
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 19 : ಕೃಷಿಗೆ 7 ತಾಸು ತ್ರಿಫೇಜ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ
ಮಾಡುವುದು ಸರ್ಕಾರದ ನೀತಿಯಾಗಿದ್ದು ಇದಕ್ಕೆ ಬದ್ಧವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್
ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವೇ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗಾಗಿ ಕಡಿತ
ಮಾಡಲಾಗುತ್ತದೆ. ಆದರೆ ಸರ್ಕಾರದ ಬದ್ಧತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ
ನೀಡಲಾಗಿದೆ, ಆದರೆ ಲೋಡ್‍ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ 18500 ಮೆಗಾವ್ಯಾಟ್ ಬೇಡಿಕೆ ಇದ್ದು ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ 10 ರಷ್ಟು
ವಿದ್ಯುತ್ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್
ಬ್ಯಾಂಕಿಂಗ್ ಮಾಡಿಕೊಂಡು ಜೂನ್‍ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ
ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ. ಗುಣಮಟ್ಟದ ವೋಲ್ಟೇಜ್‍ಗಾಗಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು
ಸ್ಥಾಪಿಸಲಾಗುತ್ತಿದೆ ಎಂದರು.
ಕುಸುಮ್-ಸಿ ಯೋಜನೆಯ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ಸೋಲಾರ್ ರಿಂದ 3 ಸಾವಿರ ಮೆಗಾವ್ಯಾಟ್ ವಿದ್ಯುತ್
ಉತ್ಪಾದನೆಯ ಗುರಿ ಹೊಂದಲಾಗಿದೆ. ಈಗಾಗಲೇ ಕುಸುಮ್ ಯೋಜನೆಯಡಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು ಸೋಲಾರ್
ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದ್ದು ಬರುವ ಏಪ್ರಿಲ್‍ನಲ್ಲಿ 300
ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‍ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಇಂಧನ ಇಲಾಖೆಯಲ್ಲಿನ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ, ಆದರೆ ಸರ್ಕಾರದಿಂದ ಸಾಕಷ್ಟು ಹಣ ಬರಬೇಕಾಗಿದೆ. ಸ್ಥಳೀಯ
ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ
ಇದೆ. ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೆಇಆರ್ಸಿ ಮಾಡಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು
ಪಡೆಯುವ ಮೂಲಕ ದರ ಏರಿಕೆ ನಿರ್ಣಯಗಳನ್ನು ಕೆಇಆರ್ ಸಿ ನಿರ್ಧರಿಸಲಿದೆ. ಯಾರದೂ ಕೂಡ ಹಸ್ತಕ್ಷೇಪ ಇರುವುದಿಲ್ಲ, ಕಳೆದ
ವರ್ಷ ಯಾವುದೇ ವಿದ್ಯುತ್ ದರ ಏರಿಕೆ ಮಾಡಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳೊಂದಾದ ಗೃಹಜ್ಯೋತಿ ಯೋಜನೆ ಎಲ್ಲಾ ವರ್ಗದ ಜನರಿಗೂ ಅನ್ವಯಿಸಲಿದ್ದು 200 ಯುನಿಟ್
ವರೆಗೆ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಅವರು ವರ್ಷದಲ್ಲಿ ಉಪಯೋಗಿಸುವ ಯುನಿಟ್‍ಗಳನ್ನಾಧರಿಸಿ
ಹೆಚ್ಚುವರಿಯಾಗಿ ಶೇ 10 ರಷ್ಟು ಸೇರಿಸಿ ಬಳಕೆಯ ಯುನಿಟ್ ನಿಗದಿಯಾಗುತ್ತದೆ. ಆದರೆ 200 ಯುನಿಟ್ ನಂತರ 1 ಯುನಿಟ್
ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕಾಗುತ್ತದೆ ಎಂದರು.
ರೈತರ ಕೃಷಿ ಪಂಪ್ ಸೆಟ್‍ಗಳಿಗೆ ದಿನದಲ್ಲಿ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಎಲ್ಲಾ ರೈತರಿಗೂ
ದಿನದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸರ್ಕಾರದ ನೀತಿಯಾಗಿದ್ದು ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್
ಲೋಡಿಂಗ್ ಆದರೆ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ನೀಡಲೇಬೇಕೆಂದು ಸೂಚನೆ ನೀಡಿದರು.
ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 2004 ರಿಂದಲೂ ಅಕ್ರಮ-ಸಕ್ರಮ ಎಂಬ ಕಾರ್ಯಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ
ಮಾಡುತ್ತಾ ಬರಲಾಗಿದೆ. ಇದರಡಿ ಮೂಲಭೂತ ಸೌಕರ್ಯದಡಿ ಮಾರ್ಗ, ಟಿಸಿ ಅಳವಡಿಕೆ ಮಾಡಲಾಗಿದೆ. ಬಾಕಿ ಇರುವ 4946
ಪಂಪ್‍ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತವಾಗಿ ಮೂಲಭೂತ ಸೌಕರ್ಯ
ಮಾಡಿಕೊಂಡು ಕೃಷಿ ಪಂಪ್‍ಸೆಟ್‍ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಭೂತ ಸೌಕರ್ಯಕ್ಕಾಗಿ
ಸರತಿಯಲ್ಲಿ ಕಾಯುವ ಎರಡು ಅವಕಾಶಗಳನ್ನು ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆ
ಎಂಬ ಚಿಂತನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಮಾಜಿ ಸಚಿವರಾದ ಹೆಚ್.ಅಂಜನೇಯ, ಮಾಜಿ ಶಾಸಕರಾದ
ಎ.ಉಮಾಪತಿ. ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ದ್ರಾಕ್ಷಾರಸ ನಿಗಮದ ಅಧ್ಯಕ್ಷ ಯೋಗಿಶ್
ಬಾಬು, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ತಾಲ್ಲೂಕು ಗ್ಯಾರೆಂಟಿ ಆಧ್ಯಕ್ಷ ಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ,
ವೆಂಕಟೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶ್ರೀಮತಿ ಜಯಮ್ಮ, ಮೈಲಾರಪ್ಪ, ಚೋಟು, ಜಯ್ಯಣ್ಣ, ಖುದ್ದುಸ್, ಅಂಜನಪ್ಪ,
ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 0