ಕೆಲವು ಶಾಲೆಗಳು ಕೆಲವೇ ಶಿಕ್ಷಕರನ್ನು ಹೊಂದಿದ್ದರೆ (ಹಲವು ಸಂದರ್ಭಗಳಲ್ಲಿ ಒಬ್ಬರು) ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳು ದಾಖಲಾಗದಿದ್ದರೂ ಹೆಚ್ಚುವರಿ ಸಿಬ್ಬಂದಿ ಇದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸುಮಾರು 6,158 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬರು ಶಿಕ್ಷಕರಿದ್ದು, 1.38 ಲಕ್ಷ ವಿದ್ಯಾರ್ಥಿಗಳ ಜವಾಬ್ದಾರಿ ಹೊಂದಿದ್ದರೆ, ಶೂನ್ಯ ದಾಖಲಾತಿ ಹೊಂದಿರುವ 530 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಆದರೆ 358 ಶಿಕ್ಷಕರಿದ್ದಾರೆ.
ಇದು ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ತೋರಿಸುತ್ತದೆ. ಕೆಲವು ಶಾಲೆಗಳು ಕೆಲವೇ ಶಿಕ್ಷಕರನ್ನು ಹೊಂದಿದ್ದರೆ (ಹಲವು ಸಂದರ್ಭಗಳಲ್ಲಿ ಒಬ್ಬರು) ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳು ದಾಖಲಾಗದಿದ್ದರೂ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಆದರೆ, ಅಂತಹ ಶಾಲೆಗಳ ಶಿಕ್ಷಕರನ್ನು ಅಗತ್ಯವಿರುವೆಡೆಗೆ ವರ್ಗಾಯಿಸಲಾಗಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದಲ್ಲಿ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಒಟ್ಟು ಶಾಲೆಗಳ ಸಂಖ್ಯೆ 2023-24ರಲ್ಲಿದ್ದ 6,360 ರಿಂದ 2024-25ರಲ್ಲಿ 6,158ಕ್ಕೆ ಅಂದರೆ 202ಕ್ಕೆ ಕಡಿಮೆಯಾಗಿದೆ. ಆದಾಗ್ಯೂ, ದಾಖಲಾತಿಯು 33,794 ರಷ್ಟು ಕಡಿಮೆಯಾಗಿದೆ. ಇದಕ್ಕೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಏರಿಕೆಯಾಗಿರಬಹುದೆಂದು ತಜ್ಞರು ಹೇಳುತ್ತಾರೆ.
ವಿಷಯ ಶಿಕ್ಷಕರ ಕೊರತೆ ವಿದ್ಯಾರ್ಥಿಗಳನ್ನು ದೂರ ಮಾಡುತ್ತಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡ ಅಥವಾ ಸಮಾಜಶಾಸ್ತ್ರವನ್ನು ಕಲಿಸಲು ಮಾತ್ರ ಶಿಕ್ಷಕರನ್ನು ನಿಯೋಜಿಸಲಾಗಿದೆ ಮತ್ತು ಗಣಿತ ವಿಜ್ಞಾನ ಅಥವಾ ಇಂಗ್ಲಿಷ್‌ನಂತಹ ಪ್ರಮುಖ ವಿಷಯಗಳಲ್ಲ. ಅದೇ ಸಮಯದಲ್ಲಿ ಶೇ,100 ರಷ್ಟು ಉತ್ತೀರ್ಣ ದರ ಕಾಪಾಡಿಕೊಳ್ಳಳು ಶಾಲೆಗಳು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೊರಹಾಕುತ್ತಿವೆ ಎಂದು ತಜ್ಞರು ಹೇಳುತ್ತಾರೆ.
ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ ಮಾತನಾಡಿ, ಈ ಶಾಲೆಗಳಲ್ಲಿ ಶಿಕ್ಷಕರು ಕನ್ನಡ ಅಥವಾ ಸಮಾಜಶಾಸ್ತ್ರವನ್ನು ಮಾತ್ರ ಕಲಿಸುತ್ತಾರೆ. ಪೋಷಕರು, ತಮ್ಮ ಮಕ್ಕಳು ಗಣಿತ ಮತ್ತು ವಿಜ್ಞಾನವನ್ನು ಕಲಿಸುವ ಶಾಲೆಗಳಿಗೆ ಹೋಗಬೇಕೆಂದು ಬಯಸುತ್ತಾರೆ. ಇದರಿಂದ ಅನೇಕರು ಅನುದಾನಿತ ಅಥವಾ ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ ಎಂದರು.
ಇದಲ್ಲದೆ, ಒಬ್ಬ ವಿದ್ಯಾರ್ಥಿಯು ಉನ್ನತ ಪ್ರಾಥಮಿಕ ಹಂತವನ್ನು ತಲುಪುವ ಹೊತ್ತಿಗೆ, ಶಾಲೆಗಳು ಉದ್ದೇಶಪೂರ್ವಕವಾಗಿ 10 ನೇ ತರಗತಿಯಲ್ಲಿ ಶೇ.100 ರಷ್ಟು ಉತ್ತೀರ್ಣ ದರ ಕಾಯ್ದುಕೊಳ್ಳಲು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೊರಹಾಕುತ್ತವೆ. ಇದು ನಿಜವಾದ ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ. ಆದರೆ ವ್ಯವಸ್ಥೆಯ ವೈಫಲ್ಯವನ್ನು ಮರೆಮಾಚುತ್ತದೆ. 7 ಮತ್ತು 8 ನೇ ತರಗತಿ ಮತ್ತು 10 ನೇ ತರಗತಿಯ ನಡುವೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಸಂಖ್ಯೆ ಏಕೆ ಹೆಚ್ಚಾಗುತ್ತವೆ ಎಂದು ಯಾರೂ ಪ್ರಶ್ನಿಸುವುದಿಲ್ಲ ಎಂದು ಅವರು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು ಎಲ್ಲಿಗೆ ಹೋಗುತ್ತಾರೆ. ಅವರು ಬೇರೆ ಶಾಲೆಗಳಿಗೆ ಸೇರುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಬಾಲಕಾರ್ಮಿಕರು ಇಲ್ಲ ಎಂದು ಸರ್ಕಾರ ಹೇಳಿಕೊಂಡರೂ ಈ ಮಕ್ಕಳಲ್ಲಿ ಕೆಲವರು ಬಲವಂತವಾಗಿ ದುಡಿಯುವಂತೆ ಮಾಡಿದ್ದರೆ ಇನ್ನು ಕೆಲವರು ಬಾಲ್ಯವಿವಾಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ಶರ್ಮಾ ಹೇಳಿದರು.
ಇದಲ್ಲದೆ, ಶಿಕ್ಷಕರು ತಮ್ಮ ಪ್ರಭಾವನನ್ನು ಹೆಚ್ಚಾಗಿ ನಗರಗಳು ಅಥವಾ ಪಟ್ಟಣಗಳ ಶಾಲೆಗಳಿಗೆ ವರ್ಗಾಯಿಸಲು ಬಳಸುತ್ತಾರೆ. ಅನೇಕ ಸಂದರ್ಭಗಳಲ್ಲಿ, ಶಿಕ್ಷಕರೂ ಸಹ ದೂರದ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕೆಲಸಕ್ಕೆ ವರದಿ ಮಾಡದ ಕಾರಣ ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಉಳಿಯುತ್ತಾರೆ. ಶಿಕ್ಷಕರಿಗೂ ವಸತಿ ಸೌಲಭ್ಯ ಒದಗಿಸದಿದ್ದರೆ ಪ್ರತಿದಿನ 50 ಕಿಮೀ ಪ್ರಯಾಣಿಸಲು ಸಾಧ್ಯವಿರುವುದಿಲ್ಲ ಎಂದು ತಜ್ಞರು ಹೇಳಿದರು.
ಅಭಿವೃದ್ಧಿ ಶಿಕ್ಷಣತಜ್ಞ ಪ್ರಾಧ್ಯಾಪಕ ನಿರಂಜನಾರಾಧ್ಯ ವಿಪಿ ಮಾತನಾಡಿ, ಪ್ರತಿ ಶಾಲೆಗೆ ಒಬ್ಬ ಶಿಕ್ಷಕರನ್ನು ಹೊಂದುವ ಪರಿಕಲ್ಪನೆಯು ಪೋಷಕರಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಬಗ್ಗೆ ಆತ್ಮವಿಶ್ವಾಸವನ್ನು ಉಂಟುಮಾಡುವಲ್ಲಿ ಕಷ್ಟವಾಗುತ್ತದೆ. ಇಡೀ ಶಾಲೆಗೆ ಒಬ್ಬ ಶಿಕ್ಷಕರನ್ನು ಹೊಂದಿರುವುದು ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಠ ಇಬ್ಬರು ಶಿಕ್ಷಕರನ್ನು ಹೊಂದಿರಬೇಕು, ಆದರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಠ ಮೂವರು ಶಿಕ್ಷಕರು ಇರಬೇಕು. ಪ್ರಸ್ತುತ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂದು ಬಯಸುತ್ತಾರೆ, ಕಲಿಕೆಯ ಮಾಧ್ಯಮವಾಗಿ ಅಲ್ಲ, ಕನಿಷ್ಠ ಭಾಷೆಯಾಗಿ. ಆದಾಗ್ಯೂ, ಒಬ್ಬ ಶಿಕ್ಷಕನು ಎಲ್ಲಾ ವಿಷಯಗಳು, ತರಗತಿಗಳು ಮತ್ತು ಕಾರ್ಯಗಳನ್ನು ನಿರ್ವಹಿಸಬೇಕಾದರೆ ಇದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯಾದ್ಯಂತ 5 ಸಾವಿರ ಶಿಕ್ಷಕರ ನೇಮಕ: ರಾಜ್ಯಾದ್ಯಂತ ಸುಮಾರು 5,000 ಶಿಕ್ಷಕರ ನೇಮಕಾತಿಗೆ ಇಲಾಖೆ ಚಾಲನೆ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.“ಇದು ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ನೇಮಕಾತಿ ಅಭಿಯಾನವನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.