SSLC Exam: ಕನ್ನಡ ಮಾಧ್ಯಮದಲ್ಲಿ ಓದಿರೋ ಸಾವಿರಾರು ವಿದ್ಯಾರ್ಥಿಗಳೇ ಕನ್ನಡ ವಿಷಯದಲ್ಲಿ ಫೇಲ್!

ಕೊಪ್ಪಳ, ಮೇ.15: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ(SSLC) ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಫಲಿತಾಂಶ ಗಣನೀಯವಾಗಿ ಇಳಿಕೆಯಾಗಿದೆ. ಅದರಲ್ಲೂ ಕೊಪ್ಪಳ(Koppala) ಜಿಲ್ಲೆಯಲ್ಲಿ ಶೇಕಡಾ 48 ಪ್ರತಿಶತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಫೇಲಾಗಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದೀಗ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟದ ಬಗ್ಗೆ ಅನುಮಾನ ಶುರುವಾಗಿದೆ. ಇದರ ಜೊತೆಗೆ ಅಚ್ಚರಿ ಎನ್ನುವಂತೆ ಕನ್ನಡ ಮಾಧ್ಯಮದಲ್ಲಿ ಓದಿರುವ ಸಾವಿರಾರು ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿಯೇ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಫೇಲಾಗಿರೋ ವಿದ್ಯಾರ್ಥಿಗಳಿಗೆ ಇಂದಿನಿಂದ ಮತ್ತೆ ಪರೀಕ್ಷೆಗೆ ತಯಾರಿ ಆರಂಭಿಸಲಾಗಿದೆ.

ಕನ್ನಡ ಮಾಧ್ಯಮ ಶಾಲೆಗಳ 48 ಶೇಕಡಾ ವಿದ್ಯಾರ್ಥಿಗಳು ಫೇಲ್

ಈ ಬಾರಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಗಣನೀಯವಾಗಿ ಏರುಪೇರಾಗಿದೆ‌. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಫಲಿತಾಂಶ ವಿದ್ಯಾರ್ಥಿಗಳ ಪೋಷಕರನ್ನ ಚಿಂತೆಗೀಡು ಮಾಡಿದೆ. ಹೌದು, ಕೊಪ್ಪಳ ಜಿಲ್ಲೆ ಕಳೆದ ಬಾರಿ ಫಲಿತಾಂಶದಲ್ಲಿ 16 ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದ್ರೆ, ಈ ಬಾರಿ ಪಲಿತಾಂಶ ಜಿಲ್ಲೆಯ ಶಿಕ್ಷಣ ಗುಣಮಟ್ಟವನ್ನ ಅನುಮಾನಿಸುವಂತಾಗಿದೆ‌. ಅದರಲ್ಲೂ ಕನ್ನಡ ಮಾದ್ಯಮ ಶಾಲೆಗಳ ಫಲಿತಾಂಶ ತೀರ ನಿಕೃಷ್ಟವಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಫಲಿತಾಂಶ ಕೇವಲ 52 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾದರೆ, 48 ಶೇಕಡಾ ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಇದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಮಾತೃಭಾಷೆಯಲ್ಲಿಯೇ ಫೇಲ್​ ಆದ ವಿದ್ಯಾರ್ಥಿಗಳು

ಇನ್ನೊಂದೆಡೆ ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳು ತಮ್ಮ ಪ್ರಥಮ ಭಾಷೆ ಪತ್ರಿಕೆಯಾದ ಕನ್ನಡದಲ್ಲಿಯೇ ಫೇಲಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 22,712 ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಆದ್ರೆ, ಈ ಪೈಕಿ ಬರೋಬ್ಬರಿ 8,173 ವಿದ್ಯಾರ್ಥಿಗಳು ಕನ್ನಡ ಭಾಷೆ ಪರೀಕ್ಷೆಯಲ್ಲಿಯೇ ಅನುತ್ತೀರ್ಣರಾಗಿದ್ದಾರೆ. ಇದು ಅಚ್ಚರಿಯಾದರೂ ಕೂಡ ಸತ್ಯ. ಹೌದು, ಕನ್ನಡ ಮಾಧ್ಯಮದಲ್ಲಿ ಓದಿದರೂ, ಕನ್ನಡ ಭಾಷೆಯಲ್ಲಿ ಪಾಸಿಂಗ್ ಮಾರ್ಕ್ಸ್ ಕೂಡ ಗಳಿಸದೇ ಇರೋದು ಎಲ್ಲರ ಅಚ್ಚರಿಗೆ ಕಾರಣವಾಗುತ್ತಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ.

ಫೇಲಾಗಿರುವ ವಿದ್ಯಾರ್ಥಿಗಳಿಗೆ ಕೋಚಿಂಗ್

ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನ ವೆಬ್ ಕಾಸ್ಟಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗಿದೆ‌ ಎನ್ನುವುದು ಒಂದು ಖುಷಿಯ ವಿಚಾರವಾದ್ರೆ, ಫಲಿತಾಂಶದ ಶೇಕಡಾವಾರು ನೋಡಿದ್ರೆ, ಆತಂಕವಂತೂ ಶುರುವಾಗಿದೆ. ಹೀಗಾಗಿ ಬಹುತೇಕ ಜಿಲ್ಲೆಗಳ ಫಲಿತಾಂಶ ಇಳಿಕೆಯಾಗಿದೆ‌. ಸದ್ಯ ಫೇಲಾಗಿರುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಕೋಚಿಂಗ್ ಶುರು ಮಾಡಿದ್ದಾರೆ.

ಈ ಬಾರಿ ಕೊಪ್ಪಳ ಜಿಲ್ಲೆಯ ಫಲಿತಾಂಶ ಅಷ್ಟೆ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಫಲಿತಾಂಶದಲ್ಲಿ ಏರುಪೇರಾಗಿದೆ. ಈ ಭಾರಿ ಸರ್ಕಾರ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆಗೆ ಅವಕಾಶ ನೀಡಿದ್ದು, ಎರಡನೇ ಬಾರಿ ಪರೀಕ್ಷೆ ಬರೆಯಲು ಇಚ್ಚಿಸುವ ಹಾಗೂ ಮೊದಲ ಬಾರಿ ಪರೀಕ್ಷೆ ಬರೆದು ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಭೋದನೆ ಆರಂಭ ಮಾಡಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿ ಪಾಠ ಕೇಳುವಂತೆ ಮನವಿ ಮಾಡಿದೆ. ಮೇ 15 ರಿಂದ ಮರಳಿ ತರಗತಿಗಳು ಪ್ರಾರಂಭವಾಗಿದ್ದು, ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗೆ ಕಳಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಫೇಲಾಗಿರೋ ವಿದ್ಯಾರ್ಥಿಗಳು ಈ ಬಾರಿಯಾದರೂ ಸರಿಯಾಗಿ ಪಾಠ ಕೇಳಿ ಉತ್ತಮ ಅಂಕಗಳನ್ನ ಗಳಿಸಲಿ ಎನ್ನುವುದು ನಮ್ಮೆಲ್ಲರ ಆಶಯ.

Source : https://tv9kannada.com/karnataka/koppal/sslc-exam-thousands-of-students-who-studied-in-kannada-medium-failed-in-kannada-subject-krn-832668.html

Leave a Reply

Your email address will not be published. Required fields are marked *