ಈ ಬಾರಿ ಯಾವ ಮಳೆ ಹೇಗಿರಲಿದೆ?: ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಭವಿಷ್ಯವಾಣಿ ಹೀಗಿದೆ.

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುಷ್ಯ ಹಾಗು ಹಿಂಗಾರು ಮಳೆಗಳಾದ ಮಾಗಿ, ಉತ್ತರಿ, ಸ್ವಾತಿ ಸಂಪೂರ್ಣವಾಗಿ ಸುರಿಯಲಿವೆ ಎಂದು ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ಭವಿಷ್ಯವಾಣಿ ನುಡಿದಿದೆ.

ಈ ಭಾಗದ ಕೃಷಿಕರ ಮಠವೆಂದೇ ಖ್ಯಾತಿ ಪಡೆದಿರುವ ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಕಡುಬಿನ ಕಾಳಗ ಮಳೆ-ಬೆಳೆ ಭವಿಷ್ಯದಲ್ಲಿ ಈ ಸೂಚನೆ ದೊರೆತಿದೆ.

“ಈ ವರ್ಷದ ಮುಂಗಾರಿನಲ್ಲಿ ರೋಹಿಣಿ, ಆರಿದ್ರಾ, ಪುಷ್ಯ ಸಂಪೂರ್ಣ. ಮೃಗಶಿರ ಉತ್ತಮ. ಪುನರ್ವಸು ಸಾಧಾರಣ. ಹಿಂಗಾರಿನಲ್ಲಿ ಮಾಗಿ ಉತ್ತರಿ, ಸ್ವಾತಿ ಸಂಪೂರ್ಣ. ಹುಬ್ಬಿ ಉತ್ತಮ. ಚಿತ್ತಿ ಸಾಧಾರಣವಾಗಿ ಮಳೆ ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆತಿದೆ” ಎಂದು ಮಠಾಧೀಶರಾದ ಶ್ರೀ ಮೌನೇಶ್ವರ ಸ್ವಾಮಿ ಮಹಾಪುರುಷ ಅವರು ಭಕ್ತರಿಗೆ ತಿಳಿಸಿದರು.

ಪ್ರತಿವರ್ಷದಂತೆ ಹೊಸ ಮುರನಾಳದಲ್ಲಿ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆದಿದೆ.

ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚ ಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು.

ಗಂಗೆಯ ಪೂಜೆಗೆ ನಿರ್ಮಿಸಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು, ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬುತ್ತಾರೆ. ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಯ ಮೇಲೆ ಎರಡೆರಡು ಮಳೆಗಳ ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನ: ಮೆರವಣಿಗೆಯಲ್ಲಿ ರಥೋತ್ಸವ ಇರುವ ಸ್ಥಳಕ್ಕೆ ಬರುತ್ತಾ ರಥೋತ್ಸವವನ್ನು ಪ್ರದಕ್ಷಿಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸುತ್ತಾರೆ.

ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಸೋರಿಕೆ ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ.

Source : https://www.etvbharat.com/kn/!state/bagalkote-kadubina-kalaga-rain-crop-predict-karnataka-news-kas25031300590

Leave a Reply

Your email address will not be published. Required fields are marked *