ಕಣ್ಣೀರಿನೊಂದಿಗೆ ವಿದಾಯ ಹೇಳಿದ ಟೆನಿಸ್ ಲೋಕದ ಅನಭಿಷಕ್ತ ದೊರೆ ರಾಫೆಲ್ ನಡಾಲ್.

ಟೆನಿಸ್ ಅಂಗಳದ ಅನಭಿಷಕ್ತ ದೊರೆ ರಾಫೆಲ್ ನಡಾಲ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಮಂಗಳವಾರ ನಡೆದ ಡೇವಿಡ್ ಕಪ್​ ಕ್ವಾರ್ಟರ್​ ಫೈನಲ್​ನಲ್ಲಿ ಸ್ಪೇನ್ ಸೋಲನುಭವಿಸಿದ್ದು, ಇದರೊಂದಿಗೆ ನಡಾಲ್ ಅವರ ವೃತ್ತಿ ಜೀವನ ಕೂಡ ಕೊನೆಗೊಂಡಿದೆ. ಅಂತಿಮ ಪಂದ್ಯದಲ್ಲಿ ನೆದರ್​ಲೆಂಡ್ಸ್​ನ ಬೊಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ಅವರನ್ನು ಎದುರಿಸಿದ ಸ್ಪೇನ್ ದಿಗ್ಗಜ 6-4, 6-4 ಅಂತರದಿಂದ ಪರಾಜಯಗೊಂಡರು.

ಈ ಸೋಲಿನೊಂದಿಗೆ ರಾಫೆಲ್ ನಡಾಲ್ 20 ವರ್ಷಗಳ ತಮ್ಮ ವರ್ಣರಂಜಿತ ಟೆನಿಸ್ ಕೆರಿಯರ್ ಅನ್ನು ಅಂತ್ಯಗೊಳಿಸಿದರು. ಈ ಇಪ್ಪತ್ತು ವರ್ಷಗಳಲ್ಲಿ ರಾಫೆಲ್ ನಡಾಲ್ ಅವರ ಸಾಧನೆಗಳ ಪಟ್ಟಿ ಈ ಕೆಳಗಿನಂತಿದೆ…

  • 1080 ಸಿಂಗಲ್ಸ್ ಜಯ
  • 92 ಸಿಂಗಲ್ಸ್ ಪ್ರಶಸ್ತಿಗಳು
  • 63 ಸಿಂಗಲ್ಸ್ ಪ್ರಶಸ್ತಿಗಳು (ಕ್ಲೇ ಕೋರ್ಟ್​)
  • 36 ಮಾಸ್ಟರ್ಸ್ ಪ್ರಶಸ್ತಿಗಳು (1000 30s)
  • 30 ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳು
  • 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು
  • 14 ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಗಳು
  • 2 ಒಲಿಂಪಿಕ್ಸ್ ಚಿನ್ನದ ಪದಕಗಳು

ದಿ ಕಿಂಗ್ ಆಫ್ ಕ್ಲೇ:

ರಾಫೆಲ್ ನಡಾಲ್ ದಿ ಕಿಂಗ್ ಆಫ್ ಕ್ಲೇ ಕೋರ್ಟ್ ಎಂದೇ ಗುರುತಿಸಿಕೊಂಡಿದ್ದರು. ಇದಕ್ಕೆ ಸಾಕ್ಷಿಯಾಗಿ ಕ್ಲೇ ಕೋರ್ಟ್​ನಲ್ಲಿ 63 ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಅದರಲ್ಲೂ ಫ್ರೆಂಚ್ ಓಪನ್​ನ ಕ್ಲೇ ಕೋರ್ಟ್​ನಲ್ಲಿ 14 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಹಾಗೆಯೇ ನೊವಾಕ್ ಜೊಕೊವಿಚ್ (24) ನಂತರ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಆಟಗಾರ ಎಂಬ ದಾಖಲೆ ಕೂಡ ರಾಫೆಲ್ ನಡಾಲ್ ಹೆಸರಿನಲ್ಲಿದೆ. ಸ್ಪೇನ್ ತಾರೆ ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್‌ ಸ್ಲಾಮ್‌ಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ 4 ಬಾರಿ ಯುಎಸ್ ಓಪನ್, 2 ಬಾರಿ ವಿಂಬಲ್ಡನ್ ಮತ್ತು 2 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ವೃತ್ತಿ ಬದುಕಿನ ಕೊನೆಯ ಟೂರ್ನಿಯಲ್ಲಿ ಸೋತು ಕಣ್ಣೀರಿನೊಂದಿಗೆ ರಾಫೆಲ್ ನಡಾಲ್ ವಿದಾಯ ಹೇಳಿದ್ದಾರೆ.

Source : https://tv9kannada.com/sports/rafael-nadals-sensational-career-ends-kannada-news-zp-937525.html

Leave a Reply

Your email address will not be published. Required fields are marked *