ದಾವಣಗೆರೆ: ಕಿಟಕಿ ಸರಳು ಮುರಿದು ಎಸ್​ಬಿಐ ಬ್ಯಾಂಕ್​ಗೆ ಕನ್ನ, ನಗದು-ಚಿನ್ನಾಭರಣ ಕದ್ದೊಯ್ದ ಕಳ್ಳರು

ದಾವಣಗೆರೆ: ಕಳ್ಳರು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ)ದ ಬ್ಯಾಂಕ್ ಕಿಟಕಿಯ ಸರಳು ಮುರಿದು ಜಿಲ್ಲೆಯ ನ್ಯಾಮತಿ ಪಟ್ಟಣದ ನೆಹರು ರಸ್ತೆಯಲ್ಲಿರುವ ಶಾಖೆಯಲ್ಲಿ ಹಣ ಚಿನ್ನಾಭರಣ ಕದ್ದೊಯ್ದಿರುವ ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯೇ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಹಾಗು ಭಾನುವಾರ ಎರಡು ದಿನಗಳ ಕಾಲ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಿಟಕಿಯ ಸರಳುಗಳನ್ನು ಮುರಿದು ಎಸ್ ಬಿಐ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು ಇಡೀ ಬ್ಯಾಂಕ್ ತಡಕಾಡಿದ್ದಾರೆ. ಬಳಿಕ ಬ್ಯಾಂಕ್ ನ ಮೇನ್ ಲಾಕರ್​ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ಅಲ್ಲದೆ ಚಿನ್ನಾಭರಣ ಮತ್ತು ನಗದು ಜೊತೆಗೆ ಕಳ್ಳರು ಸಿಸಿಟಿವಿ ಕ್ಯಾಮರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯಾಮತಿ ಪೊಲೀಸ್ ಠಾಣೆಯ ಪಿಐ ಎನ್.ಎಸ್. ರವಿ ಅವರ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿದೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಬೇಕಿದೆ.

Source : https://www.etvbharat.com/kn/!state/thieves-robbed-the-bank-in-davanagere-district-karnataka-news-kas24102802133

Leave a Reply

Your email address will not be published. Required fields are marked *