Tomato Vehicle Theft : ಮಾರುಕಟ್ಟೆಯಲ್ಲಿ ಈಗ ಟೊಮೆಟೊಗೆ ಬಂಗಾರದ ಬೆಲೆ ಇದೆ. ದರ ಗಗನಕ್ಕೇರಿರುವ ಸಂದರ್ಭದಲ್ಲಿ ಟೊಮೊಟೊ ತುಂಬಿದ್ದ ಗೂಡ್ಸ್ ವಾಹನವನ್ನೇ ಕಳ್ಳತನ ಮಾಡಿದ್ದ ದಂಪತಿಯನ್ನ ಆರ್.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಭಾಸ್ಕರ್ ಹಾಗೂ ಆತನ ಪತ್ನಿ ಸಿಂಧುಜಾ ಬಂಧಿತ ಖತರ್ನಾಕ್ ದಂಪತಿ. ಇನ್ನೂಳಿದ ಆರೋಪಿಗಳಾದ ರಾಕಿ, ಕುಮಾರ್, ಮಹೇಶ್ ಎಸ್ಕೇಪ್ ಆಗಿದ್ದಾರೆ. ಜುಲೈ 8ರಂದು ಹಿರಿಯೂರಿನ ರೈತರೊಬ್ಬರು ಜಮೀನಿನಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಕೆಜಿಯಷ್ಟು ಟೊಮೊಟೊವನ್ನ ಕೋಲಾರಕ್ಕೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ಆರ್ ಎಂ ಸಿ ಯಾರ್ಡ್ ಬಳಿ ಬಳಿ ಬರುವಾಗ ಕಾರಿನಲ್ಲಿದ್ದ ಆರೋಪಿಗಳು ತಮ್ಮ ಕಾರಿಗೆ ನಿಮ್ಮ ವಾಹನ ಟಚ್ ಆಗಿದೆ ಎಂದು ಗಲಾಟೆ ಶುರು ಮಾಡಿದ್ದರು. ಬಲವಂತದಿಂದ ವಾಹನ ನಿಲ್ಲಿಸಿ ಚಾಲಕ, ರೈತನ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಗಾಡಿಯಲ್ಲಿದ್ದ ಟೊಮಾಟೊ ನೋಡಿ ಕಳ್ಳತನದ ಸಂಚು ರೂಪಿಸಿದ್ದರು.
ಚಾಲಕ ಹಾಗೂ ರೈತನನ್ನ ಬೆದರಿಸಿ ಕರೆದುಕೊಂಡು ಹೋಗಿ ಚಿಕ್ಕಜಾಲ ಬಳಿ ಬಿಟ್ಟು ಟೊಮೊಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದರು. ನಂತರ ಚೆನ್ನೈ ಮಾರುಕಟ್ಟೆಯಲ್ಲಿ ಟೊಮೊಟೊ ಮಾರಾಟ ಮಾಡಿದ್ದರು.
ಬಳಿಕ ಖಾಲಿ ವಾಹನ ತಂದು ಪೀಣ್ಯ ಬಳಿ ನಿಲ್ಲಿಸಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪರಾರಿಯಾಗಿದ್ದರು. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರ ಇಬ್ಬರು ಆರೋಪಿಗಳನ್ನ ಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.