ತಿಲಕ್ ವರ್ಮಾ ಶತಕ, ಅರ್ಶದೀಪ್ ಸೂಪರ್​ ಬೌಲಿಂಗ್! ಹರಿಣಗಳ ವಿರುದ್ಧ ಭಾರತಕ್ಕೆ 11 ರನ್​ಗಳ ರೋಚಕ ಜಯ.

ತಿಲಕ್ ವರ್ಮಾ ಅವರ ಅದ್ಭುತ ಶತಕ ಹಾಗೂ ಬೌಲರ್​ಗಳ ಅತ್ಯುತ್ತಮ ಬೌಲಿಂಗ್​ ನೆರವಿನಿಂದ ಟೀಮ್ ಇಂಡಿಯಾ 3ನೇ  ಟಿ20 ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಸೂರ್ಯಕುಮಾರ್ ಬಳಗ 220 ರನ್​ಗಳ ಬೃಹತ್ ಗುರಿ ನೀಡಿತ್ತು. ಬೃಹತ್​ ಮೊತ್ತ ಬೆನ್ನಟ್ಟಿದ ಅತಿಥೇಯ ತಂಡವನ್ನ ರನ್​ಗಳಿಗೆ ಕಟ್ಟಿ ಹಾಕುವ ಮೂಲಕ  11 ರನ್​ಗಳ ಜಯ ಸಾಧಿಸಿತು. ಈ ಮೂಲಕ 4 ಪಂದ್ಯಗಳ ಟಿ20 ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆದುಕೊಂಡಿತು.

ಭಾರತ ನೀಡಿದ್ದ 220ರನ್​ಗಳ ಗುರಿಯನ್ನ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪವರ್​ ಪ್ಲೇನಲ್ಲೇ 2 ವಿಕೆಟ್ ಕಳೆದುಕೊಂಡಿತು. ರ್ಯಾನ್ ರಿಕೆಲ್ಟನ್ (20) ಹಾಗೂ ರೀಜಾ ಹೆನ್ರಿಕ್ಸ್​ (21) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಪರಿವರ್ತಿಸುವುದಕ್ಕೆ ಭಾರತೀಯ ಬೌಲರ್​ಗಳು ಅವಕಾಶ ನೀಡಲಿಲ್ಲ. ಮೊದಲ ವಿಕೆಟ್ ಅರ್ಶದೀಪ್ ಪಡೆದರೆ 2ನೇ ವಿಕೆಟ್​ ವರುಣ್ ಚಕ್ರವರ್ತಿ ಪಡೆದರು. ನಂತರ ಅಕ್ಷರ್ ಪಟೇಲ್ ಕಳೆದ ಪಂದ್ಯದಲ್ಲಿ ಹೀರೋ ಆಗಿದ್ದ ಟ್ರಿಸ್ಟಾನ್ ಸ್ಟಬ್ಸ್​ (12)ರನ್ನ ಎಲ್​ಬಿ ಬಲೆಗೆ ಬೀಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ದೊಡ್ಡ ಗುರಿಯಾಗಿದ್ದರಿಂದ ಬಂದಂತಹ ಬ್ಯಾಟರ್​ಗಳೆಲ್ಲರೂ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದ್ದರು. ನಾಯಕ ಮಾರ್ಕ್ರಮ್​ 18 ಎಸೆತಗಳಲ್ಲಿ 29 ರನ್​ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ರಮಣ್​ದೀಪ್ ಸಿಂಗ್​ಗೆ ಕ್ಯಾಚ್ ನೀಡಿ ಪೆವಿಲಿಯನ್​ಗೆ ಮರಳಿದರು.

ಕ್ಲಾಸೆನ್ ಹೋರಾಟ ವ್ಯರ್ಥ

ಈ ಹಂತದಲ್ಲಿ ಒಂದಾದ ಡೇವಿಡ್ ಮಿಲ್ಲರ್ ಹಾಗೂ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ 5ನೇ ವಿಕೆಟ್​ಗೆ 56 ರನ್​ ಸೇರಿಸಿ ಭಾರತಕ್ಕೆ ಸೋಲಿನ ಭೀತಿ ಮೂಡಿಸಿದ್ದರು. ಆದರೆ ಅಪಾಯಕಾರಿಯಾಗುತ್ತಿದ್ದ ಡೇವಿಡ್ ಮಿಲರ್​ರನ್ನ(18) ಹಾರ್ದಿಕ್ ಪಾಂಡ್ಯ ಪೆವಿಲಿಯನ್​ಗಟ್ಟಿದರು. ತಮ್ಮ 2ನೇ ಸ್ಪೆಲ್ ಎಸೆಯಲು ಬಂದ ಅರ್ಶದೀಪ್ ಸಿಂಗ್ 22 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 44 ರನ್​ಗಳಿಸಿದ್ದ ಕ್ಲಾಸೆನ್​ ವಿಕೆಟ್ ಪಡೆದು ಪಂದ್ಯವನ್ನ ದಕ್ಷಿಣ ಆಫ್ರಿಕಾ ಕೈಯಿಂದ ಕಸಿದುಕೊಂಡರು.

ಸೋಲಿನ ಭೀತಿ ಉಂಟು ಮಾಡಿದ್ದ ಜಾನ್ಸನ್​

ಕ್ಲಾಸೆನ್ ಔಟಾಗುತ್ತಿದ್ಧಂತೆ ಭಾರತಕ್ಕೆ ಸುಲಭ ಗೆಲುವು ದಕ್ಕಬಹುದು ಎನ್ನಲಾಗಿತ್ತಾದರೂ ಮಾರ್ಕೊ ಜಾನ್ಸನ್​ ಸುಳ್ಳಾಗಿಸಿದರು. ಕೇವಲ 16 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅರ್ಧಶತಕ ಸಿಡಿಸಿದರು.   ಜಾನ್ಸನ್​ 19ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯಗೆ 26 ರನ್​ ಚಚ್ಚುವ ಮೂಲಕ ಭಾರತ ಪಾಳಯದಲ್ಲಿ ಸೋಲಿನ ಭೀತಿ ಉಂಟು ಮಾಡಿದ್ದರು. ಕೊನೆಯ ಓವರ್​ನಲ್ಲಿ ಹರಿಣಗಳಿಗೆ ಗೆಲ್ಲಲು 25 ರನ್​ಗಳ ಅವಶ್ಯಕತೆ ಇತ್ತು. ಅರ್ಶದೀಪ್​ ಸಿಂಗ್ ಓವರ್​ನ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಜಾನ್ಸನ್​ 3ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.  ನಂತರ 3 ಎಸೆತಗಳಲ್ಲಿ 6 ರನ್​ ಬಿಟ್ಟುಕೊಟ್ಟ ಅರ್ಶದೀಪ್ ಭಾರತಕ್ಕೆ 11 ರನ್​ಗಳ ಗೆಲುವು ತಂದುಕೊಟ್ಟಿದರು.

ಭಾರತದ ಪರ ಅರ್ಶದೀಪ್ ಸಿಂಗ್ 37ಕ್ಕೆ 3, ವರುಣ್ ಚಕ್ರವರ್ತಿ 54ಕ್ಕೆ 2, ಹಾರ್ದಿಕ್ ಪಾಂಡ್ಯ 50ಕ್ಕೆ1 ಹಾಗೂ ಅಕ್ಷರ್ ಪಟೇಲ್ 29ಕ್ಕೆ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್​ಗಳಿಸಿತ್ತು. 3ನೇ ಸ್ಥಾನಕ್ಕೆ ಬಡ್ತಿ ಪಡೆದು ಬಂದಿದ್ದ ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್​ಗಳ ಸಹಿತ 107ರನ್​ಗಳಿಸಿದರು. ಶೂನ್ಯಕ್ಕೆ 1 ವಿಕೆಟ್ ಪಡೆದುಕೊಂಡಿದ್ದ ಭಾರತಕ್ಕೆ ತಿಲಕ್​ ಹಾಗೂ ಅಭಿಷೇಕ್ ಶರ್ಮಾ (25 ಎಸೆತ 50 ರನ್, 3 ಬೌಂಡರಿ, 5 ಸಿಕ್ಸರ್) 2ನೇ ವಿಕೆಟ್​ಗೆ 107ರನ್​ಗಳ ಜೊತೆಯಾಟ ನೀಡಿದ ಭರ್ಜರಿ ಆರಂಭ ನೀಡಿದರು. ಶರ್ಮಾ ಔಟಾದರೂ ತಿಲಕ್​ ಕೊನೆಯವರೆಗೂ ಆಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 18, ಪದಾರ್ಪಣೆ ಮಾಡಿದ್ದ ರಮಣ್​ದೀಪ್ ಸಿಂಗ್ 6 ಎಸೆತಗಳಲ್ಲಿ 15 ರನ್ ಸಿಡಿಸಿದರು.  ಸಂಜು ಸ್ಯಾಮ್ಸನ್​ ಮತ್ತೊಮ್ಮೆ ಡಕ್ ಔಟ್ ಆದರೆ, ನಾಯಕ 1ರನ್, ರಿಂಕು ಸಿಂಗ್ 8 ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ದಕ್ಷಿಣ ಅಫ್ರಿಕಾ ಪರ ಕೇಶವ್ ಮಹಾರಾಜ್ 36ಕ್ಕೆ 2, ಆ್ಯಂಡಿಲೆ ಸಿಮೆಲೆನ್ 34ಕ್ಕೆ 2 ಹಾಗೂ ಮಾರ್ಕೊ ಜಾನ್ಸನ್​ 28ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಸರಣಿಯ 4ನೇ ಹಾಗೂ ಕೊನೆ ಟಿ20 ಪಂದ್ಯ ಶುಕ್ರವಾರ ಜೋಹನ್ಸ್​ಬರ್ಗ್​ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನ ಭಾರತ ಗೆದ್ದ 3-1ರಲ್ಲಿ ಸರಣಿ ತನ್ನದಾಗಿಸಿಕೊಳ್ಳಲಿದೆ. ದಕ್ಷಿಣ ಅಫ್ರಿಕಾ ಗೆದ್ದರೆ ಸರಣಿ ಸಮಬಲವಾಗಲಿದೆ. ಭಾರತ ಇಲ್ಲಿ 3 ಪಂದ್ಯಗಳ ಸರಣಿಯನ್ನ ಸೋತೇ ಇಲ್ಲ. ಇದಕ್ಕೂ ಮುನ್ನ 3 ಸರಣಿ ನಡೆದಿದ್ದು, ಒಂದರಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿದೆ.

Source : https://kannada.news18.com/news/sports/tilak-arshdeep-shines-india-beat-south-africa-by-11-runs-take-2-1-lead-in-four-match-series-mbr-1920234.html

Leave a Reply

Your email address will not be published. Required fields are marked *