ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು.

ಪ್ರತಿವರ್ಷ ಜೂನ್‌ ತಿಂಗಳ ಎಂಟನೇ ದಿನವನ್ನು (ಜೂನ್‌ 8) ವಿಶ್ವ ಬ್ರೇನ್‌ ಟ್ಯೂಮರ್‌ ಜಾಗೃತಿ ದಿನ (World Brain Tumor Day) ಎಂದು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮಹತ್ವವನ್ನು ಸಾರುವುದು ಈ ಜಾಗೃತಿ ದಿನದ ಉದ್ದೇಶ. ಎಲ್ಲಾ ವಯೋಮಾನದವರನ್ನೂ ಕಾಡುವ ಮೆದುಳಿನ ಟ್ಯೂಮರ್‌ಗಳು, ಕ್ಯಾನ್ಸರ್‌ಕಾರಕವಾಗದೆಯೂ ಬೆಳೆಯಬಲ್ಲಂಥವು. ಆದರೆ ಇದರ ಸೂಚನೆಗಳನ್ನು ಶೀಘ್ರ ಗುರುತಿಸುವುದು, ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಮುಖ್ಯವಾಗುತ್ತದೆ. ಮಸ್ತಿಷ್ಕದಲ್ಲಿ ಅಷ್ಟಾಗಿ ಸಕ್ರಿಯವಲ್ಲದ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡರೆ, ಹೆಚ್ಚಿನ ಲಕ್ಷಣಗಳು ಕಾಣಿಸುವಷ್ಟರಲ್ಲಿ ಗಡ್ಡೆಗಳು ಬಹಳಷ್ಟು ಬೆಳೆದಿರಬಹುದು. ಆದರೆ ಸಕ್ರಿಯ ಭಾಗಗಳಲ್ಲಿ ಗಂಟುಗಳು ಮೂಡಿದರೆ ಅಥವಾ ಅವು ಕ್ಯಾನ್ಸರ್‌ಕಾರಕ ಆಗಿದ್ದರೆ ಆಗ ಲಕ್ಷಣಗಳು ಶೀಘ್ರವೇ ಗೋಚರಿಸಲು ಸಾಧ್ಯವಿದೆ. ಜೊತೆಗೆ, ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಉಂಟಾಗಿದೆ ಎಂಬುದರ ಮೇಲೆ ಲಕ್ಷಣಗಳು ಕೊಂಚ ಭಿನ್ನವಾಗುವ ಸಾಧ್ಯತೆಯೂ ಇದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವಂಥ ಮೆಟಾಸ್ಟಾಟಿಕ್‌ ಬ್ರೇನ್‌ ಟ್ಯೂಮರ್‌ ಸಹ ಗಂಟು ಬೀಳಬಹುದು. ಈ ಎಲ್ಲವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಲಕ್ಷಣಗಳೇನು?

ಯಾವುದೇ ಅಸಹಜ ಬೆಳವಣಿಗೆಗಳು ತಲೆಯೊಳಗೆ ನಡೆದರೆ, ಅಲ್ಲಿ ಒತ್ತಡ ಹೆಚ್ಚುವುದು ಸಾಮಾನ್ಯ. ಹಾಗಾಗಿ ಸಣ್ಣ ಗಂಟಾದರೂ, ಮೊದಲಿಗೆ ಕಾಣಿಸಿಕೊಳ್ಳುವುದು ತಲೆನೋವು. ಇದರರ್ಥ ತಲೆನೋವು ಬಂದಾಕ್ಷಣ ಮೆದುಳಿಗೇನೋ ಆಗಿದೆ ಎಂದಲ್ಲ. ಸೌಮ್ಯವಾಗಿ ಪ್ರಾರಂಭವಾಗುವ ನೋವು ಕ್ರಮೇಣ ತೀಕ್ಷ್ಣವಾಗಬಹುದು. ಜೊತೆಗೆ ಹೊಟ್ಟೆ ತೊಳೆಸುವುದು, ವಾಂತಿ, ತಲೆ ಸುತ್ತುವುದು, ಸ್ಮೃತಿ ತಪ್ಪುವುದು, ಫಿಟ್ಸ್‌ ಬರುವುದು, ತನ್ನಷ್ಟಕ್ಕೇ ಕೈ-ಕಾಲುಗಳಲ್ಲಿ ಚಲನೆ, ದೇಹದ ಸಮತೋಲನ ತಪ್ಪುವುದು ನಡೆಯಲು ಕಷ್ಟವಾಗಿ ಬೀಳುವುದು, ಆಗಾಗ ಎಡವುವುದು ಇಂಥವು ಕಂಡರೆ ನರರೋಗ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಇವು ಮಾತ್ರವಲ್ಲ, ದೃಷ್ಟಿಗೆ ಇದ್ದಕ್ಕಿದ್ದಂತೆ ಬೆಳಕು ಗೋಚರಿಸುವುದು, ಎದುರಿನ ವಸ್ತು ಸರಿಯಾಗಿ ಗೋಚರಿಸದಿರುವುದು ಅಥವಾ ಒಂದಿದ್ದಿದ್ದು ಎರಡಾಗಿ ಕಾಣುವುದು ಸಹ ವೈದ್ಯರನ್ನು ಕಾಣಬೇಕು ಎಂಬುದರ ಸೂಚನೆಗಳು.

ಪರೀಕ್ಷೆಗಳೇನು?

ನರಗಳ ಕಾರ್ಯಚಟುವಟಿಕೆಯನ್ನು ಕುರಿತಂತೆ ವೈದ್ಯರು ಮೊದಲಿಗೆ ವಿವರವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಕಣ್ಣುಗಳ ಪರೀಕ್ಷೆಯನ್ನೂ ನಡೆಸುತ್ತಾರೆ. ತಲೆಯೊಳಗೆ ಒತ್ತಡ ಹೆಚ್ಚಿದರೆ ಅದು ಕಣ್ಣಿನ ನರಗಳ ಮೇಲೂ ಪರಿಣಾಮ ತೋರಿಸುತ್ತದೆ. ಈ ಪ್ರಾಥಮಿಕ ಪರೀಕ್ಷೆಗಳ ನಂತರ ಅಗತ್ಯ ಎನಿಸಿದರೆ ಹೆಚ್ಚಿನ ಪರೀಕ್ಷೆಗಳಿಗೆ, ಅಂದರೆ ಸ್ಕ್ಯಾನ್‌ ಅಥವಾ ಎಂಆರ್‌ಐಯಂಥ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

ಚಿಕಿತ್ಸೆ

ಕೆಲವು ಟ್ಯೂಮರ್‌ಗಳನ್ನು ಗುಣ ಮಾಡಬಹುದು. ಆದರೆ ಈ ಸಮಸ್ಯೆ ಎಷ್ಟು ಬೇಗ ಪತ್ತೆಯಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಬಹುದು. ಟ್ಯೂಮರ್‌ ಮೆದುಳಿನ ಯಾವ ಭಾಗದಲ್ಲಿದೆ, ಎಂಥಾ ಟ್ಯೂಮರ್‌, ಎಷ್ಟು ದೊಡ್ಡದಿದೆ ಮತ್ತು ಆ ವ್ಯಕ್ತಿಯ ಆರೋಗ್ಯ ಉಳಿದಂತೆ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ರೇಡಿಯೇಶನ್‌ ಚಿಕಿತ್ಸೆಗಳು ಬೇಕಾಗುತ್ತವೆ.

ನಿಮ್ಮ ಸಂಭವನೀಯ ಚಿಕಿತ್ಸೆಯ ಆಯ್ಕೆಗಳ ಪೈಕಿ:

  • ಗೆಡ್ಡೆಯನ್ನು ತೆಗೆದುಹಾಕಲು ಮೆದುಳಿನ ಶಸ್ತ್ರಚಿಕಿತ್ಸೆ (ಕ್ರಾನಿಯೊಟಮಿ / ಬಯಾಪ್ಸಿ).
  • ವಿಕಿರಣ ಚಿಕಿತ್ಸೆ: ಈ ರೀತಿಯ ಚಿಕಿತ್ಸೆಯಲ್ಲಿ, ಹೆಚ್ಚಿನ ಪ್ರಮಾಣದ ಎಕ್ಸ್-ಕಿರಣಗಳು ಮೆದುಳಿನ ಗೆಡ್ಡೆಯ ಕೋಶಗಳನ್ನು ಕೊಲ್ಲುತ್ತವೆ ಅಥವಾ ಗೆಡ್ಡೆಯನ್ನು ಕುಗ್ಗಿಸುತ್ತವೆ.
  • ರೇಡಿಯೊಸರ್ಜರಿ: ಈ ವಿಕಿರಣ ಚಿಕಿತ್ಸೆಯು ಗಾಮಾ ಅಥವಾ ಪ್ರೋಟಾನ್‌ನಂತಹ ಹೆಚ್ಚು ಕೇಂದ್ರೀಕೃತ ವಿಕಿರಣ ಕಿರಣಗಳೊಂದಿಗೆ ಗೆಡ್ಡೆಗಳನ್ನು ಗುರಿಯಾಗಿಸುತ್ತದೆ ಮತ್ತು ನಾಶಪಡಿಸುತ್ತದೆ.
  • ಕೀಮೋಥೆರಪಿ: ಈ ಚಿಕಿತ್ಸೆಯಲ್ಲಿ ಬಳಸಲಾಗುವ ಕ್ಯಾನ್ಸರ್ ವಿರೋಧಿ ಔಷಧಿಗಳು ಮೆದುಳು ಮತ್ತು ದೇಹದ ಇತರ ಭಾಗಗಳಲ್ಲಿನ ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತವೆ. ಶಸ್ತ್ರಚಿಕಿತ್ಸೆಯ ನಂತರ, ನಿಮ್ಮ ಆರೋಗ್ಯ ವೈದ್ಯರು ಯಾವುದೇ ಕ್ಯಾನ್ಸರ್ ಕೋಶಗಳನ್ನು ನಿರ್ಮೂಲನೆ ಮಾಡಲು ಕೀಮೋಥೆರಪಿಗೆ ಸಲಹೆ ನೀಡಬಹುದು ಅಥವಾ ಯಾವುದೇ ಗೆಡ್ಡೆಯ ಕೋಶಗಳ ಬೆಳವಣಿಗೆಯನ್ನು ತಡೆಯಬಹುದು.
  • ಇಮ್ಯುನೊಥೆರಪಿ: ಜೈವಿಕ ಚಿಕಿತ್ಸೆ ಎಂದೂ ಸಹ ಉಲ್ಲೇಖಿಸಲಾಗುತ್ತದೆ, ಇಮ್ಯುನೊಥೆರಪಿಯು ನಿಮ್ಮ ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸುವ ಕ್ಯಾನ್ಸರ್ ಚಿಕಿತ್ಸೆಯ ಒಂದು ರೂಪವಾಗಿದೆ.
  • ಉದ್ದೇಶಿತ ಚಿಕಿತ್ಸೆ: ಈ ವಿಧಾನದಲ್ಲಿ, ಔಷಧಿಗಳು ಆರೋಗ್ಯಕರ ಜೀವಕೋಶಗಳಿಗೆ ಅಪಾಯವನ್ನುಂಟು ಮಾಡದೆಯೇ ಕ್ಯಾನ್ಸರ್ ಕೋಶಗಳ ನಿರ್ದಿಷ್ಟ ಗುಣಲಕ್ಷಣಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ.

ಒಟ್ಟಾರೆಯಾಗಿ, ಮೆದುಳಿನ ಗೆಡ್ಡೆಗಳ ನಿರ್ವಹಣೆಗೆ ರೋಗಲಕ್ಷಣಗಳನ್ನು ನಿವಾರಿಸಲು, ಗೆಡ್ಡೆಯ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರತಿ ರೋಗಿಯ ವಿಶಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ಸಮಗ್ರ ಬಹುಶಿಸ್ತೀಯ ತಂಡದ ವಿಧಾನದ ಅಗತ್ಯವಿದೆ. ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯೊಂದಿಗೆ, ಮೆದುಳಿನ ಶಸ್ತ್ರಚಿಕಿತ್ಸೆಯು ತಜ್ಞರ ಕೈಯಲ್ಲಿ ಬಹಳ ಸುರಕ್ಷಿತವಾಗಿದೆ. ಚಿಕಿತ್ಸೆಯ ಫಲಿತಾಂಶವು ನಿಜವಾಗಿಯೂ ಒಳ್ಳೆಯದು, ವಿಶೇಷವಾಗಿ ರೋಗಿಗಳು ತಕ್ಷಣ ವೈದ್ಯಕೀಯ ಆರೈಕೆಯನ್ನು ಹುಡುಕಿದಾಗ.

ಹಾನಿ ತಡೆ

ತಲೆಯೊಳಗಿನ ಭಾಗದಲ್ಲಿ ಬೆಳೆಯುವ ಗಂಟುಗಳು ನರವ್ಯೂಹದ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ಹಾಕುತ್ತವೆ. ಇದರಿಂದ ಮೆದುಳಿನ ಕೆಲವು ಗುರುತರ ಭಾಗಗಳಿಗೆ ಅಥವಾ ನರಗಳಿಗೆ ಹಾನಿಯಾಗಬಹುದು. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಶಾಶ್ವತ ಹಾನಿಯಾಗುವ ಭೀತಿ ಇದೆ. ಪಾರ್ಶ್ವವಾಯು, ಮಾತಾಡಲು ಆಗದಿರುವುದು, ಬುದ್ಧಿ ಮಂದವಾಗುವುದು, ದೇಹದ ಸಮತೋಲನ ನಷ್ಟವಾಗುವುದು- ಇಂಥ ದೀರ್ಘಕಾಲೀನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಪ್ರಾರಂಭಿಕ ಲಕ್ಷಣಗಳು ಗೋಚರಿಸಿದಾಗಲೇ ಜಾಗ್ರತೆ ವಹಿಸುವುದು ಅತಿ ಮುಖ್ಯ.

Leave a Reply

Your email address will not be published. Required fields are marked *