ಪಿಎಚ್​ಡಿ ಪಡೆದ ಬುಡಕಟ್ಟು ಸಮುದಾಯದ ಮೊದಲ ಯುವತಿ ಈ ಪಣಿಯನ್

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಿಂದ ಪಣಿಯನ್ ಬುಡಕಟ್ಟು ಸಮುದಾಯದ ಮೊದಲ ಯುವತಿ ಎಸ್.ಆರ್. ದಿವ್ಯ ಅವರು ಪಿಎಚ್​ಡಿ ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.

ಮೈಸೂರು: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ವಾಸಿಸುತ್ತಿರುವ ಪಣಿಯನ್ ಬುಡಕಟ್ಟಿನ ಸಮುದಾಯದ ಯುವತಿಯೊಬ್ಬರು ಮೊದಲ ಬಾರಿಗೆ ಡಾಕ್ಟರೇಟ್ ಪದವಿ ಪಡೆದು ಹಿರಿಮೆಗೆ ಪಾತ್ರರಾಗಿದ್ದಾರೆ.

ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಪಂ ವ್ಯಾಪ್ತಿಯ ಸೇಬಿನಕೊಲ್ಲಿ ಹಾಡಿ ಪ್ರದೇಶದಲ್ಲಿ ನೆಲೆಸಿರುವ ರಾಜು ಮತ್ತು ಲಕ್ಷ್ಮಿ ದಂಪತಿ ಪುತ್ರಿ ಎಸ್.ಆರ್. ದಿವ್ಯ ಅವರು ತಮ್ಮ ಸಮುದಾಯದಲ್ಲಿಯೇ ಪ್ರಥಮ ಬಾರಿಗೆ ಪಿಎಚ್‌ಡಿ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ. ಮೇತ್ರಿ ಅವರ ಮಾರ್ಗದರ್ಶನದಲ್ಲಿ ”ಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನ” ವಿಷಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ. ರಾಜು ಮತ್ತು ಲಕ್ಷ್ಮಿ ದಂಪತಿಗೆ, ದಿವ್ಯ, ದೀಬು ಹಾಗೂ ದೀಬ ಮೂರು ಮಕ್ಕಳಿದ್ದು, ಅರಣ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳ ನಡುವೆ ಇವರ ತಂದೆ ತಾಯಿ ಅಂದಿನ ದಿನಗಳಲ್ಲಿ 75 ರೂಪಾಯಿಗೆ ಕೂಲಿ ಕೆಲಸ ಮಾಡಿಕೊಂಡು ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು.

ಆರ್ಥಿಕ ಹೊರೆಯಿಂದ ದಿವ್ಯ ಅವರ ಸಹೋದರ ದೀಬು 10ನೇ, ಸಹೋದರಿ ದೀಬ 7ನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ತೆರಳಿದ್ದರು. 1ನೇ ತರಗತಿಯಿಂದ 9ನೇ ತರಗತಿಯವರಗೆ ಡಿ.ಬಿ. ಕುಪ್ಪೆಯಲ್ಲಿ ಶಿಕ್ಷಣ ಮುಗಿಸಿದ ದಿವ್ಯ, ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ, ದೀಪದ ಬೆಳಕಿನಲ್ಲಿಯೇ ಓದಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರೌಢಶಾಲೆ, ಪಿಯುಸಿ, ಪದವಿ ಶಿಕ್ಷಣವನ್ನು ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು ಮುಗಿಸಿದರು.

ಮೈಸೂರಿನ ಛಾಯಾದೇವಿ ಬಿಇಡಿ ಕಾಲೇಜಿನಲ್ಲಿ ಬಿಇಡಿ‌ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಎಂಎ ಪದವಿಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಬಳಿಕ ಅಲ್ಲಿಯೇ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಪಣಿಯನ್ ಸಮುದಾಯದಲ್ಲಿ ಮೊಟ್ಟ ಮೊದಲ ಬಾರಿ ಪಿಚ್​ಡಿ ಪದವಿ ಪಡೆದುಕೊಂಡ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ.

ದಿವ್ಯ ಅವರ ಸಾಧನೆ ಹಲವು ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಪಣಿಯನ್ ಬುಡಕಟ್ಟು ಕನಾಟಕ, ಕೇರಳ ಮತ್ತು ತಮಿಳುನಾಡಿನ ಅರಣ್ಯ ಗಡಿಭಾಗದಲ್ಲಿ ನೆಲೆಸಿದ್ದಾರೆ. ಇವರು ಉತ್ತರ ಕೇರಳದ ವಯನಾಡ್ ಜಿಲ್ಲೆಯ ಅತಿದೊಡ್ಡ ಸಂಖ್ಯೆಯಲ್ಲಿ ಕಂಡುಬರುವ ಬುಡಕಟ್ಟು ಸಮುದಾಯ. 2011ರ ಜನಗಣತಿ ಪ್ರಕಾರ ಕೇರಳದಲ್ಲಿ 88,450 ಹಾಗೂ ತಮಿಳುನಾಡಿನಲ್ಲಿ 10,134 ಮತ್ತು ಕರ್ನಾಟಕದಲ್ಲಿ 495 ಪಣಿಯನ್ನರು ಇದ್ದಾರೆ.

ಸಮುದಾಯದವರು ದ್ರಾವಿಡ ಭಾಷೆಯ ಉಪಭಾಷೆಯಾದ ಪಣಿಯನ್ ಭಾಷೆಯನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆ. ಎಚ್.ಡಿ. ಕೋಟೆ ತಾಲೂಕಿನ ದೊಡ್ಡ ಬೈರನಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೇಬಿನಕೊಲ್ಲಿ ಹಾಡಿ ಮತ್ತು ಆನೆಮಾಳದ ಹಾಡಿ, ಕೊಡಗು ಜಿಲ್ಲೆಯ ವೀರರಾಜಪೇಟೆ ತಾಲೂಕಿನ ಕುಟ್ಟ ಗ್ರಾಪಂ ವ್ಯಾಪ್ತಿಯ ದೇವರಕಾಡು, ಕಾಯಮಾನಿ, ಕೊಗ್ನಿಣಿ, ಮಂಚಳ್ಳಿ, ಸೇಬಿನಕೊಲ್ಲಿ ಪಂಚಾಯ್ತಿಗೆ ಒಳಪಡುವ ಚಂದನಕೆರೆ, ಕಳ್ಳಗಳ, ಗೋಣಿಕುಪ್ಪ ಪಂಚಾಯತ್ ವ್ಯಾಪ್ತಿಗೆ ಸೇರಿದ ಅಮ್ಮತಿ ಮತ್ತು ನಾಣ್ಚಿ, ಕುಶಾಲ ನಗರ ತಾಲೂಕು ವ್ಯಾಪ್ತಿಯ ಬಾಳೆಲೆ, ಮೂರುನಾಡು ಗ್ರಾಮಗಳಲ್ಲಿಯ ಸಮಗ್ರ ಪಣಿಯನ್ನರ ನೂರು ಕುಟುಂಬಗಳು ನೆಲೆಸಿವೆ.

ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಎಸ್.ಆರ್. ದಿವ್ಯ ಅವರು, ”ಪಿಎಚ್‌ಡಿ ಮುಗಿಸಿರುವುದು ತುಂಬ ಖುಷಿ ತಂದಿದೆ. ನನ್ನ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿಯಾಗಿದೆ. ನಮ್ಮ ಸಮುದಾಯದವರು ರಾಜಕೀಯ ಹಾಗೂ ಆರ್ಥಿಕವಾಗಿ ಇನ್ನೂ ಬಲಾಢ್ಯರಾಗಿಲ್ಲ. ನಾವು ಕೂಡ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಬೆಳೆಯಬೇಕು ಎಂದು ತಿಳಿಸಿದರು.

Source : https://m.dailyhunt.in/news/india/kannada/etvbhar9348944527258-epaper-etvbhkn/piech+di+padedha+budakattu+samudaayadha+modala+yuvati+ee+paniyan-newsid-n559618378?listname=newspaperLanding&topic=homenews&index=2&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *