ಗಬ್ಬೆದ್ದು ನಾರುತ್ತಿವೆ ಶೌಚಾಲಯಗಳು; ವಿಶ್ವಕಪ್​ಗೂ ಮುನ್ನ 5 ಕ್ರೀಡಾಂಗಣಗಳ ರಿಪೇರಿಗೆ ಮುಂದಾದ ಬಿಸಿಸಿಐ

ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ ಭಾರತ ಆತಿಥ್ಯವಹಿಸುತ್ತಿದೆ. ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣವನ್ನು ನವೀಕರಿಸಲು ಬಯಸಿದೆ. ಪ್ರೇಕ್ಷಕರ ದೂರಿನ ಮೇರೆಗೆ ನವೀಕರಣಕ್ಕಾಗಿ ಬಿಸಿಸಿಐ ಒಟ್ಟು ಐದು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದ್ದು, ಈ 5 ಕ್ರೀಡಾಂಗಣಗಳ ನವೀಕರಣಕ್ಕೆ ಒಟ್ಟು 500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ. ಐದು ಕ್ರೀಡಾಂಗಣಗಳಲ್ಲಿ ಒಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ.  ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಸರಣಿಯ ಸಂದರ್ಭದಲ್ಲಿ ಪ್ರೇಕ್ಷಕರು ಕ್ರೀಡಾಂಗಣದ ಕೊಳಕು ಶೌಚಾಲಯಗಳ ಬಗ್ಗೆ ದೂರಿದರು.  ಇದಕ್ಕಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ದುರಸ್ಥಿತಿಗೆ ಬಿಸಿಸಿಐ 100 ಕೋಟಿ ರೂ.  ಮೀಸಲಿಟ್ಟಿದೆ.ಮುಂಬೈನ ವಾಂಖೆಡೆ ಸ್ಟೇಡಿಯಂ ಕೂಡ ತನ್ನ ಅನೈರ್ಮಲ್ಯ ಶೌಚಾಲಯಗಳಿಗೆ ಕುಖ್ಯಾತವಾಗಿದೆ. ಹೀಗಾಗಿ ಮಂಡಳಿಯಿಂದ ವಾಂಖೇಡ್‌ಗೆ 78 ಕೋಟಿ 82 ಲಕ್ಷ ರೂ. ಅನುದಾನ ನೀಡಲಾಗಿದೆ.ಅಲ್ಲದೆ ಹೈದರಾಬಾದ್​ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ ದುರಸ್ಥಿಗೆ 117 ಕೋಟಿ 17 ಲಕ್ಷ ರೂ. ಅನುದಾನ  ನೀಡಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಅಶುಚಿಯಾದ ಶೌಚಾಲಯಗಳ ಬಗ್ಗೆ ದೂರುಗಳ ಪಟ್ಟಿಯಲ್ಲಿ ಐಕಾನಿಕ್ ಈಡನ್ ಗಾರ್ಡನ್ಸ್ ಕೂಡ ಇದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದೂರುಗಳ ಆಧಾರದ ಮೇಲೆ ಬಿಸಿಸಿಐ, ಈಡನ್‌ ಗಾರ್ಡನ್ಸ್ ದುರಸ್ಥಿಗೆ 127.82 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣಕ್ಕೆ 79.46 ಕೋಟಿ ರೂ. ನೀಡುತ್ತಿದೆ.ಐಸಿಸಿ ಏಕದಿನ ವಿಶ್ವಕಪ್‌ಗೆ ಒಟ್ಟು 12 ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ.  ಮೇಲಿನ ಕ್ರೀಡಾಂಗಣಗಳ ಹೊರತಾಗಿ ಚೆನ್ನೈ, ಧರ್ಮಶಾಲಾ, ಗುವಾಹಟಿ, ಬೆಂಗಳೂರು, ಲಕ್ನೋ, ಇಂದೋರ್‌ನಲ್ಲಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲ್ಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.

source https://tv9kannada.com/photo-gallery/cricket-photos/bcci-plans-massive-upgrade-of-stadiums-ahead-of-odi-world-cup-au14-556069.html

Leave a Reply

Your email address will not be published. Required fields are marked *