ಐಟಿಪಿಎಲ್ನ TCSನಲ್ಲಿ ಕೆಲಸ ಮಾಡ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ಎಂಬ ಯುವಕ-ಯುವತಿ ಭಾನುವಾರ ರಾತ್ರಿ ಊಟಕ್ಕೆ ಎಂದು ಬೈಕ್ನಲ್ಲಿ ತೆರಳುತ್ತಿದ್ದಾಗ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ನನ್ನ ಮಗ ಇದೇ ಮಾರ್ಥಾಸ್ ಆಸ್ಪತ್ರೆಯಲ್ಲಿ ಜನಿಸಿದ್ದ. ಈಗ ಇದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ಎಂದು ಪ್ರಶಾಂತ್ ಪೋಷಕರು ಕಣ್ಣೀರು ಹಾಕಿದ್ದಾರೆ.

ಬೆಂಗಳೂರು, ಜುಲೈ.29: ಬಿಬಿಎಂಪಿ (BBMP) ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ (Death) ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್ ಬಳಿ ನಡೆದಿದೆ. ಬಾಣಸವಾಡಿ ನಿವಾಸಿ ಪ್ರಶಾಂತ್, ಶಿಲ್ಪಾ (27) ಮೃತ ದುರ್ದೈವಿಗಳು. ಐಟಿಪಿಎಲ್ನ TCSನಲ್ಲಿ ಕೆಲಸ ಮಾಡ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ಇಬ್ಬರೂ ನಿನ್ನೆ ಊಟಕ್ಕೆಂದು ಹೊರಗೆ ಬೈಕ್ನಲ್ಲಿ ಬಂದಿದ್ದಾಗ ಅಪಘಾತ ಸಂಭವಿಸಿದೆ.
ಇಬ್ಬರು ಬೈಕ್ನಲ್ಲಿ ಭಾನುವಾರ ರಾತ್ರಿ ಮೆಜೆಸ್ಟಿಕ್‌ನಿಂದ ಕೆ.ಆರ್.ವೃತ್ತದ ಕಡೆ ಬರುತ್ತಿದ್ದ ವೇಳೆ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಇವರ ಮೇಲೆ ಲಾರಿ ಹರಿದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಯುವಕ-ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ಪೋಷಕರ ಕಣ್ಣೀರು
ಇನ್ನು ಅಪಘಾತದ ವೇಳೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಾರ್ಥಾಸ್ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು ಮೃತ ಪ್ರಶಾಂತ್ ಪೋಷಕರು ಕಣ್ಣೀರು ಹಾಕಿದ್ದಾರೆ. ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗ ಪ್ರಶಾಂತ್ನನ್ನು ಕಳೆದುಕೊಂಡು ಪೋಷಕರು ಎದೆ ಹೊಡೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಮೊಮ್ಮಗನ ಸಾವಿನ ವಿಚಾರ ತಿಳಿದು ಅಜ್ಜಿ ಕುಸಿದು ಬಿದ್ದಿದ್ದಾರೆ. ಇಡೀರಾತ್ರಿ ಆಸ್ಪತ್ರೆ ಮುಂಭಾಗ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.
ನಮಗೆ ನ್ಯಾಯ ಒದಗಿಸುವಂತೆ ತಂದೆ ಲೋಕೇಶ್ ಆಗ್ರಹ
ಕಸದ ವಾಹನ ಡಿಕ್ಕಿಯಾಗಿ ನನ್ನ ಮಗ, ಯುವತಿ ಮೃತಪಟ್ಟಿದ್ದಾರೆ. ನನ್ನ ಮಗ, ಯುವತಿ ಇಬ್ಬರೂ ಟಿಸಿಎಸ್ನಲ್ಲಿ ಕೆಲಸ ಮಾಡ್ತಿದ್ದರು. ಅಪಘಾತದಲ್ಲಿ ನನ್ನ ಮಗ, ಯುವತಿ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತ ಎಸಗಿದ ಲಾರಿ ಚಾಲಕನನ್ನು ಕೂಡಲೇ ಬಂಧಿಸಬೇಕು. ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ನಾನು, ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ತೇವೆ ಎಂದು ಪೊಲೀಸರ ಬಳಿ ಮೃತ ಪ್ರಶಾಂತ್ ತಂದೆ ಲೋಕೇಶ್ ಕಣ್ಣಿರು ಹಾಕಿದ್ದಾರೆ. ನನ್ನ ಮಗ ಇದೇ ಮಾರ್ಥಾಸ್ ಆಸ್ಪತ್ರೆಯಲ್ಲಿ ಜನಿಸಿದ್ದ. ಈಗ ಇದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ಅಳಲು ತೋಡಿಕೊಂಡಿದ್ದಾರೆ.