ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ Bank Janardhan ಬದುಕಿನ ಕಷ್ಟದ ಕಥೆ ಇದು!

ಸುಮಾರು 860 ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್‌ ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಬ್ಯಾಂಕ್ ಕೆಲಸವನ್ನೂ ಮಾಡುತ್ತಿದ್ದವರು ಬ್ಯಾಂಕ್ ಜನಾರ್ಧನ್. ಎರಡು ದೋಣಿಯ ಮೇಲೆ ಕಾಲು ಇಟ್ಟಿದ್ದ ಬ್ಯಾಂಕ್ ಜನಾರ್ಧನ್‌ ಅವರ ಬ್ಯಾಂಕ್ ಬ್ಯಾಲೆನ್ಸ್ ನಿಲ್ ಆಗಿತ್ತು ಅಂದ್ರೆ ನೀವು ನಂಬಲೇಬೇಕು.

‘ಶ್‌..!’ ಸಿನಿಮಾದಲ್ಲಿ ಬಾಯ್ಬಿಟ್ಟರೆ ಸಾಕು ಬಾಯಿಗೆ ಬಂದಂಗೆ ಬೈಯುವ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಮಿಂಚಿದ್ದವರು ಬ್ಯಾಂಕ್ ಜನಾರ್ಧನ್‌. ‘ಶ್‌..!’ ಚಿತ್ರವನ್ನ ಮೂರಿ ಬಾರಿ ವೀಕ್ಷಿಸಿದ್ಮೇಲೆ ‘’ಇಷ್ಟು ಚೆನ್ನಾಗಿ ಬೈಯ್ಯೋದನ್ನ ಎಲ್ಲಿ ಕಲಿತ್ರಿ?’’ ಅಂತ ಬ್ಯಾಂಕ್‌ ಜನಾರ್ಧನ್‌ಗೆ ವರನಟ ಡಾ ರಾಜ್‌ಕುಮಾರ್ ಕೇಳಿದ್ರಂತೆ. ಅಷ್ಟು ನೈಜವಾಗಿ ಅಭಿನಯ ಮಾಡುತ್ತಿದ್ದವರು ಬ್ಯಾಂಕ್‌ ಜನಾರ್ಧನ್‌. ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಒಂದೇ ಟೇಕ್‌ನಲ್ಲಿ ಶಾಟ್ ಓಕೆ ಮಾಡುತ್ತಿದ್ದ ಜನಾರ್ಧನ್‌, ಬ್ಯಾಂಕ್‌ ಉದ್ಯೋಗಿಯೂ ಹೌದು. ಬ್ಯಾಂಕ್ ಮತ್ತು ಸಿನಿಮಾ.. ಎರಡರಲ್ಲೂ ಕೆಲಸ ಮಾಡುತ್ತಿದ್ದರೂ, ಜನಾರ್ಧನ್‌ ಅವರ ಬ್ಯಾಂಕ್‌ ಬ್ಯಾಲೆನ್ಸ್ ನಿಲ್ ಆಗಿತ್ತು ಅನ್ನೋದು ಕಟು ಸತ್ಯ!

ಬ್ಯಾಂಕ್ ಕೆಲಸ ಸಿಕ್ಕಿದ್ದು ಹೇಗೆ?
ಚಿತ್ರದುರ್ಗದ ಕಡುಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಬ್ಯಾಂಕ್ ಜನಾರ್ಧನ್. ತಂದೆ ಜೀಪ್ ಡ್ರೈವರ್‌ ಆಗಿದ್ದರು. ತಾಯಿ ಕೂಲಿ ಕೆಲಸ ಮಾಡುತ್ತಿದ್ದರು. ಹಾಗೂ ಹೀಗೂ ಓದಿ.. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಎರಡನೇ ಬಾರಿಗೆ ಪಾಸ್‌ ಮಾಡಿದ್ದರು ಜನಾರ್ಧನ್. ಆದರೆ, ಕೈಯಲ್ಲಿ ಕೆಲಸ ಇರಲಿಲ್ಲ. ಈ ವೇಳೆ ತಾಯಿ ಜೊತೆಗೆ ಜನಾರ್ಧನ್ ಸಹ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ತೋಟಗಳಲ್ಲಿ ಕಳೆ ಕೀಳೋದು, ಕಡಲೆ ಕಾಯಿ ಆರಿಸೋದು, ತೆಂಗಿನಕಾಯಿ ಗುಡ್ಡೇ ಹಾಕುವ ಕೆಲಸಗಳನ್ನ ಜನಾರ್ಧನ್‌ ಮಾಡುತ್ತಿದ್ದರು. ಹೊಳಲ್ಕೆರೆಯಲ್ಲಿ ಶಂಕರ್ ಶೆಟ್ಟಿ ಅವರ ತೋಟದಲ್ಲಿ ಜನಾರ್ಧನ್‌ ಕೂಲಿ ಕೆಲಸ ಮಾಡುತ್ತಿದ್ದರು. ಶಂಕರ್‌ ಶೆಟ್ಟಿ ಅವರ ಕೃಪೆಯಿಂದಲೇ ಜಯಲಕ್ಷ್ಮೀ ಬ್ಯಾಂಕ್‌ನಲ್ಲಿ ಜವಾನನ ಕೆಲಸಕ್ಕೆ ಜನಾರ್ಧನ್‌ ಸೇರಿಕೊಂಡರು. ಆ ಕಾಲಕ್ಕೆ ಇವರಿಗೆ ಜಯಲಕ್ಷ್ಮೀ ಬ್ಯಾಂಕ್‌ನಲ್ಲಿ ಜವಾನನ ಕೆಲಸಕ್ಕೆ 50 ರೂಪಾಯಿ ಸಂಬಳ ಸಿಗುತ್ತಿತ್ತು. ಬೆಳಗ್ಗೆ ವೇಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಸಂಜೆ ವೇಳೆ ಟೂರಿಂಗ್ ಟಾಕೀಸ್‌ನಲ್ಲಿ ಜನಾರ್ಧನ್‌ ಕಾರ್ಯನಿರ್ವಹಿಸುತ್ತಿದ್ದರು.

ನಟನೆಯ ಗೀಳು ಅಂಟಿತ್ತು!

8ನೇ ಕ್ಲಾಸ್‌ನಲ್ಲಿ ಓದುವಾಗಲೇ ನಾಟಕವೊಂದರಲ್ಲಿ ಅಭಿನಯಿಸಿ ಜನಾರ್ಧನ್‌ ಬಹುಮಾನ ಪಡೆದಿದ್ದರು. ಅಲ್ಲಿಂದ ನಟನೆ ಮೇಲೆ ಆಸಕ್ತಿ ಬೆಳೆಯಿತು. ಟೂರಿಂಗ್ ಟಾಕೀಸ್‌ ಸೇರಿದ್ಮೇಲೆ ಅಭಿನಯದ ಕಡೆಗೆ ಒಲವು ಮೂಡಿತು. ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ಒಮ್ಮೆ ಇವರ ನಾಟಕ ಕಂಡು, ‘ಬೆಂಗಳೂರಿಗೆ ಬಂದು ಸಿನಿಮಾ ಮಾಡಿ’ ಅಂತ ಧೀರೇಂದ್ರ ಗೋಪಾಲ್‌ ಸಲಹೆ ನೀಡಿದ್ದರು. ಹೀಗೆ ಬೆಂಗಳೂರಿಗೆ ಬಂದು ನಟಿಸಲು ಆರಂಭಿಸಿದ ಬ್ಯಾಂಕ್‌ ಜನಾರ್ಧನ್‌ ಅವರಿಗೆ ಸಿಕ್ಕಿದ್ದೆಲ್ಲಾ ಸಣ್ಣ – ಪುಟ್ಟ ಪಾತ್ರಗಳೇ.! ಒಂದೇ ಸೀನ್‌ ರೋಲ್‌ಗಳೇ.! ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡೇ ಸುಮಾರು 200 ಸಿನಿಮಾಗಳಲ್ಲಿ ಪುಟ್ಟ ರೋಲ್‌ಗಳಲ್ಲಿ ಬ್ಯಾಂಕ್‌ ಜನಾರ್ಧನ್‌ ಕಾಣಿಸಿಕೊಂಡರು.

ಅಲ್ಲೂ ಇಲ್ಲ, ಇಲ್ಲೂ ಇಲ್ಲ!

ಸಿನಿಮಾಗಳಲ್ಲಿ ಒಂದು ಸೀನ್‌ನಲ್ಲಿ ಅಭಿನಯಿಸುವುದಕ್ಕೆ, ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಿಗೆ ಕೊಡುವುದು ತೀರಾ ಕಡಿಮೆ ಸಂಭಾವನೆ. ಅತ್ತ ನಟಿಸುವ ಆಸಕ್ತಿಯಿಂದ ಬ್ಯಾಂಕ್‌ ಕೆಲಸಕ್ಕೆ ರಜೆ ಹಾಕಿ ಜನಾರ್ಧನ್‌ ಬೆಂಗಳೂರಿಗೆ ಬರುತ್ತಿದ್ದರು. ಬ್ಯಾಂಕ್‌ನಿಂದ ಹೆಚ್ಚು ರಜೆ ಪಡೆಯುತ್ತಿದ್ದ ಕಾರಣ, ಲಾಸ್‌ ಆಫ್ ಪೇ ಹೆಚ್ಚಾಗುತ್ತಿತ್ತು. ಪರಿಣಾಮ, ಅವರಿಗೆ ಬ್ಯಾಂಕ್‌ನಿಂದಲೂ ಹೆಚ್ಚು ಸಂಬಳ ಸಿಗುತ್ತಿರಲಿಲ್ಲ. ಸಿನಿಮಾಗಳಲ್ಲೂ ಹೆಚ್ಚು ಸಂಭಾವನೆ ದಕ್ಕುತ್ತಿರಲಿಲ್ಲ.

ಬೆಂಗಳೂರಿಗೆ ಟ್ರ್ಯಾನ್ಸ್‌ಫರ್‌

ಕಲಾಸೇವೆ ಮಾಡಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಬ್ರ್ಯಾಂಚ್‌ಗೆ 1981ರಲ್ಲಿ ಜನಾರ್ಧನ್‌ ಟ್ರ್ಯಾನ್ಸ್‌ಫರ್‌ ತೆಗೆದುಕೊಂಡರು. ಅಷ್ಟರಲ್ಲಿ ಜನಾರ್ಧನ್ ಅವರಿಗೆ ಮದುವೆಯಾಗಿತ್ತು. 3 ಹೆಣ್ಮಕ್ಕಳು, 1 ಗಂಡು ಮಗುವಿನ ತಂದೆಯಾಗಿದ್ದರು. ಸಂಸಾರದ ಜವಾಬ್ದಾರಿ ಹೆಗಲಮೇಲಿತ್ತು. ಸಿನಿಮಾರಂಗದಲ್ಲಿ ಉತ್ತಮ ಪಾತ್ರಗಳು ಸಿಗದೇ ಇದ್ದ ಕಾರಣ, ‘ಚಿತ್ರರಂಗದ ಸಹವಾಸವೇ ಬೇಡ’ ಎಂದು 6 ತಿಂಗಳ ಕಾಲ ಯಾವುದೇ ಸಿನಿಮಾಗಳನ್ನ ಬ್ಯಾಂಕ್ ಜನಾರ್ಧನ್‌ ಒಪ್ಪಿಕೊಳ್ಳಲಿಲ್ಲ. ಈ ಮಧ್ಯೆ ಹಿರಿಯೂರಿಗೂ ಟ್ರ್ಯಾನ್ಸ್‌ಫರ್‌ ಆದರು. ಜಯಲಕ್ಷ್ಮೀ ಬ್ಯಾಂಕ್‌.. ವಿಜಯ ಬ್ಯಾಂಕ್‌ನೊಂದಿಗೆ ವಿಲೀನವಾಯಿತು. ಬ್ಯಾಂಕ್ ಜನಾರ್ಧನ್ ಅವರಿಗೆ ಪ್ರಮೋಷನ್ ಸಿಕ್ಕಿತು. ಜವಾನನ ಕೆಲಸದಿಂದ ಆರಂಭಿಸಿ ಸ್ಪೆಷಲ್‌ ಅಸಿಸ್ಟೆಂಟ್‌ವರೆಗೂ ಅವರಿಗೆ ಪ್ರಮೋಷನ್ ಲಭಿಸಿತ್ತು. ಹಾಗ್ನೋಡಿದ್ರೆ, ಬ್ಯಾಂಕ್‌ನಲ್ಲಿ ಅವರು ಆಫೀಸರ್‌ ಸಹ ಆಗಬಹುದಿತ್ತು. ಆದರೆ, ಟ್ರ್ಯಾನ್ಸ್‌ಫರ್‌ ಆತಂಕದಿಂದ ಹಾಗೂ ನಟನೆಗೆ ಅಡ್ಡಿಯಾಗಬಹುದೆಂದು ಆಫೀಸರ್‌ ಪೋಸ್ಟ್‌ನ ನಿರಾಕರಿಸಿದರು.

ದೊಡ್ಡ ತಿರುವು ಕೊಟ್ಟಿದ್ದು ಕಾಶೀನಾಥ್

ಬ್ಯಾಂಕ್ ಜನಾರ್ಧನ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ್ದು ಕಾಶೀನಾಥ್‌. ‘ಅಜಗಜಾಂತರ’ ಚಿತ್ರದಲ್ಲಿನ ಬ್ರೋಕರ್‌ ಭೀಮಯ್ಯ ಪಾತ್ರವನ್ನ ಬ್ಯಾಂಕ್‌ ಜನಾರ್ಧನ್‌ಗೆ ಕಾಶೀನಾಥ್ ನೀಡಿದರು. ಅಲ್ಲಿಂದ ಬ್ಯಾಂಕ್ ಜನಾರ್ಧನ್‌ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆದರು. ಕಾಮಿಡಿ ಪಾತ್ರಗಳಿಗಾಗಿ ಬ್ಯಾಂಕ್ ಜನಾರ್ಧನ್‌ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು.

ಸಂಭಾವನೆ ಎಷ್ಟು?
ಮುಂಚೆ ಎಲ್ಲಾ ಒಂದು ಸಿನಿಮಾದಿಂದ ಬ್ಯಾಂಕ್ ಜನಾರ್ಧನ್‌ಗೆ 200-500 ರೂಪಾಯಿ ಸಂಭಾವನೆ ಸಿಕ್ಕರೆ ಹೆಚ್ಚಿತ್ತು. ‘ಅಜಗಜಾಂತರ’ ಚಿತ್ರಕ್ಕಾಗಿ ಬ್ಯಾಂಕ್ ಜನಾರ್ಧನ್‌ 45 ದಿನ ಕೆಲಸ ಮಾಡಿದ್ದರು. ಇದಕ್ಕಾಗಿ ಅವರಿಗೆ ಸಿಕ್ಕ ಸಂಭಾವನೆ 2000 ರೂಪಾಯಿ! ಇನ್ನೂ ‘ತರ್ಲೆ ನನ್ ಮಗ’ ಚಿತ್ರದಲ್ಲಿನ ನಟನೆಗಾಗಿ ಬ್ಯಾಂಕ್ ಜನಾರ್ಧನ್‌ 5000 ರೂಪಾಯಿ ಸಂಭಾವನೆ ಪಡೆದಿದ್ದರು. ಇನ್ನೂ ಬ್ಯಾಂಕ್‌ನಲ್ಲಿ 6500 ರೂಪಾಯಿಯವರೆಗೂ ಬ್ಯಾಂಕ್ ಜನಾರ್ಧನ್‌ಗೆ ಸಂಬಳ ಬರುತ್ತಿತ್ತು. ಆದರೆ, ವಿಪರೀತ ರಜೆ ಪಡೆಯುತ್ತಿದ್ದ ಕಾರಣ ಬ್ಯಾಂಕ್ ಸಂಬಳವೂ ಕೈಸೇರುತ್ತಿದ್ದು ಕಡಿಮೆ.

ಬ್ಯಾಂಕ್ ಬ್ಯಾಲೆನ್ಸ್ ಇಲ್ಲ!

ಬ್ಯಾಂಕ್ ಬ್ಯಾಲೆನ್ಸ್ ಇಲ್ಲ!

ಕನ್ನಡ, ತೆಲುಗು, ತಮಿಳು, ತುಳು ಭಾಷೆಯ ಚಿತ್ರಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಒಟ್ಟು 860 ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್‌ ಅಭಿನಯಿಸಿದ್ದಾರೆ. ‘’ಇಷ್ಟೊಂದು ಸಿನಿಮಾ ಮಾಡಿದರೂ ನನ್ನ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಯಾಕಂದ್ರೆ, ಆಗ ನಾನು ಸಂಭಾವನೆಯನ್ನ ಡಿಮ್ಯಾಂಡ್ ಮಾಡಲಿಲ್ಲ. ಎಷ್ಟು ಕೊಟ್ಟರೋ ಅಷ್ಟು ತೆಗೆದುಕೊಂಡೆ’’ ಎಂದು ಈ ಹಿಂದೆ ‘ಕಲಾಮಾಧ್ಯಮ’ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಬ್ಯಾಂಕ್ ಜನಾರ್ಧನ್‌ ತಿಳಿಸಿದ್ದರು.

ತೃಪ್ತಿ ಇಲ್ಲ!
860 ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಬ್ಯಾಂಕ್ ಜನಾರ್ಧನ್‌ಗೆ ತೃಪ್ತಿ ಇರಲಿಲ್ಲ. ಯಾಕಂದ್ರೆ, ಅವರಿಗೆ ಸಿಕ್ಕಿದ್ದೆಲ್ಲಾ ಹಾಸ್ಯ ಪಾತ್ರಗಳೇ. ಹಾಗ್ನೋಡಿದ್ರೆ, ವಿಲನ್ ಆಗಬೇಕು, ಸೆಂಟಿಮೆಂಟ್‌ ಪಾತ್ರ ಮಾಡಬೇಕು ಅಂತ ಅವರು ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ, ಆ ಅವಕಾಶವೇ ಅವರಿಗೆ ಸಿಗಲಿಲ್ಲ. ಹಾಸ್ಯ ಪಾತ್ರಕ್ಕೆ ಬ್ರ್ಯಾಂಡ್ ಆಗಿಬಿಟ್ಟಿದ್ದರು.

ಆಸರೆಯಾಗಿದ್ದು ಪೆನ್ಷನ್
2001ಗೆ ಬ್ಯಾಂಕ್ ಕೆಲಸದಿಂದ ಬ್ಯಾಂಕ್ ಜನಾರ್ಧನ್‌ ನಿವೃತ್ತಿ ಹೊಂದಿದರು. ಅವರ ಕೊನೆಗಾಲದಲ್ಲಿ ಅವರಿಗೆ ಆಸರೆಯಾಗಿದ್ದು ಬ್ಯಾಂಕ್‌ ಕೆಲಸದಿಂದ ಬಂದ ಪೆನ್ಷನ್‌ ಅಷ್ಟೇ. 3 ಬಾರಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಬ್ಯಾಂಕ್ ಜನಾರ್ಧನ್‌ ಇಂದು (ಏಪ್ರಿಲ್ 14) ಕೊನೆಯುಸಿರೆಳೆದಿದ್ದಾರೆ.

Source : Vijayakarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *