟು ಹೊತ್ತು ಒಡ್ಡಿಕೊಳ್ಳುತ್ತೇವೆ ಎಂಬುದನ್ನು ಆಧರಿಸಿರುತ್ತದೆ.
ಪ್ರಯೋಜನಗಳು
ಸೂರ್ಯನ ಬಿಸಿಲು ನಮ್ಮ ದೇಹದ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪಾದನೆಯಾಗಲು ಸಹಕಾರಿಯಾಗುತ್ತದೆ. ವಿಟಮಿನ್ ಡಿಯು ಎಲುಬುಗಳ ಆರೋಗ್ಯ, ರೋಗ್ಯ ನಿರೋಧಕ ಶಕ್ತಿ ದಕ್ಷ ವಾಗಿರಲು ಮತ್ತು ದೇಹವು ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳಲು ಅಗತ್ಯ. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದರೆ ಸ್ನಾಯುನೋವು, ದಣಿವು ಉಂಟಾಗಬಹುದು.
ವಿಟಮಿನ್ ಡಿ ದೇಹದಲ್ಲಿ ಚೆನ್ನಾಗಿದ್ದರೆ ಓಸ್ಟಿಯೊಪೊರೋಸಿಸ್, ರಿಕೆಟ್ಸ್ ಮತ್ತು ಕೆಲವು ಆಟೊಇಮ್ಯೂನ್ ಕಾಯಿಲೆಗಳು ಉಂಟಾಗುವು ಸಾಧ್ಯತೆಗಳು ಕಡಿಮೆಯಾಗುತ್ತವೆ.
ಸೂರ್ಯನ ಬಿಸಿಲು ನಮ್ಮ ದೇಹದಲ್ಲಿ ಸೆರೆಟೋನಿನ್ ಹಾರ್ಮೋನ್ ಉತ್ಪಾದನೆ ಯನ್ನು ಪ್ರಚೋದಿಸುತ್ತದೆ. ಈ ಹಾರ್ಮೋನ್ ನಮ್ಮ ಮನೋಭಾವವನ್ನು ಚೆನ್ನಾಗಿಡಲು ಮತ್ತು ನಾವು ಉಲ್ಲಾಸ ದಿಂದಿರಲು ಸಹಕಾರಿ. ನಾವು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಕಡಿಮೆಯಾದಾಗ ಸೆರೆಟೋನಿನ್ ಕೂಡ ಕಡಿಮೆಯಾಗಿ ಖನ್ನತೆಗೊಳಗಾಗುವ ಅಪಾಯ ಹೆಚ್ಚುತ್ತದೆ.
ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ (ಎಸ್ ಎಡಿ) ಮತ್ತು ಖನ್ನತೆಯ ಲಕ್ಷಣಗಳು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಕಡಿಮೆಯಾಗಬಹುದಾಗಿದೆ. ಚಳಿಗಾಲದ ದಿನಗಳಲ್ಲಿ ಸೂರ್ಯನ ಬಿಸಿಲು ಕಡಿಮೆ ಇರುವುದರಿಂದ ದೇಹದಲ್ಲಿ ಚೈತನ್ಯ ಕುಸಿತ, ದಣಿವು, ಉದಾಸೀನ, ಸಿಟ್ಟಾಗುವಿಕೆ ಮತ್ತು ನಿದ್ದೆಯ ತೊಂದರೆಯಂತಹ ಲಕ್ಷಣಗಳುಳ್ಳ ಖನ್ನತೆಯ ಒಂದು ವಿಧವಾಗಿರುವ ಎಸ್ ಎಡಿ ಪ್ರಚೋದನೆಗೊಳ್ಳಬಹುದು. ಇಂತಹ ದಿನಗಳಲ್ಲಿ ಹಗಲು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ಜೈವಿಕ ಗಡಿಯಾರ ನಿಯಂತ್ರಣದಲ್ಲಿರುತ್ತದೆ, ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದ ಉತ್ತಮ ನಿದ್ದೆಗೆ ಅಗತ್ಯವಾದ ಮೆಲಟೋನಿನ್ ಹಾರ್ಮೋನ್ ಕೊರತೆಯೂ ಉಂಟಾಗಬಹುದು. ಇದರಿಂದ ನಿದ್ರಾಹೀನತೆ ಅಥವಾ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗದೆ ಇರಬಹುದು.
ಸೂರ್ಯ ಬಿಸಿಲಿಗೆ ಹದವಾಗಿ ಒಡ್ಡಿಕೊಳ್ಳುವುದರಿಂದ ಉರಿಯೂತಗಳು ಕಡಿಮೆಯಾಗಿ ಸೋರಿಯಾಸಿಸ್, ಇಸುಬು, ಮೊಡವೆಯಂತಹ ಚರ್ಮದ ಸಮಸ್ಯೆಗಳು ಗುಣವಾಗಲು ಸಹಾಯವಾಗುತ್ತದೆ.
ಹದವಾಗಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾದ ನೈಟ್ರಿಕ್ ಆಕ್ಸೆ„ಡ್ ಉತ್ಪಾದನೆಯಾಗುತ್ತದೆ; ಇದರಿಂದಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ಹೃದಯಾಘಾತ ಹಾಗೂ ಲಕ್ವಾದ ಅಪಾಯಗಳು ಕೂಡ ಕಡಿಮೆಯಾಗುತ್ತವೆ.
ಸೋಂಕುಗಳ ವಿರುದ್ಧ ಹೋರಾಡಲು ಅಗತ್ಯವಾದ ಬಿಳಿ ರಕ್ತ ಕಣಗಳ ಉತ್ಪಾದ ನೆಗೂ ಸೂರ್ಯನ ಬೆಳಕು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೂಡ ರೋಗ ನಿರೋಧಕ ಶಕ್ತಿ ಚೆನ್ನಾಗಿರುವುದಕ್ಕೆ ಅಗತ್ಯವಾಗಿದೆ. ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಮತ್ತು ಬಿಳಿ ರಕ್ತ ಕಣಗಳು ಕಡಿಮೆಯಾದರೆ ದೇಹವು ಸೋಂಕುಗಳು ಮತ್ತು ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗಬಹುದಾಗಿದೆ. ಸೂರ್ಯನ ಬಿಸಿಲು ಮೆದುಳಿನ ಕಾರ್ಯ ನಿರ್ವಹಣೆ ಚೆನ್ನಾಗಿರುವುದಕ್ಕೂ ಸಹಾಯಕ ವಾಗಿದೆ. ವಿಟಮಿನ್ ಡಿ ಕೊರತೆಗೂ ಗ್ರಹಣ ಶಕ್ತಿ ವೈಕಲ್ಯ, ನೆನಪಿನ ಶಕ್ತಿಯ ತೊಂದರೆಗಳು ಮತ್ತು ಅಲ್ಜೀಮರ್ಸ್‌ನಂತಹ ನರವ್ಯವಸ್ಥೆ ಕ್ಷಯಿಸುವ ಕಾಯಿಲೆಗಳಿಗೂ ಸಂಬಂಧವಿದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಥೈರಾಯ್ಡ ಆರೋಗ್ಯ ಕೂಡ ಚೆನ್ನಾಗಿರುತ್ತದೆ; ಇದರ ಕೊರತೆಯಿಂದ ಹಾರ್ಮೋನ್ ಅಸಮತೋಲನ ಉಂಟಾಗಬಹುದಾಗಿದೆ.
ಸೂರ್ಯನ ಬೆಳಕಿನ ಕೊರತೆಯಿಂದ ಸಂತಾನೋತ್ಪತ್ತಿ ಶಕ್ತಿಯ ಮೇಲೆ ಕೂಡ ದುಷ್ಟರಿಣಾಮ ಉಂಟಾಗಬಹುದು. ವಿಟಮಿನ್ ಡಿ ಕೊರತೆಗೂ ಇನ್ಸುಲಿನ್ ಪ್ರತಿರೋಧ ಹಾಗೂ ಟೈಪ್ 2 ಮಧುಮೇಹ ಉಂಟಾಗುವ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ. ವಿಟಮಿನ್ ಡಿ ಕೊರತೆಯಿಂದ ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ರುಮಟಾಯ್ಡ ಆರ್ಥೈಟಿಸ್‌ನಂತಹ ಆಟೊ ಇಮ್ಯೂನ್ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚುತ್ತದೆ.
ಅಪಾಯಗಳು
ಸೂರ್ಯನ ಬಿಸಿಲಿನಲ್ಲಿರುವ ಅತೀ ನೇರಳೆ ಕಿರಣಗಳಿಗೆ ಹೆಚ್ಚು ಒಡ್ಡಿಕೊಂಡರೆ ಸೂರ್ಯಾಘಾತ, ಅವಧಿಪೂರ್ವ ಮುಪ್ಪಿನ ಲಕ್ಷಣಗಳು (ಚರ್ಮ ನಿರಿಗೆ ಕಟ್ಟುವುದು, ಕಪ್ಪು ಕಲೆಗಳು) ಉಂಟಾಗಬಹುದಲ್ಲದೆ ಚರ್ಮದ ಡಿಎನ್ ಎಗೂ ಹಾನಿಯಾಗಬಹುದು. ಅತೀ ನೇರಳೆ ಕಿರಣಗಳಿಗೆ ದೀರ್ಘಕಾಲ ತೆರೆದುಕೊಳ್ಳುವುದರಿಂದ ಮೆಲನೋಮಾ, ಬೇಸಲ್ ಸೆಲ್ ಕಾರ್ಸಿನೊಮಾ ಮತ್ತು ಸ್ಕ್ವಾಮಸ್ ಸೆಲ್ ಕಾರ್ಸಿನೊಮಾದಂತಹ ಕ್ಯಾನ್ಸರ್‌ಗಳು ಉಂಟಾಗುವ ಅಪಾಯ ಹೆಚ್ಚಬಹುದು.
ಅತೀ ನೇರಳೆ ಕಿರಣಗಳು ಕಣ್ಣಿಗೆ ಹಾನಿ ಉಂಟುಮಾಡಬಲ್ಲವಾಗಿದ್ದು, ಕ್ಯಾಟರ್ಯಾಕ್ಟ್, ಮ್ಯಾಕ್ಯುಲಾರ್ ಡಿಜನರೇಶನ್ ಮತ್ತು ಫೊಟೊಕೆರಾಟೈಟಿಸ್ (ಅತೀ ನೇರಳೆ ಕಿರಣಗಳಿಂದಾಗಿ ಉಂಟಾಗುವ ನೋವು ಸಹಿತ ಅನಾರೋಗ್ಯ) ತಲೆದೋರಬಹುದು. ಅತೀ ನೇರಳೆ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಚರ್ಮದ ರೋಗ ನಿರೋಧಕ ಶಕ್ತಿ ಪ್ರತಿಸ್ಪಂದನೆ ಕಡಿಮೆಯಾಗಿ ದೇಹವು ಸೋಂಕುಗಳ ವಿರುದ್ಧ ಹೋರಾಡಲು ತೊಂದರೆಯಾಗಬಹುದು.
ಬಿರು ಬೇಸಗೆಯ ದಿನಗಳಲ್ಲಿ ದೀರ್ಘಕಾಲ ಸೂರ್ಯ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹ ನಿರ್ಜಲತೆ, ಬಿಸಿಲಿನ ಆಘಾತ ಉಂಟಾಗಬಹುದು. ಕೆಲವು ಮಂದಿ ಕೆಲವು ಅನಾರೋಗ್ಯಗಳು ಅಥವಾ ವಂಶವಾಹಿ ಕಾರಣಗಳಿಂದಾಗಿ ಸೂರ್ಯನ ಬೆಳಕಿಗೆ ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ; ಅಂಥವರು ಸೂರ್ಯನ ಬಿಸಿಲಿಗೆ ತೆರೆದುಕೊಂಡರೆ ಚರ್ಮದಲ್ಲಿ ದದ್ದುಗಳು, ಸುಟ್ಟಗಾಯಗಳು ಅಥವಾ ಇತರ ದುಷ್ಪರಿಣಾಮಗಳನ್ನು ಅನುಭವಿಸಬಹುದು.
ಬಿಸಿಲಿನ ಸಮತೋಲನ
ವಾರದಲ್ಲಿ ಕೆಲವು ದಿನಗಳ ಕಾಲ 10ರಿಂದ 30 ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಸೂಕ್ತ. ಇದು ನಿಮ್ಮ ಚರ್ಮದ ವಿಧ ಮತ್ತು ನೀವಿರುವ ಭೌಗೋಳಿಕ ಪ್ರದೇಶವನ್ನು ಆಧರಿಸಿರಬೇಕು. ಬೆಳಗ್ಗಿನ 6ರಿಂದ 10 ಗಂಟೆಯ ವರೆಗಿನ ಸಮಯ ಸೂರ್ಯನ ಬಿಸಿಲನ್ನು ಅನುಭವಿಸಲು ಸೂಕ್ತ ಸಮಯ. ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉರಿಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ ಅಥವಾ ಅಂತಹ ಸಂದರ್ಭಗಳಲ್ಲಿ ಮೈಮುಚ್ಚುವ ಬಟ್ಟೆಬರೆ ಧರಿಸುವುದು, ನೆರಳಿನಲ್ಲಿ ನಿಲ್ಲುವುದು, ಛತ್ರಿ ಒಯ್ಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
Views: 4