IND vs ENG: ಭಾರತ ತಂಡ ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ 93 ವರ್ಷಗಳಾಗಿವೆ. ಈ ತೊಂಬತ್ತಮೂರು ವರ್ಷಗಳಲ್ಲಿ ಟೀಮ್ ಇಂಡಿಯಾ 593 ಪಂದ್ಯಗಳನ್ನಾಡಿದೆ. ಆದರೆ ಹಿಂದೆಂದೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಗೆಲುವು ದಾಖಲಿಸಿದೆ. ಅದು ಸಹ ಕೇವಲ ಒಂದಂಕಿ ರನ್ಗಳ ಅಂತರದಿಂದ..!

ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಒಂದಂಕಿ ರನ್ ಅಂತರದಿಂದ ಗೆಲುವು ದಾಖಲಿಸಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೇವಲ 6 ರನ್ಗಳ ಅಂತರದಿಂದ ಜಯ ಸಾಧಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

ಇದಕ್ಕೂ ಮುನ್ನ, 2004 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ 13 ರನ್ಗಳ ಅಂತರದಿಂದ ಜಯ ಸಾಧಿಸಿದ್ದು ಈವರೆಗಿನ ಶ್ರೇಷ್ಠ ಗೆಲುವಾಗಿತ್ತು. ಆದರೆ ಈ ಬಾರಿ ಯಂಗ್ ಇಂಡಿಯಾ ಹುಡುಗರು ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಸಹ ಆತಿಥೇಯ ಆಂಗ್ಲರ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ.

ಹಾಗೆಯೇ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದು 9ನೇ ಅತೀ ಕಡಿಮೆ ಅಂತರದ ಗೆಲುವು. ಈ ಪಟ್ಟಿಯಲ್ಲಿ 1 ರನ್ಗಳ ಅಂತರದಿಂದ ಟೆಸ್ಟ್ ಪಂದ್ಯ ಗೆದ್ದಿದ್ದ ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳು ಅಗ್ರಸ್ಥಾನಗಳಲ್ಲಿವೆ. ಇದೀಗ 6 ರನ್ಗಳ ಅಂತರದಿಂದ ಗೆಲುವು ದಾಖಲಿಸಿ ಒಂದಂಕಿ ರನ್ ವಿಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲೂ ಟೀಮ್ ಇಂಢಿಯಾ ಸ್ಥಾನ ಪಡೆದುಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಈ ರೋಚಕ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಇಂಗ್ಲೆಂಡ್ 5 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್ನಲ್ಲಿ ಇಂಗ್ಲೆಂಡ್ ತಂಡವು 22 ರನ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ನಾಲ್ಕ ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಐದನೇ ಮ್ಯಾಚ್ನಲ್ಲಿ 6 ರನ್ಗಳ ಐತಿಹಾಸಿಕ ವಿಜಯ ಸಾಧಿಸಿ ಟೀಮ್ ಇಂಡಿಯಾ ಸರಣಿಯನ್ನು 2-2 ಅಂತರದಿಂದ ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.
Views: 22