Team India: ಭಾರತ ತಂಡವು ಕಳೆದ 11 ವರ್ಷಗಳಲ್ಲಿ ತವರಿನಲ್ಲಿ 18 ಟೆಸ್ಟ್ ಸರಣಿಗಳನ್ನು ಆಡಿದೆ. ಈ ಹದಿನೆಂಟು ಸರಣಿಗಳಲ್ಲೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಸತತವಾಗಿ 15 ಕ್ಕಿಂತ ಅಧಿಕ ಸರಣಿಗಳನ್ನು ಗೆದ್ದ ವಿಶ್ವ ಏಕೈಕ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ.
ಸೋಲೇ ಇಲ್ಲ… ಡ್ರಾ ಅಂತು ಇಲ್ಲವೇ ಇಲ್ಲ… ಇದು ಭಾರತದಲ್ಲಿನ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ. ಹೌದು, ಕಳೆದ ಒಂದು ದಶಕದಿಂದ ಭಾರತ ತಂಡವು ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲ. ಅದರಲ್ಲೂ ಯಾವುದೇ ಎದುರಾಳಿಗೂ ಕನಿಷ್ಠ ಪಕ್ಷ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಸಾಧ್ಯವಾಗಿಲ್ಲ ಎಂದರೆ ನಂಬಲೇಬೇಕು.
2013 ರಿಂದ ಶುರುವಾದ ಈ ಸರಣಿ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸತತ 18 ಸರಣಿಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ತವರಿನಲ್ಲಿ ಟೀಮ್ ಇಂಡಿಯಾ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
ವಿಶೇಷ ಎಂದರೆ ಟೀಮ್ ಇಂಡಿಯಾವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡ ತವರಿನಲ್ಲಿ ಸತತವಾಗಿ 10 ಕ್ಕಿಂತ ಅಧಿಕ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 1994 ರಿಂದ 2000 ನಡುವೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದಿರುವುದು ಶ್ರೇಷ್ಠ ಸಾಧನೆ.
ಇತ್ತ ಟೀಮ್ ಇಂಡಿಯಾ 2013 ರಿಂದ 2024 ರವರೆಗೆ ತವರಿನಲ್ಲಿ ಸತತವಾಗಿ 18 ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡದಿಂದಲೂ ಸಾಧ್ಯವಾಗದ ಸರ್ವಶ್ರೇಷ್ಠ ದಾಖಲೆಯನ್ನು ಟೀಮ್ ಇಂಡಿಯಾ ಮಾಡಿ ತೋರಿಸಿದೆ.
ಇನ್ನು ಟೀಮ್ ಇಂಡಿಯಾದ ಮುಂದಿನ ಎದುರಾಳಿ ನ್ಯೂಝಿಲೆಂಡ್. ಅಕ್ಟೋಬರ್ 16 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಒಟ್ಟು 3 ಪಂದ್ಯಗಳನ್ನಾಡಲಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯಲ್ಲೂ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿ ಗೆಲುವಿನ ನಾಗಾಲೋಟವನ್ನು 19ಕ್ಕೇರಿಸುವ ವಿಶ್ವಾಸದಲ್ಲಿದೆ.