ಟ್ರ್ಯಾಕ್ಟರ್​ಗೆ ಬಸ್​ ಡಿಕ್ಕಿ; ಹುಲಿಗೆಮ್ಮ ದರ್ಶನ ಪಡೆದು ವಾಪಸ್ ಆಗ್ತಿದ್ದ ಮೂವರು ಭಕ್ತರು ಸಾವು.

ಕೊಪ್ಪಳ: ಅವರೆಲ್ಲಾ ದೇವರ ಹರಕೆಯನ್ನು (Temple) ಮುಗಿಸಿಕೊಂಡು ವಾಪಾಸ್‌ ಊರಿಗೆ ಟ್ರಾಕ್ಟರ್‌ನಲ್ಲಿ (Tractor) ಹೊರಟಿದ್ದರು. ಆದರೆ ಮೂವತ್ತು ಜನರಿದ್ದ ಆ ಟ್ರಾಕ್ಟರ್‌ಗೆ ಹಿಂಬದಿಯಿಂದ ಜವರಾಯನ ರೂಪದಲ್ಲಿ ಬಂದ ಬಸ್‌ (Bus) ಡಿಕ್ಕಿ ಹೊಡೆದು ನಾಲ್ವರ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಸುಮಾರು 18 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ (Hospital) ಸೇರಿದ್ದಾರೆ. ಈ ದುರ್ಘಟನೆ ನಡೆದಿರೋದು ಕೊಪ್ಪಳ (Koppal) ತಾಲೂಕಿನ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway).

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿಕ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪತ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ನಡೆದಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಟ್ರಾಕ್ಟರ್‌ಗೆ ಹಿಂದಿನಿಂದ ಬಂದ ಖಾಸಗಿ ಬಸ್‌ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸುಮಾರು 18ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಹಾಗೂ ಗಾಯಾಳುಗಳನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದವರು. ಕರಮುಡಿ ಗ್ರಾಮದ ಬಸವರಾಜ (22), ತೇಜಸ್ಸ್‌(22) ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಕೊಂಡಪ್ಪ (60) ಎಂಬುವವರು ಸ್ಥಳದಲ್ಲಿಯೇ ಅಸುನೀಗಿದರೆ, ಘಟನೆಯಲ್ಲಿ ಗಾಯಗೊಂಡಿದ್ದ ಕರಮುಡಿ ಗ್ರಾಮದ ದುರುಗವ್ವ ಹನುಮಪ್ಪ (65) ಎಂಬ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಕರಮುಡಿ ಗ್ರಾಮದ ಶಿವಪ್ಪ ಎಂಬುವವರು ತಮ್ಮ ಸಂಬಂಧಿಕರೊಡಗೂಡಿ ಗುರುವಾರ ಕರಮುಡಿ ಗ್ರಾಮದಿಂದ ಕೊಪ್ಪಳ ತಾಲೂಕಿನ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಟ್ರ್ಯಾಕ್ಟರ್‌ನಲ್ಲಿ ಬಂದಿದ್ದರು. ಹರಕೆ ಇದ್ದ ಕಾರಣ ಹರಕೆ ತೀರಿಸಲೆಂದು ಶಿವಪ್ಪ ಸಂಬಂಧಿಕರನ್ನು ಕರೆದುಕೊಂಡು ದೇವಸ್ಥಾನಕ್ಕೆ ಬಂದು ಶುಕ್ರವಾರ ಹರಕೆ ತೀರಿಸಿಕೊಂಡು ರಾತ್ರಿ ವಾಪಾಸ್‌ ಟ್ರಾಕ್ಟರ್‌ನಲ್ಲಿ ಊರಿಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹಿಂಬದಿಯಿಂದ ಬಂದ ಖಾಸಗಿ ಬಸ್‌ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಗಾಯಗೊಂಡಿದ್ದ 18 ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ 65 ವರ್ಷದ ದುರುಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಾಗೂ ಜಿಲ್ಲಾಸ್ಪತ್ರೆಗೆ ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸಪೇಟೆಯಿಂದ ಕೊಪ್ಪಳ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌, ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ ಪಾರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮೃತರ ಹಾಗೂ ಗಾಯಾಳುಗಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ದೇವಸ್ಥಾನಕ್ಕೆಂದು ಹೋದವರು ವಾಪಾಸ್‌ಮರಳಿ ಮನೆಗೆ ಬಾರದೆ ಮಸಣಕ್ಕೆ ಹಾಗೂ ಆಸ್ಪತ್ರೆಗೆ ಹೋಗುವಂತಾಗಿದ್ದು ವಿಧಿ ಎನ್ನದೆ ಬೇರೇನೂ ಅಲ್ಲ.

Source : https://kannada.news18.com/news/state/koppal-bus-collides-with-tractor-3-dead-and-18-seriously-injured-while-returning-village-from-temple-sns-1703790.html

Leave a Reply

Your email address will not be published. Required fields are marked *